ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಪ್ಪನಾಡು– ಕೊಳ್ನಾಡು ನಡುವೆ ಅಪಘಾತ ಹೆಚ್ಚಳ

Published 22 ನವೆಂಬರ್ 2023, 5:56 IST
Last Updated 22 ನವೆಂಬರ್ 2023, 5:56 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಪ್ಪನಾಡು ದೇವಸ್ಥಾನದ ಬಳಿಯ ಶಾಂಭವಿ ನದಿಯ ಸೇತುವೆಯಿಂದ ಕೊಳ್ನಾಡು ಜಂಕ್ಷನ್‌ವರೆಗಿನ ಪ್ರದೇಶವು ಸ್ಥಳೀಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

‘ಕೊಳ್ನಾಡು ಜಂಕ್ಷನ್‌ನಿಂದ ಬಪ್ಪನಾಡು ದೇವಸ್ಥಾನದ ನಡುವೆ ಸುಮಾರು 1 ಕಿ.ಮೀಯಲ್ಲಿ ಹೆದ್ದಾರಿಯಲ್ಲಿ ಐದು ಅಪಾಯಕಾರಿ ವಲಯಗಳಿವೆ. ಇಲ್ಲಿ ಹೆದ್ದಾರಿಯನ್ನು ಅವೈಜ್ಞಾನಿಕ ರೀತಿಯಲ್ಲಿ ವಿಸ್ತರಿಸಲಾಗಿದ್ದು, ಬಳಿಕ ಇಲ್ಲಿ ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ಅಪಘಾತಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿವೆ’ ಎಂದು ಆರೋಪಿಸುತ್ತಾರೆ ಮುಲ್ಕಿಯ ಸಿವಿಲ್‌ ಎಂಜಿನಿಯರ್‌ಗಳ ಸಂಘದ (ಎಸಿಇಎಂ) ಅಧ್ಯಕ್ಷ ಜೀವನ್‌ ಕೆ.ಶೆಟ್ಟಿ.

ಈ ಹೆದ್ದಾರಿಯಲ್ಲಿ ಬಪ್ಪನಾಡು ಜಂಕ್ಷನ್‌ ಸಮೀಪ ಅಪಾಯಕಾರಿ ವಲಯ–1 ಎಂದು ಗುರುತಿಸಲಾಗಿದೆ. ಉಡುಪಿಯತ್ತ ಶರವೇಗದಲ್ಲಿ ಸಾಗುವ ವಾಹನಗಳು ಬಪ್ಪನಾಡು ದೇವಸ್ಥಾನದ ಕಡೆಯಿಂದ ಬಂದು ಹೆದ್ದಾರಿಯನ್ನು ಸೇರುವ ವಾಹನಗಳಿಗೆ ಢಿಕ್ಕಿ ಹೊಡೆದ ಉದಾಹರಣೆಗಳಿವೆ. ಇಲ್ಲಿ ಹೆದ್ದಾರಿ ದಾಟುವ ಪಾದಚಾರಿಗಳಿಗೂ ವಾಹನಗಳು ಡಿಕ್ಕಿ ಹೊಡೆದ ಘಟನೆಗಳು ಪದೇ ಪದೇ ಸಂಭವಿಸಿವೆ.

‘ಹೆದ್ದಾರಿಯಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕಡಿದಾಗಿದೆ. ಈ ರಸ್ತೆಯಲ್ಲಿ ಬರುವ ವಾಹನಗಳ ಚಾಲಕರಿಗೆ ಹೆದ್ದಾರಿಯಲ್ಲಿ ಬರುವ ವಾಹನಗಳ ವೇಗವನ್ನು ಅಂದಾಜಿಸುವುದಕ್ಕೇ ಆಗುವುದಿಲ್ಲ. ‌ವಿಜಯಾ ಕಾಲೇಜು ಕಡೆಯಿಂದ ಬಂದು ಹೆದ್ದಾರಿಯನ್ನು ಸೇರುವ ರಸ್ತೆಯಲ್ಲೂ ಅಪಘಾತಗಳು ಸಂಭವಿಸಿವೆ’ ಎಂದು ಜೀವನ್‌ ಕೆ.ಶೆಟ್ಟಿ ವಿವರಿಸಿದರು.

‘ಈ ಹೆದ್ದಾರಿಯಲ್ಲಿ ಮೂಲ್ಕಿ ಬಸ್‌ನಿಲ್ದಾಣದ ಎದುರಿನ ಪ್ರದೇಶವನ್ನು ಅಪಾಯಕಾರಿ ವಲಯ–2 ಎಂದು ಸ್ಥಳೀಯರು ಗುರುತಿಸಿದ್ದಾರೆ. ಇಲ್ಲೂ ಅನೇಕ ಅಪಘಾತಗಳು ಸಂಭವಿಸಿವೆ. ಇಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಅಪಘಾತ ತಡೆಯಲು ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೂ ಅಪಘಾತಗಳು ಮರುಕಳಿಸುತ್ತಲೇ ಇವೆ’ ಎಂದು ಶೆಟ್ಟಿ ತಿಳಿಸಿದರು.

ಕಾರ್ನಾಡು ಪೇಟೆಯನ್ನು ಸಂಪರ್ಕಿಸುವ ಜಂಕ್ಷನ್‌ ಬಳಿ ಹೆದ್ದಾರಿಯನ್ನು ಅಪಾಯಕಾರಿ ವಲಯ –3 ಎಂದು ಗುರುತಿಸಲಾಗಿದೆ.

‘ಈ ಜಂಕ್ಷನ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ನಮ್ಮ ಸಂಘಟನೆಯು ಮೂಲ್ಕಿ ಪಟ್ಟಣ ಪಂಚಾಯಿತಿಗೆ ಮನವಿಯನ್ನು ಸಲ್ಲಿಸಿದೆ. ಇಲ್ಲಿ ಅಪಘಾತ ಉಂಟಾಗದಂತೆ ತಡೆಯಲು ಮುಂದೆ ಯಾವ ರೀತಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಯಲು ಇದರಿಂದ ನೆರವಾಗಲಿದೆ’ ಎಂದು ಆಟೊರಿಕ್ಷಾ ಚಾಲಕ ಸೂರಜ್‌ ಹೇಳಿದರು.

ಕಾರ್ನಾಡು ಬೈಪಾಸ್‌– ದಾಮೋದರ ಮೂಲ್ಕಿ ರಸ್ತೆಯು ಹೆದ್ದಾರಿಯನ್ನು ಸೇರುವ ಪ್ರದೇಶವನ್ನು ಅಪಾಯಕಾರಿ ವಲಯ–4 ಎಂದು ಗುರುತಿಸಲಾಗಿದೆ. ಕೊಳ್ನಾಡು ಜಂಕ್ಷನ್‌ ಅನ್ನು ಅಪಾಯಕಾರಿ ವಲಯ 5 ಎಂದು ಗುರುತಿಸಲಾಗಿದೆ. ಇಲ್ಲಿ ಪ್ರತಿ ತಿಂಗಳೂ ಹೆಚ್ಚು ಕಡಿಮೆ ಆರು ಮಾರಣಾಂತಿಕ ಅಪಘಾತಗಳು ಸಂಭವಿಸುತ್ತಿವೆ‘ ಎಂದು ಕಾರ್ನಾಡ್‌ನ ಇಲ್ಯಾಸ್‌ ತಿಳಿಸಿದರು.  

‘ಅಪಘಾತ ತಪ್ಪಿಸಲು ಕೊಳ್ನಾಡು ಜಂಕ್ಷನ್‌ಗಿಂತ ಮುಂಚೆ  ನಾವು ಬ್ಯಾರಿಕೇಡ್‌ಗಳನ್ನು ಹೆದ್ದಾರಿಯ ಎರಡು ಮಾರ್ಗಗಳಲ್ಲಿ ದಿನದ ಹೊತ್ತು ಅಳವಡಿಸುತ್ತಿದ್ದೇವೆ. ಸಂಜೆಯ ಬಳಿಕ ಅದನ್ನು ತೆರವುಗೊಳಿಸುತ್ತೇವೆ. ಈ ಸ್ಥಳದಲ್ಲಿ ಹೈ–ಮಾಸ್ಟ್‌ ದೀಪ ಅಳವಡಿಸುವಂತೆ ಕೋರಿದ್ದೆವು. ನಮ್ಮ ಮನವಿಗೆ ಸ್ಪಂದನೆಯೇ ಸಿಕ್ಕಿಲ್ಲ’ ಎಂದು ಆಟೊ ಚಾಲಕರು ತಿಳಿಸಿದರು. 

’ಹೆದ್ದಾರಿಯಲ್ಲಿರುವ ಅಪಾಯಕಾರಿ ವಲಯ–1, 2, 3, ಮತ್ತು 5ರ ಬಳಿ ಅಪಘಾತಗಳನ್ನು ತಪ್ಪಿಸಲು ಆ ಸ್ಥಳಗಳಲ್ಲಿ ಕೆಳಸೇತುವೆಗಳನ್ನು ನಿರ್ಮಿಸುವುದು ಒಂದೇ ಪರಿಹಾರ.  ಮೂಲ್ಕಿ ಬಸ್‌ ಪ್ರಯಾಣಿಕರ ತಂಗುದಾಣದ ಬಳಿ ಕೊನೆಗೊಳ್ಳುವ ಸರ್ವೀಸ್‌ ರಸ್ತೆಯನ್ನು ಶಾಂಭವಿ ನದಿಯ ಸೇತುವೆವರೆಗೂ ಮುಂದುವರಿಸಬೇಕು. ಅಪಾಯಕಾರಿ ವಲಯ– 4ರ ಬಳಿ ರಸ್ತೆಯನ್ನು ವಿಸ್ತರಿಸಿದರೆ ಅಪಘಾತಗಳನ್ನು ತಪ್ಪಿಸಬಹುದು‘ ಎಂದು ಜೀವನ್‌ ಕೆ. ಶೆಟ್ಟಿ ಸಲಹೆ ನೀಡಿದರು. 

ಇಲ್ಲಿ ಅಪಘಾತ ತಪ್ಪಿಸಲು ಕೆಳಸೇತುವೆಗಳನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿಯವರಿಗೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಹಾಗೂ ಸಂಸದರಿಗೆ ಜೀವನ್‌ ಕೆ. ಶೆಟ್ಟಿ ಅವರು ಮನವಿ ಸಲ್ಲಿಸಿದ್ದರು. ಅದಕ್ಕೆ ಸ್ಪಂದನೆಯೇ ಸಿಕ್ಕಿರಲಿಲ್ಲ.  ಹಾಗಾಗಿ ಎಸಿಇಎಂನ ನಿಯೋಗವು ಅವರ ನೇತೃತ್ವದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ಮನವಿ ಸಲ್ಲಿಸಿತ್ತು. 

ಈ ಕುರಿತು ಪ್ರತಿಕ್ರಿಯೆ ಪಡೆಯಲು ಎನ್‌ಎಚ್‌ಎಐ ನಿರ್ದೇಶಕರಿಗೆ ಕರೆ ಮಾಡಲಾಯಿತು. ಆದರೆ, ಅವರು ಕರೆಯನ್ನು ಸ್ವೀಕರಿಸಲಿಲ್ಲ.

ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಬಪ್ಪನಾಡು ಜಂಕ್ಷನ್‌ ಬಳಿ ಅಪಾಯಕಾರಿ ವಲಯ–1 ಎಂದು ಗುರುತಿಸಿದ ಜಾಗ 
ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಬಪ್ಪನಾಡು ಜಂಕ್ಷನ್‌ ಬಳಿ ಅಪಾಯಕಾರಿ ವಲಯ–1 ಎಂದು ಗುರುತಿಸಿದ ಜಾಗ 
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಲ್ಕಿ ಪ್ರಯಾಣಿಕರ ತಂಗುದಾಣದ ಎದುರಿನ ಜಾಗವನ್ನು ಅಪಾಯಕಾರಿ ವಲಯ –2 ಎಂದು ಗುರುತಿಸಲಾಗಿದೆ.  ಇಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಪಾದಚಾರಿಗಳ ಸಾವಿಗೂ ಕಾರಣವಾಗಿವೆ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಲ್ಕಿ ಪ್ರಯಾಣಿಕರ ತಂಗುದಾಣದ ಎದುರಿನ ಜಾಗವನ್ನು ಅಪಾಯಕಾರಿ ವಲಯ –2 ಎಂದು ಗುರುತಿಸಲಾಗಿದೆ.  ಇಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಪಾದಚಾರಿಗಳ ಸಾವಿಗೂ ಕಾರಣವಾಗಿವೆ
ಇಲ್ಲಿ ಬೈಪಾಸ್‌ ನಿರ್ಮಿಸುವವರೆಗೆ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ವಾಹನಗಳು ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಸಾಗಬಾರದು ಎಂಬ ಸೂಚನಾಫಲಕಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು
- ಜೀವನ್‌ ಶೆಟ್ಟಿ , ಸಿವಿಲ್‌ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಮುಲ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT