ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಗಾತ್ರ ಹೆಚ್ಚಳ ಯುಪಿಎ ಅವಧಿಯಲ್ಲೇ ಹೆಚ್ಚು: ಅಶ್ವಿನ್‌ ಕುಮಾರ್ ರೈ

ಕಾಂಗ್ರೆಸ್‌ ಮುಖಂಡ ಅಶ್ವಿನ್‌ ಕುಮಾರ್ ರೈ ವಿಶ್ಲೇಷಣೆ
Published 16 ಏಪ್ರಿಲ್ 2024, 4:12 IST
Last Updated 16 ಏಪ್ರಿಲ್ 2024, 4:12 IST
ಅಕ್ಷರ ಗಾತ್ರ

ಮಂಗಳೂರು: ‘ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಹತ್ತು ವರ್ಷಕ್ಕಿಂತ  ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ  ಆಡಳಿತದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಗಾತ್ರದ ಹೆಚ್ಚಳವು ಅನೇಕ ಪಟ್ಟು ಹೆಚ್ಚು ಇತ್ತು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಚುನಾವಣಾ ವಾರ್ ರೂಂ ಅಧ್ಯಕ್ಷ ಅಶ್ವಿನ್ ಕುಮಾರ್‌ ರೈ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಯುಪಿಎ ಅಧಿಕಾರಕ್ಕೆ ಬಂದಾದ ದೇಶದ  ಜಿಡಿಪಿ ಗಾತ್ರ 721 ಬಿಲಿಯನ್ ಅಮೆರಿಕದ ಡಾಲರ್‌ಗಳಷ್ಟಿತ್ತು (ಇಂದಿನ ದರದ ಪ್ರಕಾರ ₹ 64.38 ಲಕ್ಷ ಕೋಟಿ). ಆದರೆ ಯುಪಿಎ ಅಧಿಕಾರದಿಂದ ಕೆಳಗಿಳಿದಾಗ ಜಿಡಿಪಿ ಗಾತ್ರ ಹತ್ತು ವರ್ಷಗಳಲ್ಲಿ 2.03 ಟ್ರಿಲಿಯನ್‌ ಡಾಲರ್‌ಗೆ (₹ 169.51 ಲಕ್ಷ ಕೋಟಿ) ಹೆಚ್ಚಳವಾಗಿತ್ತು. ಇದು ಶೇ 282 ಹೆಚ್ಚಳ. ಆದರೆ ಎನ್‌ಡಿಎ ಆಡಳಿತದಲ್ಲಿ ದೇಶದ ಜಿಡಿಪಿ ಗಾತ್ರ 3.6 ಟ್ರಿಲಿಯನ್‌ನಷ್ಟಾಗಿದೆ (₹ 300.67 ಲಕ್ಷ ಕೋಟಿ). ಇದು ಕೇವಲ ಶೇ 60 ರಷ್ಟು ಹೆಚ್ಚಳ’ ಎಂದು ವಿವರಿಸಿದರು.

‘ಮೋದಿ ಅವರು 5 ಟ್ರಿಲಿಯನ್‌ ಡಾಲರ್‌ (₹ 417.49 ಲಕ್ಷ ಕೋಟಿ) ಆರ್ಥಿಕತೆ ಬಗ್ಗೆ ಮಾತನಾಡುತ್ತಾರೆ. ಮುನ್ನಂದಾಜಿನ ಪ್ರಕಾರ ಈ ಗುರಿಯನ್ನು ಭಾರತ 2022ರಲ್ಲೇ ಸಾಧಿಸಬೇಕಾಗಿತ್ತು’ ಎಂದರು.

‘ಯುಪಿಎ ಆಡಳಿತಾವಧಿಯಲ್ಲಿ ಸರಕು ರಫ್ತು 528 ಪಟ್ಟು ಹೆಚ್ಚಳವಾಗಿತ್ತು. ಎನ್‌ಡಿಎ ಆಡಳಿತಾವಧಿಯಲ್ಲಿ ಇದು 124 ಪಟ್ಟು ಮಾತ್ರ ಹೆಚ್ಚಳ ಕಂಡಿದೆ. ಯುಪಿಎ ಅವಧಿಯಲ್ಲಿ ಸರಕು ರಫ್ತಿನ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್‌) ಶೇ 17.9ರಷ್ಟು ಇತ್ತು. ಆದರೆ  ಎನ್‌ಡಿಎ ಅವಧಿಯಲ್ಲಿ ಇದು ಶೇ 5.6 ಮಾತ್ರ ಇದೆ’ ಎಂದರು.

‘ಜಾಗತಿಕ ಆರ್ಥಿಕತೆಯಲ್ಲಿ ದೇಶವನ್ನು 10ರಿಂದ ಐದನೇ ಸ್ಥಾನಕ್ಕೆ ಏರಿದೆ ಸಿದ್ದೇವೆ. ಶೀಘ್ರವೇ ಮೂರನೇ ಸ್ಥಾನಕ್ಕೇರಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾವು ಹಿಂದಿಕ್ಕಿದ್ದು ಫ್ರಾನ್ಸ್, ಇಟಲಿ, ಬ್ರೆಜಿಲ್ ಹಾಗೂ ಇಂಗ್ಲೆಂಡ್‌ನಂತಹ ರಾಷ್ಟ್ರಗಳನ್ನು. ಅವುಗಳ ಜಿಡಿಪಿ ಗಾತ್ರ ನಮಗಿಂತ ತೀರಾ ಹೆಚ್ಚೇನೂ ಇರಲಿಲ್ಲ. ಆರ್ಥಿಕತೆಯಲ್ಲಿ ಪ್ರಸ್ತುತ ನಮಗಿಂತ ಮುಂದಿರುವುದು ಅಮೆರಿಕ, ಚೀನಾ, ಜರ್ಮನಿ ಮತ್ತು ಜಪಾನ್‌ ಮಾತ್ರ. 4.4 ಟ್ರಿಲಿಯನ್‌ ಡಾಲರ್‌  (₹ 367.44 ಲಕ್ಷ ಕೋಟಿ) ಜಿಡಿಪಿ ಗಾತ್ರವನ್ನು ಹೊಂದಿರುವ ಜಪಾನ್‌  ಮತ್ತು 4.9 ಟ್ರಿಲಿಯನ್‌ ಡಾಲರ್‌ ಜಿಡಿಪಿ ಗಾತ್ರವನ್ನು (₹ 409.10 ಲಕ್ಷ ಕೋಟಿ) ಹೊಂದಿರುವ ಜರ್ಮನಿಯ ಆರ್ಥಿಕ ಬೆಳವಣಿಗೆ ದರ ನಮಗಿಂತ ಕಡಿಮೆ ಇದೆ. ಹಾಗಾಗಿ ಈ ಎರಡು ದೇಶವನ್ನು ಹಿಂದಿಕ್ಕುವುದು ದೊಡ್ಡ ವಿಚಾರ ಅಲ್ಲ’ ಎಂದರು. 

‘ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಅಧಿಕಾರ ಉಳಿಸಿಕೊಳ್ಳಲು ದುರ್ಬಳಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ವಿರೋಧ ಪಕ್ಷಗಳಿಗೆ ಚುನಾವಣಾ ಬಾಂಡ್‌ನಡಿ ದೇಣಿಗೆ ನೀಡಿದ ಸಂಸ್ಥೆಗಳನ್ನು ಗುರಿಪಡಿಸಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಗಳಿಂದ ನೋಟಿಸ್‌ ನೀಡಲಾಗಿದೆ. ಭ್ರಷ್ಟಾಚಾರವನ್ನೇ ಕಾನೂನುಬದ್ಧಗೊಳಿಸಿದ ಪರಿ ಇದು’ ಎಂದರು.

‘ಯುಪಿಎ ಅವಧಿಯಲ್ಲಿ ಶೇ 35ರಷ್ಟಿದ್ದ ನಿರುದ್ಯೋಗ ಪ್ರಮಾಣ ಈಗ ಶೇ 70ಕ್ಕೆ ಹೆಚ್ಚಳವಾಗಿದೆ. ತಲಾ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಆದರೂ, ಜಿಎಸ್‌ಟಿ  ಹಂಚಿಕೆಯಲ್ಲೂ ರಾಜ್ಯಕ್ಕೆ ತಾರತಮ್ಯ ಮಾಡಲಾಗಿದೆ’ ಎಂದರು.

‘ಗಾಲ್ವಾನ್‌ನಲ್ಲಿ ಚೀನಾವು ಭಾರತದ ನೆಲವನ್ನು ಆಕ್ರಮಿಸಿದರೂ ಪ್ರತಿಕ್ರಿಯಿಸದ ಪ್ರಧಾನಿ ಮೋದಿ, ಐದು ದಶಕಗಳ ಹಿಂದೆ ಶ್ರೀಲಂಕಾಕ್ಕೆ ಕಚ್ಚಾತೀವು ದ್ವೀಪ ಹಸ್ತಾಂತರಿಸಿದ್ದ ರಾಜತಾಂತ್ರಿಕ ಒಪ್ಪಂದವನ್ನು ಚುನಾವಣೆಗೆ ದುರ್ಬಳಕೆ ಮಾಡಿಕೊಳ್ಳುವಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌, ಪಕ್ಷದ ಮುಖಂಡರಾದ  ಶಕುಂತಳಾ ಶೆಟ್ಟಿ, ಶುಭೋದಯ ಆಳ್ವ, ಟಿ.ಕೆ.ಸುಧೀರ್‌, ದುರ್ಗಾ ಪ್ರಸಾದ್ ನೀರಜ್‌ಪಾಲ್, ಶಬ್ಬಿರ್ ಎಸ್‌., ಮಹಮ್ಮದ್ ಮಳವೂರು, ಮೊಹಶೀರ್ ಸಾಮಣಿಗೆ, ನವೀನ್ ಡಿಸೋಜ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT