ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟರಿ ಚಾಲಿತ ರಿಕ್ಷಾ ಸಮಸ್ಯೆ, ಸಚಿವರ ಜೊತೆ ಚರ್ಚೆ: ವೇದವ್ಯಾಸ ಕಾಮತ್‌

Last Updated 23 ಸೆಪ್ಟೆಂಬರ್ 2022, 14:34 IST
ಅಕ್ಷರ ಗಾತ್ರ

ಮಂಗಳೂರು: ಬ್ಯಾಟರಿ ಚಾಲಿತ ಆಟೊರಿಕ್ಷಾಗಳನ್ನು ಪ್ರಾದೇಶಿಕ ‌ಸಾರಿಗೆ ಪ್ರಾಧಿಕಾರದ ಚೌಕಟ್ಟಿನಲ್ಲಿ ತರುವ ಹಾಗೂ ಸುಪ್ರಿಂ ಕೋರ್ಟ್ ಆದೇಶದನ್ವಯ ಬಸ್, ಲಾರಿ ಮತ್ತು ಆಟೊ ರಿಕ್ಷಾದಂತಹ ವಾಹನಗಳಿಗೆ ಪ್ರತಿಫಲಕದ (ರಿಫ್ಲೆಕ್ಟರ್) ಸ್ಟಿಕ್ಕರ್ ಅಳವಡಿಸುವ ಕುರಿತು ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಶುಕ್ರವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಿರುವುದಾಗಿ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

‘ಬ್ಯಾಟರಿ ಚಾಲಿತ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಚೌಕಟ್ಟಿನೊಳಗೆ ತರದಿರುವ‌ ಕಾರಣ ನಗರದಲ್ಲಿ ಪೆಟ್ರೋಲಿಯಂ ಇಂಧನ ಚಾಲಿತ ರಿಕ್ಷಾಗಳ ಚಾಲಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ ಎಂದು ಸಾರಿಗೆ ಸಚಿವರ ಗಮನಕ್ಕೆ ತಂದಿದ್ದೇನೆ. ಇದನ್ನು ಪರಿಹರಿಸುವಂತೆ ಒತ್ತಾಯಿಸಿದ್ದೇನೆ’ ಎಂದು ಕಾಮತ್ ಹೇಳಿದ್ದಾರೆ.

‘ಈ ಸಮಸ್ಯೆಯನ್ನು ಬಗೆಹರಿಸುವ ಜವಬ್ದಾರಿ ನನ್ನದು. ಈ ವಿಚಾರದಲ್ಲಿ ಆಟೊರಿಕ್ಷಾ ಚಾಲಕರು ಆತಂಕಪಡುವ ಅಗತ್ಯವಿಲ್ಲ‘ ಎಂದು ಅವರು ಭರವಸೆ ನೀಡಿದ್ದಾರೆ.

‘ಸುಪ್ರೀಂ ಕೋರ್ಟ್ ಆದೇಶದಂತೆ ಬಸ್, ಲಾರಿ ಹಾಗೂ ಆಟೊರಿಕ್ಷಾ ಸೇರಿದಂತೆ ವಾಹನಗಳಿಗೆ ಪ್ರತಿಫಲಕ ಸ್ಟಿಕ್ಕರ್ ಅಳವಡಿಸು‌ವ ಕುರಿತೂ ಸಭೆಯಲ್ಲಿ ಚರ್ಚಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

‘ಮಂಗಳೂರು ನಗರ, ಸುರತ್ಕಲ್ ಮತ್ತು ಗುರುಪುರ ಹೋಬಳಿಗಳ ಆಟೊರಿಕ್ಷಾಗಳ ಮೀಟರ್‌ ಪ್ರಮಾಣಪತ್ರವನ್ನು ಈ ಹಿಂದಿನಂತೆ ಮಂಗಳೂರಿನಲ್ಲೇ ನೀಡುವ‌ ಕುರಿತೂ ಸಾರಿಗೆ ಸಚಿವರ ಗಮನ ಸೆಳೆದಿದ್ದೇನೆ. ಈ ಹಿಂದೆ ಮೀಟರ್‌ಗಳ ಪ್ರಮಾಣಪತ್ರವನ್ನು ಮಂಗಳೂರಿನ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮಾಪನಾ ನಿರೀಕ್ಷಣಾ ಕಚೇರಿಯಲ್ಲಿ ಮುದ್ರಿಸಿ ನೀಡಲಾಗುತಿತ್ತು. ಆದರೆ, ಈಚೆಗೆ ಸಿಬ್ಬಂದಿ ಕೊರತೆಯಿಂದ ಮೂಡುಬಿದಿರೆಯಲ್ಲಿ ಪ್ರಮಾಣಪತ್ರ ಪಡೆಯುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಟೊ ಚಾಲಕರಿಗೆ ಸಮಸ್ಯೆ ಉಂಟಾಗುತ್ತಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸಭೆಯಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಹೆಚ್ಚುವರಿ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್, ಆಯುಕ್ತ ಟಿ.ಎಚ್.ಎಂ ಕುಮಾರ್, ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಸುರೇಶ್ ನಾಯಕ್ ಇದ್ದರು‘ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT