ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀರೂರು | 'ಮಾರಾಟ ಮಳಿಗೆ ಹರಾಜು ಪ್ರಕ್ರಿಯೆ ರದ್ದು'

ಸಂತೆ ಸುಂಕ ವಸೂಲಿ ₹3.87ಲಕ್ಷಕ್ಕೆ ಹರಾಜು
Published 7 ಮಾರ್ಚ್ 2024, 14:14 IST
Last Updated 7 ಮಾರ್ಚ್ 2024, 14:14 IST
ಅಕ್ಷರ ಗಾತ್ರ

ಬೀರೂರು: ಪುರಸಭೆಯ ಸಭಾಂಗಣದಲ್ಲಿ 2024-5ನೇ ಸಾಲಿನ ವಾರ್ಷಿಕ ಬಾಬುಗಳ ಹರಾಜು ಪ್ರಕ್ರಿಯೆ ಗುರುವಾರ ನಡೆದರೂ, ಖಾಸಗಿ ಬಸ್‍ನಿಲ್ದಾಣದ ಸುಂಕ ವಸೂಲಿ, ಸಂತೆ ಮೈದಾನದಲ್ಲಿನ ಮಾಂಸ ಮಾರಾಟ ಮಳಿಗೆ ಹರಾಜು ಪ್ರಕ್ರಿಯೆಗೆ ಬಿಡ್‍ದಾರರ ಆಕ್ಷೇಪ ವ್ಯಕ್ತವಾಗಿ ರದ್ದುಗೊಂಡಿತು.

ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ಉಪಸ್ಥಿತಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ವಾರದ ಸಂತೆ ಸುಂಕ ವಸೂಲಿಗೆ ಹರಾಜು ಪಡೆಯಲು 6 ಜನರು ಪೈಪೋಟಿ  ನಡೆಸಿದರು. ₹3.87ಲಕ್ಷಕ್ಕೆ ಬಿ.ಪಿ.ಪ್ರಕಾಶ್ ಎಂಬುವರು ಇದನ್ನು ಪಡೆದುಕೊಂಡರು. ನೆಲ ಬಾಡಿಗೆ ವಸೂಲಿ ಹಕ್ಕು ₹3.50ಲಕ್ಷಕ್ಕೆ ಕಡೂರಿನ ಕುಮಾರ್ ಎಂಬುವರ ಪಾಲಾಯಿತು.

ಖಾಸಗಿ ಬಸ್ ನಿಲ್ದಾಣದ ಸುಂಕ ವಸೂಲಿ ಹಕ್ಕು ₹86,500ಕ್ಕೆ ಕಳೆದ ಬಾರಿ ಬಿಡ್ ಆಗಿತ್ತು. ಈ ಬಾರಿ  ಒಬ್ಬರು ಮಾತ್ರ ಇಎಂಡಿ ಪಾವತಿಸಿದ್ದರಿಂದ ಹರಾಜು ಕೂಗುವವರಿಲ್ಲದೆ ಪ್ರಕ್ರಿಯೆ ಸ್ಥಗಿತಗೊಂಡಿತು. ಸಂತೆ ಮೈದಾನದ ಒಳಗಿರುವ ಮಾಂಸದ ಮಾರಾಟ ಮಳಿಗೆಗಳ ಬಿಡ್ ವಿಷಯದಲ್ಲಿ ಹಲವರ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ಅದನ್ನು ಮುಂದೂಡಲಾಯಿತು.

ಕಳೆದ ಬಾರಿ ₹4.36ಲಕ್ಷಕ್ಕೆ ಮಾಂಸ ಮಾರಾಟ ಮಳಿಗೆ ಹರಾಜು ನಡೆದಿತ್ತು ಎಂದು ಅಧಿಕಾರಿಗಳು ಪ್ರಕಟಿಸುತ್ತಿದ್ದಂತೆ,  ವಿಷಯ ಪ್ರಸ್ತಾಪಿಸಿದ ಬಿಡ್‍ದಾರ ಜಿಯಾವುಲ್ಲಾ ಕಳೆದ ಸಲ ನಾನು ₹4.11ಲಕ್ಷಕ್ಕೆ ಹರಾಜು ಪಡೆದಿದ್ದೆ. ಅಧಿಕಾರಿಗಳು ಮನಸ್ಸಿಗೆ ಬಂದಂತೆ ಪುಸ್ತಕದಲ್ಲಿ ಬರೆದುಕೊಂಡರೆ ಯಾರು ಜವಾಬ್ದಾರಿ? ಹಣ ಪಾವತಿಸಿರುವ ನಾನೇ ಇಲ್ಲಿರುವಾಗ ಬಿಡ್ ಮೊತ್ತ ಹೆಚ್ಚಿಸಿ ಪ್ರಕಟಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅಧಿಕಾರಿಗಳು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಈ ಹರಾಜು ಪಡೆಯಲು ನಾಲ್ವರು ಇಎಂಡಿ ಪಾವತಿಸಿದ್ದು, ಅದರಲ್ಲಿ ಒಬ್ಬರು ಪುರಸಭೆ ಸದಸ್ಯೆಯ ಪತಿಯಾಗಿದ್ದು ಅವರಿಗೆ ಹರಾಜಿನಲ್ಲಿ ಭಾಗವಹಿಸುವ ಅವಕಾಶವಿಲ್ಲ ಎಂದು ಕೈಬಿಡಲಾಯಿತು.

ಬಿಡ್‍ದಾರ ಪುನೀತ್ ಎಂಬುವರು ಆಕ್ಷೇಪ ವ್ಯಕ್ತಪಡಿಸಿ, ಹರಾಜು ನಡೆಸುವ ಮಳಿಗೆಗಳ ಬಿಡ್ ನಿಗದಿಯ ಮೊತ್ತವನ್ನು ಪುರಸಭೆ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಬೇಕು ಎನ್ನುವ ನಿಯಮವಿದೆ. ಆದರೆ ಅಧಿಕಾರಿಗಳು ಇದನ್ನು ಪಾಲಿಸುವುದಿಲ್ಲ. ಬಿಡ್‍ದಾರರು ಯಾವ ಆಧಾರದ ಮೇಲೆ ಹರಾಜು ಕೂಗಬೇಕು ಎಂದು ಪ್ರಶ್ನಿಸಿದರು. ಮಾಂಸ ಮಾರಾಟ ಮಳಿಗೆಯಲ್ಲಿ ಪಶುವೈದ್ಯರಿಂದ ಶಿಫಾರಸ್ಸಿಗೆ ಒಳಪಟ್ಟ ಪ್ರಾಣಿಯನ್ನು ಮಾತ್ರ ವಧಿಸಬೇಕು ಎನ್ನುವ ನಿಯಮವನ್ನು ಮಾಂಸ ಮಾರಾಟ ಮಾಡುವವರೂ ಪಾಲಿಸುವುದಿಲ್ಲ, ಅಧಿಕಾರಿಗಳು ಎಷ್ಟು ವೈದ್ಯಕೀಯ ಪ್ರಮಾಣಪತ್ರ ಪರಿಶೀಲಿಸಿದ್ದೀರಿ ಹೇಳಿ ಎಂದು ತರಾಟೆಗೆ ತೆಗೆದುಕೊಂಡರು.

ಬಿಡ್‍ದಾರ ಜಿಯಾವುಲ್ಲಾ ದರ ಹೆಚ್ಚಿಸುವುದಲ್ಲದೆ ಈ ಎಲ್ಲ ನಿಬಂಧನೆ ನಂಬಿಕೊಂಡರೆ ನಾವು ವ್ಯಾಪಾರ ನಡೆಸಿದಂತೆ ಎಂದು ಗೊಣಗಿ ಅಲ್ಲಿಂದ ತೆರಳಿದರು. ಮತ್ತೆ ಯಾರೂ ಬಿಡ್ ಮಾಡಲು ಮುಂದಾಗದ ಕಾರಣ ಮುಖ್ಯಾಧಿಕಾರಿ ಶಾಂತಲಾ ಹಿಂದಿನ ದರಕ್ಕಿಂತ ಹೆಚ್ಚು ಹಣ ಬಂದರೆ ಮಾತ್ರ ಹರಾಜು ಮುಂದುವರಿಯುವುದು, ಇಲ್ಲವಾದರೆ ಇಎಂಡಿ ಆಧಾರದಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರಕಟಿಸಿ ಸದಸ್ಯರ ಸಲಹೆ ಮೇರೆಗೆ ಪ್ರಕ್ರಿಯೆಯನ್ನು ಮುಂದೂಡಿದರು.

 ಪುರಸಭೆ ಸದಸ್ಯರಾದ ಬಿ.ಆರ್.ಮೋಹನಕುಮಾರ್, ಬಿ.ಕೆ.ಶಶಿಧರ್, ಎನ್.ಎಂ.ನಾಗರಾಜ್, ಎಸ್.ಎನ್.ರಾಜು, ಲೋಕೇಶಪ್ಪ, ಮುಖಂಡರಾದ ಸಂತೋಷ್‍ಕುಮಾರ್, ಮಧು ಬಾವಿಮನೆ, ಮುಬಾರಕ್, ವಿನಾಯಕ ಕೆ.ಎನ್, ಸತೀಶ, ಹರೀಶ್, ಬಿ.ಎಂ.ಮಲ್ಲಿಕಾರ್ಜುನ, ಮುರ್ಗಿ ಹರ್ಷ ಮತ್ತು ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

* ದರಪಟ್ಟಿ ಪ್ರಕಟಿಸದಿದ್ದಕ್ಕೆ ವಿರೋಧ * ಬಸ್ ನಿಲ್ದಾಣ ಸುಂಕವಸೂಲಿಗೆ ಬಿಡ್‍ದಾರರಿಲ್ಲ * ಮಾಂಸ ಮಾರಾಟ ಮಳಿಗೆಯಲ್ಲಿ ನಿಯಮ ಪಾಲಿಸಲ್ಲ-ಆಕ್ಷೇಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT