ಉಜಿರೆ: ಕೋವಿಡ್–19 ಸಂಕಷ್ಟ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸಿದ ಬೆಳ್ತಂಗಡಿ ತಾಲ್ಲೂಕಿನ 250 ಆಶಾ ಕಾರ್ಯಕರ್ತೆಯರಿಗೆ ಶಾಸಕ ಹರೀಶ್ ಪೂಂಜ ನೇತೃತ್ವದ ‘ಶ್ರಮಿಕ ಸೇವಾ ಟ್ರಸ್ಟ್’ ವತಿಯಿಂದ ₹ 25 ಲಕ್ಷ ಮೌಲ್ಯದ ಮೊಬೈಲ್ ಫೋನ್‍ಗಳನ್ನು ಶನಿವಾರ ಉಜಿರೆಯಲ್ಲಿ ವಿತರಿಸಲಾಯಿತು.
ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕ ನೆಲೆಯಲ್ಲಿ ಮೊಬೈಲ್ ಫೋನ್ ನೀಡುವುದಾಗಿ ಶಾಸಕ ಹರೀಶ್ ಪೂಂಜ ಭರವಸೆ ನೀಡಿದ್ದರು. ಅದರಂತೆ ಈಗ ಈಡೇರಿಸಿದ್ದಾರೆ. ಇದಕ್ಕೆ ಉಜಿರೆಯ ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ರಾಜೇಶ್ ಪೈ ಮತ್ತು ಲಕ್ಷ್ಮೀ ಗ್ರೂಪ್ ಮಾಲೀಕ ಮೋಹನ್ ಕುಮಾರ್ ಹಾಗೂ ಸದಸ್ಯರು ಸಹಕಾರ ನೀಡಿದ್ದಾರೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮೊಬೈಲ್ ಫೋನ್ ವಿತರಿಸಿ, ‘ಇದು ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಈಗಾಗಲೇ 22 ಲಕ್ಷ ಕಾರ್ಮಿಕ ಕುಟುಂಬಗಳಿಗೆ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ವಿತರಿಸಿದ್ದು, ಎಲ್ಲಾ ಕಾರ್ಮಿಕರ ಬದುಕಿಗೆ ಭದ್ರತೆ ನೀಡುವುದಕ್ಕಾಗಿ ಮುಂದಿನ ಅಧಿವೇಶನದಲ್ಲಿ ವಿಶೇಷ ಕಾನೂನು ಮಂಡಿಸಲಾಗುವುದು’ ಎಂದು ಅವರು ಹೇಳಿದರು.