ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮುನ್ನೆಲೆಗೆ ಅಂಗಾರ ಹಿರಿತನ

ಸಂಪುಟ ವಿಸ್ತರಣೆಗಷ್ಟೇ ಸೀಮಿತ: ಕರಾವಳಿ ಶಾಸಕರಿಗಿಲ್ಲ ಸಚಿವ ಸ್ಥಾನ
Last Updated 2 ಆಗಸ್ಟ್ 2020, 7:42 IST
ಅಕ್ಷರ ಗಾತ್ರ

ಮಂಗಳೂರು: ಆಗಸ್ಟ್‌ನಲ್ಲಿ ಸಚಿವ ಸಂಪುಟದ ವಿಸ್ತರಣೆ ಬಹುತೇಕ ಖಚಿತವಾಗಿದೆ. ಈ ಮಧ್ಯೆ ಕರಾವಳಿಯ ಶಾಸಕರಿಗೆ ಮತ್ತೆ ನಿರಾಸೆಯಾಗುವ ಸಾಧ್ಯತೆ ಇದ್ದರೂ, ಶಾಸಕ ಎಸ್‌. ಅಂಗಾರ ಅವರ ಹಿರಿತನ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಮೂಲಕ ರಾಜ್ಯ ಘಟಕದ ಅಧ್ಯಕ್ಷರ ತವರು ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಒತ್ತಾಯವೂ ಜೋರಾಗಿದೆ.

ಸಚಿವ ಸಂಪುಟ ಪುನರ್‌ರಚನೆಯಾದಲ್ಲಿ, ಕೆಲ ಸಚಿವರ ರಾಜೀನಾಮೆ ಪಡೆದು, ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಈ ಬಾರಿ ಸಚಿವ ಸಂಪುಟ ವಿಸ್ತರಣೆಗಷ್ಟೇ ಸೀಮಿತವಾಗಲಿದೆ ಎನ್ನುವ ಮಾತನ್ನು ಸ್ವತಃ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಅವರೇ ಹೇಳಿದ್ದು, ಹೊಸ ಸಚಿವರ ಪಟ್ಟಿಯಲ್ಲಿ ಕರಾವಳಿಯ ಶಾಸಕರಿಗೆ ಸ್ಥಾನ ಸಿಗಲಿಕ್ಕಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

‘ಈ ಬಾರಿ ಸಚಿವ ಪುನಾರಚನೆ ಆಗುವ ಸಾಧ್ಯತೆ ಇಲ್ಲ. ಮೂರು ಸ್ಥಾನಗಳನ್ನು ಭರ್ತಿ ಮಾಡಲಷ್ಟೇ ಸಂಪುಟ ವಿಸ್ತರಣೆ ಸೀಮಿತವಾಗಲಿದೆ. ಸಂಪುಟ ವಿಸ್ತರಣೆ ಹಾಗೂ ಸುಳ್ಯ ಶಾಸಕ ಎಸ್‌. ಅಂಗಾರರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ವಿವೇಚನೆ ಬಿಟ್ಟಿದ್ದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಹೇಳಿದ್ದಾರೆ.

ಕಳೆದ ಬಾರಿ ಸಂಪುಟ ವಿಸ್ತರಣೆ ಮಾಡಿದಾಗಲೇ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು. 6 ನೇ ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಎಸ್‌. ಅಂಗಾರ, ಕರಾವಳಿ ಭಾಗದಲ್ಲಿಯೇ ಹಿರಿಯ ಶಾಸಕರಾಗಿದ್ದಾರೆ. ಹೀಗಾಗಿ ಈ ಬಾರಿಯಾದರೂ ಅವರಿಗೆ ಸಚಿವ ಸ್ಥಾನ ಸಿಗಲೇಬೇಕು ಎನ್ನುವ ಒತ್ತಾಯವನ್ನು ಸುಳ್ಯದ ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ.

ಕೇವಲ 3 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲಾಗುತ್ತಿದೆ ಎನ್ನುವುದನ್ನು ನಳಿನ್‌ ಅವರೇ ಸೂಚ್ಯವಾಗಿ ತಿಳಿಸಿದ್ದಾರೆ. ಎಂಟಿಬಿ ನಾಗರಾಜ್‌, ಆರ್‌. ಶಂಕರ್‌ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕೆ ಎಚ್‌. ವಿಶ್ವನಾಥರಿಗೋ ಇಲ್ಲವೇ ಎಸ್‌. ಅಂಗಾರ ಅವರಿಗೋ ಎನ್ನುವುದು ಚರ್ಚೆಗೆ ಕಾರಣವಾಗಿದೆ.

ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹ, ‘ಅಂಗಾರರು ಹಿರಿಯ ಶಾಸಕರು. ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿಲ್ಲವೆಂದಾದರೆ, ಸೂಕ್ತವಾದ ದೊಡ್ಡ ಮಟ್ಟದ ಗೌರವ ಸಿಗಬಹುದು. ಮಂತ್ರಿಮಂಡಲ ವಿಸ್ತರಣೆ, ಪುನರ್ ರಚನೆಯ ಕುರಿತು ಮುಖ್ಯಮಂತ್ರಿ ನಿರ್ಧರಿಸುತ್ತಾರೆ’ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.

ಹಾಲಾಡಿಗೆ ಈ ಬಾರಿಯೂ ನಿರಾಸೆ

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಈ ಬಾರಿಯೂ ಅವರ ಆಸೆ ಕೈಗೂಡುವ ಸಾಧ್ಯತೆ ಕಡಿಮೆಯಾಗಿದೆ.

ಸಂಪುಟ ವಿಸ್ತರಣೆಯಾದಲ್ಲಿ, ಈಗಿರುವ ಸಚಿವರು ಮುಂದುವರಿಯಲಿದ್ದಾರೆ. ಹಾಗಾಗಿ ಕೋಟ ಶ್ರೀನಿವಾಸ ಪೂಜಾರಿ ಅವರ ಸಚಿವ ಸ್ಥಾನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಸಿಗುವುದು ಸಾಧ್ಯವಿಲ್ಲ ಎನ್ನುವ ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT