ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿವರ್ಷ ಒಕ್ಕೂಟಕ್ಕೆ ₹ 50 ಲಕ್ಷ ದೇಣಿಗೆ

ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಘೋಷಣೆ
Last Updated 25 ಡಿಸೆಂಬರ್ 2021, 4:05 IST
ಅಕ್ಷರ ಗಾತ್ರ

ಮಂಗಳೂರು: ‘ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಕಷ್ಟದಲ್ಲಿರುವವರ ಕಣ್ಣೊರೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಸಂಸ್ಥೆಯ ಸೇವಾ ಕೈಂಕರ್ಯದ ಬಗ್ಗೆ ತೃಪ್ತಿ ಇದೆ. ಹೀಗಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪ್ರತಿವರ್ಷ ₹ 50 ಲಕ್ಷ ದೇಣಿಗೆ ನೀಡುತ್ತೇನೆ’ ಎಂದು ಮುಂಬೈ ಹೇರಂಬ ಇಂಡಸ್ಟ್ರೀಸ್‍ನ ಅಧ್ಯಕ್ಷರಾಗಿರುವ ಒಕ್ಕೂಟದ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ತಿಳಿಸಿದರು.

ಬಂಟ್ಸ್ ಹಾಸ್ಟೆಲ್‍ನ ಅಮೃತ ಮಹೋತ್ಸವ ಕಟ್ಟಡದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಸ್ವಂತ ನೆಲೆ ಬೇಕು. ಹೀಗಾಗಿ ಜಾಗ ಖರೀದಿಸಿ ಕಟ್ಟಡ ನಿರ್ಮಿಸಬೇಕಾಗಿದೆ. ಆ ಮೂಲಕ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ದಾನಿಗಳ ನೆರವಿನ ಜತೆಗೆ ಆದಾಯದ ಕಡೆಗೆ ಹೆಚ್ಚು ಗಮನಹರಿಸಬೇಕಾಗಿದೆ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ‘ಸಮಾಜದ ವ್ಯಕ್ತಿಯಾಗಿ, ಶಕ್ತಿಯಾಗಿ ಕೆಲಸ ಮಾಡಲು ಎಲ್ಲರ ಸಹಕಾರಬೇಕು. ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಕಷ್ಟದಲ್ಲಿರುವ ಜನರಿಗೆ ನೀಡಲಾಗುತ್ತಿದೆ. ಈಗಾಗಲೇ ಸುಮಾರು ₹ 8 ಕೋಟಿ ಹಣವನ್ನು ಸಮುದಾಯದ ಮತ್ತು ಇತರ ಸಮುದಾಯದ ಜನರಿಗೂ ನೀಡಲಾಗಿದೆ. ಎಲ್ಲ ಸಮುದಾಯದವರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ’ ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ, ‘ನೈಜ ಫಲಾನುಭವಿಗಳಿಗೆ ಒಕ್ಕೂಟದಿಂದ ಧನಸಹಾಯ ವಿತರಣೆಯಾಗುತ್ತಿದೆ. ಯೋಜನೆಗಳು ಯಶಸ್ವಿಯಾಗಿ ತಳಮಟ್ಟದ ಕಟ್ಟ ಕಡೆಯ ವ್ಯಕ್ತಿಗೂ ತಲುಪುತ್ತಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ‘ಬಂಟರು ಸಮಾಜದ ಇತರ ಸಮುದಾಯದವರನ್ನು ಗುರುತಿಸಿ ಪ್ರೋತ್ಸಾಹಿಸಿದವರು’ ಎಂದರು. ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿದರು. ಪತ್ರಕರ್ತರಾದ ಭಾಸ್ಕರ್ ರೈ ಕಟ್ಟ, ಶರತ್ ಶೆಟ್ಟಿ ಕಿನ್ನಿಗೋಳಿ, ನವೀನ್ ಶೆಟ್ಟಿ ಎಡ್ಮೆಮಾರ್, ನಯನಾ ಶೆಟ್ಟಿ, ಲೀಲಾಕ್ಷ ಕರ್ಕೇರಾ, ಸ್ಫೂರ್ತಿ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಒಕ್ಕೂಟದ ಪೋಷಕ ಮುನಿಯಾಲು ಉದಯಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್‍ದಾಸ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲು, ಒಕ್ಕೂಟದ ಪೋಷಕರಾದ ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಇದ್ದರು, ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಅಡಪ ಸಂಕಬೈಲು ವಂದಿಸಿದರು. ಪಟ್ಲ ಸತೀಶ್ ಶೆಟ್ಟಿ ಪ್ರಾರ್ಥನೆ ಹಾಡಿದರು.

ಸಮಾಜ ಕಲ್ಯಾಣ ಯೋಜನೆಯಡಿ ಒಟ್ಟು 68 ಮಂದಿಗೆ ₹ 11 ಲಕ್ಷ ಮೊತ್ತದ ಪರಿಹಾರ ಧನದ ಚೆಕ್‍ನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಿತರಿಸಿದರು. ವೈದ್ಯಕೀಯ, ಮದುವೆ, ಶಿಕ್ಷಣ, ದತ್ತು ಸ್ವೀಕಾರ, ಮನೆ ರಿಪೇರಿ ಮತ್ತು ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಚೆಕ್‍ ಅನ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT