ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಭಾರತದ ಆರ್ಥಿಕತೆಯ ಖಳನಾಯಕ

ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಜೈವೀರ್‌ ಶೆರ್ಗಿಲ್‌ ಆರೋಪ
Last Updated 5 ನವೆಂಬರ್ 2019, 13:36 IST
ಅಕ್ಷರ ಗಾತ್ರ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಯಲ್ಲೂ ಕುಂಭಕರ್ಣ ನಿದ್ರೆ ಮುಂದುವರಿಸಿದ್ದು, ದೇಶದ ಆರ್ಥಿಕತೆ ಪ್ರಪಾತಕ್ಕೆ ಕುಸಿಯಲು ಕಾರಣವಾಗಿದೆ. ಈ ಸರ್ಕಾರ ಭಾರತದ ಆರ್ಥಿಕತೆಯ ಪಾಲಿನ ಖಳನಾಯಕ ಎಂದು ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಜೈವೀರ್‌ ಶೆರ್ಗಿಲ್‌ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಇನ್ನೂ ಪ್ರಚಾರ ಮತ್ತು ವಿಜಯೋತ್ಸವದ ಗುಂಗಿನಲ್ಲೇ ಇದೆ. ವ್ಯಾಪಾರ, ಸಣ್ಣ ಉಳಿತಾಯ ಪಾತಾಳಕ್ಕೆ ಕುಸಿಯುತ್ತಿವೆ. ಉದ್ಯೋಗ ನಷ್ಟ ತೀವ್ರವಾಗಿ ಏರುತ್ತಿದೆ. ಬ್ಯಾಂಕ್‌ ವಂಚನೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ. ವಂಚಕರು ವಿದೇಶಕ್ಕೆ ಪರಾರಿಯಾಗುತ್ತಿದ್ದಾರೆ. ಇದೆಲ್ಲವೂ ದೇಶಕ್ಕೆ ಬಿಜೆಪಿಯ ಕೊಡುಗೆ’ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಸಂಸ್ಥೆಗಳ ಅಧಿಕೃತ ಮಾಹಿತಿ ಪ್ರಕಾರವೇ ನಿರುದ್ಯೋಗದ ಪ್ರಮಾಣ 45 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣ ತಲುಪಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರುದ್ಯೋಗದ ಪ್ರಮಾಣ ಶೇಕಡ 4.95ರಷ್ಟಿದ್ದರೆ, ಭಾರತದಲ್ಲಿ ಶೇ 8.5 ತಲುಪಿದೆ. 18ರಿಂದ 23 ವರ್ಷ ವಯೋಮಾನದ ಯುವಜನರಲ್ಲಿ ಶೇ 74ರಷ್ಟು ಮಂದಿ ಉನ್ನತ ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ವಿತ್ತೀಯ ನಿರ್ವಹಣೆಯೇ ಗೊತ್ತಿಲ್ಲ. ಅವರು ವಿತ್ತೀಯ ‘ಮಿಸ್‌ ಮ್ಯಾನೇಜರ್‌’ ಪಾತ್ರ ನಿರ್ವಹಿಸುತ್ತಿದ್ದಾರೆ. ಹಣಕಾಸು ಸಚಿವೆಯ ಪತಿಯೇ ಪತ್ನಿಯ ಕಾರ್ಯವೈಖರಿಯನ್ನು ಟೀಕಿಸಿ ಲೇಖನ ಬರೆದದ್ದು ಜಗತ್ತಿನ ಇತಿಹಾಸದಲ್ಲಿ ಎಲ್ಲಿಯೂ ಸಿಗದು. ಹಣಕಾಸು ಸಚಿವೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಎನ್‌ಪಿಎ ₹ 8 ಲಕ್ಷ ಕೋಟಿ: ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ (ಎನ್‌ಪಿಎ) ಮೊತ್ತ ₹ 8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಐದು ವರ್ಷಗಳ ಅವಧಿಯಲ್ಲಿ 25,000 ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ನಡೆದಿವೆ. ₹ 1,74,255 ಕೋಟಿ ಮೊತ್ತದ ವಂಚನೆ ನಡೆದಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಧಿಕೃತವಾಗಿ ಪ್ರಕಟಿಸಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಕೇಂದ್ರ ಸರ್ಕಾರ ಆರ್‌ಬಿಐನಲ್ಲಿದ್ದ ₹ 2 ಲಕ್ಷ ಕೋಟಿಯನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.

ದೇಶದ ಹಣಕಾಸು ಪರಿಸ್ಥಿತಿ ಕುರಿತು ತಕ್ಷಣವೇ ಶ್ವೇತಪತ್ರ ಪ್ರಕಟಿಸಬೇಕು. ರಾಷ್ಟ್ರೀಯ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಆಗ್ರಹಿಸಿದರು.

ಕೆಟ್ಟ ಚಾಳಿಯ ಸರ್ಕಾರ: ದೇಶದ ಆರ್ಥಿಕ ಪರಿಸ್ಥಿತಿಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ, ಜನರ ವಾಟ್ಸ್‌ ಆ್ಯಪ್‌ ಮಾಹಿತಿಗೆ ಕನ್ನಹಾಕಿ ಗೂಢಚರ್ಯೆ ಮಾಡುವ ಕೆಟ್ಟ ಚಾಳಿ ಅನುಸರಿಸುತ್ತಿದೆ. ಜನತೆ ಇದಕ್ಕೆ ಸರಿಯಾದ ಉತ್ತರ ನೀಡಲು ಸಿದ್ಧರಾಗುತ್ತಿದ್ದಾರೆ. ಹರ್ಯಾಣ ಮತ್ತು ಮಹಾರಾಷ್ಟ್ರದ ಚುನಾವಣಾ ಫಲಿತಾಂಶಗಳು ಇದಕ್ಕೆ ಉದಾಹರಣೆ ಎಂದರು.

ಮಾಜಿ ಸಚಿವರಾದ ಬಿ.ರಮಾನಾಥ ರೈ, ಕೆ.ಅಭಯಚಂದ್ರ ಜೈನ್‌, ಶಾಸಕ ಯು.ಟಿ.ಖಾದರ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್, ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ, ಎಐಸಿಸಿ ಮಾಧ್ಯಮ ಸಂಯೋಜಕ ಸಂಜೀವ್‌ ಸಿಂಗ್‌, ಎಐಸಿಸಿ ಸಾಮಾಜಿಕ ಜಾಲತಾಣ ಸಂಯೋಜಕಿ ಲಾವಣ್ಯಾ ಬಲ್ಲಾಳ್‌, ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಿಥುನ್‌ ರೈ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT