ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಅಜಿಲ ಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ಶಿಲಾಮಯ ದೇಗುಲದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಇದೇ 19ರಿಂದ 27ರವರೆಗೆ ಜರಗಲಿದೆ.
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸೋಮವಾರ ಬಿಡುಗಡೆ ಮಾಡಿದರು. ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಎನ್. ಪುರುಷೋತ್ತಮ ರಾವ್, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಯಜ್ಞನಾರಾಯಣ ಭಟ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಬಿ.ಇ, ಸೋಮಯ್ಯ ಹನೈನಡೆ, ವೇಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್, ಕೆ.ಭಾಸ್ಕರ ಪೈ ಇದ್ದರು.
₹ 9 ಕೋಟಿ ವೆಚ್ಚದಲ್ಲಿ ನಡೆದ ಕಾಮಗಾರಿ: ವೇಣೂರು ಕ್ಷೇತ್ರ 1400 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಕ್ಷೇತ್ರವಾಗಿದ್ದು, 4 ರಾಜ್ಯ ಗುತ್ತು, 12 ಮಾಗಣೆ ಗುತ್ತಿಗೆ ಒಳಪಟ್ಟ 32 ಗ್ರಾಮ ವ್ಯಾಪ್ತಿಗೆ ಸಂಬಂಧಪಟ್ಟ ಸೀಮೆಯ ದೇವಾಲಯ.
2019ರ ಏಪ್ರಿಲ್‌ನಲ್ಲಿ ಶ್ರೀ ದೇವರು ಹಾಗೂ ಪರಿವಾರ ದೇವರುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ಜೀರ್ಣೋದ್ಧಾರ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಪುನರ್ನಿರ್ಮಾಣ ಕಾರ್ಯಗಳಿಗಾಗಿ
₹ 9 ಕೋಟಿ ಮೊತ್ತವೆಚ್ಚವಾಗಿದ್ದು ಗರ್ಭಗುಡಿ ಹಾಗೂ ಸುತ್ತುಪೌಳಿಗೆ ಸಂಪೂರ್ಣವಾಗಿ ತಾಮ್ರದ ಹೊದಿಕೆಯನ್ನು ಮಾಡಲಾಗಿದೆ. ಪ್ರತಿ ದಿನ ಭಜನೆ, ಸಂಜೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.