ಬುಧವಾರ, ಫೆಬ್ರವರಿ 24, 2021
23 °C
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಸಲ್ಲಿಕೆ

ಮಂಗಳೂರಿಗೆ ಬಂದಿದ್ದ ಕಾಡುಕೋಣ ಹೃದಯ ಸ್ತಂಭನದಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದಲ್ಲಿ ಮಂಗಳವಾರ ಸೆರೆ ಹಿಡಿದಿದ್ದ ಕಾಡುಕೋಣ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಅರಣ್ಯಕ್ಕೆ ಬಿಡುವ ವೇಳೆ ಹೃದಯ ಸ್ತಂಭನದಿಂದ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ.

ನಗರದ ಕುದ್ರೋಳಿ ಬಳಿ ಮಂಗಳವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದ ಕಾಡುಕೋಣವನ್ನು ಮಧ್ಯಾಹ್ನದ ವೇಳೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕೆ ನೀಡಿ ಸೆರೆ ಹಿಡಿದಿದ್ದರು. ಸಂಜೆ ಅದನ್ನು ಚಾರ್ಮಾಡಿ ಘಾಟಿಯಲ್ಲಿ ಅರಣ್ಯಕ್ಕೆ ಬಿಡಲಾಗಿತ್ತು. ಆ ಸಂದರ್ಭದಲ್ಲೇ ಕಾಡುಕೋಣ ಕುಸಿದುಬಿದ್ದು ಮೃತಪಟ್ಟಿತ್ತು. ಚಾರ್ಮಾಡಿ ಪಶುವೈದ್ಯ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದರು.

‘ಮೃತ ಕಾಡುಕೋಣದ ದೇಹದ ಯಾವುದೇ ಭಾಗದಲ್ಲೂ ಗಾಯಗಳು ಕಂಡುಬಂದಿಲ್ಲ. ಹೃದಯದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಸೆರೆಹಿಡಿಯುವ ವೇಳೆ ಜನರ ಗುಂಪು ಕಂಡು ಹೆದರಿದ್ದ ಪ್ರಾಣಿಗೆ ಅರಣ್ಯಕ್ಕೆ ಬಿಡುವ ಸಂದರ್ಭದಲ್ಲಿ ಆಘಾತದಿಂದ ಹೃದಯ ಸ್ತಂಭನ ಉಂಟಾಗಿರುವ ಸಾಧ್ಯತೆ ಇದೆ’ ಎಂದು ವೈದ್ಯರು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕಾರ್ಯಾಚರಣೆಯಲ್ಲಿ ಲೋಪವಾಗಿಲ್ಲ

ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಲೋಪ ಉಂಟಾಗಿದ್ದು, ಅರವಳಿಕೆಯ ಪ್ರಮಾಣ ಹೆಚ್ಚಾಗಿದ್ದರಿಂದಲೇ ಕಾಡುಕೋಣ ಮೃತಪಟ್ಟಿದೆ ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಆದರೆ, ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಕರಿಕಾಲನ್‌ ಈ ಆರೋಪವನ್ನು ಅಲ್ಲಗಳೆದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಕಾಡುಕೋಣ ಸೆರೆಹಿಡಿಯುವ ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ವನ್ಯಜೀವಿ ಆರೋಗ್ಯದ ವಿಷಯದಲ್ಲಿ ಪರಿಣತಿ ಹೊಂದಿರುವ ತಜ್ಞ ವೈದ್ಯರೇ ಅರವಳಿಕೆ ನೀಡಿದ್ದಾರೆ. ಅವರೇ ಅರವಳಿಕೆ ನೀಡಿದ್ದ ಚಿರತೆ ಸುರಕ್ಷಿತವಾಗಿ ಅರಣ್ಯ ಸೇರಿದೆ. ಕಾರ್ಯಾಚರಣೆಯಲ್ಲಿ ಲೋಪವಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ’ ಎಂದರು.

ಚಾರ್ಮಾಡಿಗೆ ತೆಗೆದುಕೊಂಡು ಹೋದ ಬಳಿಕವೂ ಕಾಡುಕೋಣ ಆರೋಗ್ಯವಾಗಿತ್ತು. ಎರಡು ಗಂಟೆಗಳ ಕಾಲ ಅಲ್ಲಿ ನಿಗಾದಲ್ಲಿ ಇಡಲಾಗಿತ್ತು. ನೀರು ಕುಡಿದು, ಸುಧಾರಿಸಿಕೊಂಡ ಬಳಿಕವೇ ಅರಣ್ಯಕ್ಕೆ ಬಿಡಲಾಗಿತ್ತು. ಮರಣೋತ್ತರ ಪರೀಕ್ಷೆಯ ಸಮಗ್ರ ವರದಿ ಬಂದ ಬಳಿಕವೇ ಸಾವಿನ ಕಾರಣ ತಿಳಿಯಲಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.