ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯಾಧಿಕಾರಿಗೆ ನಿಂದನೆ, ಬೆದರಿಕೆ ಆರೋಪ: ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ

Published 18 ಅಕ್ಟೋಬರ್ 2023, 9:41 IST
Last Updated 18 ಅಕ್ಟೋಬರ್ 2023, 9:41 IST
ಅಕ್ಷರ ಗಾತ್ರ

ಉಜಿರೆ (ದಕ್ಷಿಣ ಕನ್ನಡ) : ಬೆಳ್ತಂಗಡಿ ತಾಲ್ಲೂಕಿನ ಕಳೆಂಜ ಗ್ರಾಮದ ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದ್ದಾರೆ ಎನ್ನಲಾದ ಜಾಗದಲ್ಲಿ ನಿರ್ಮಿಸಿದ್ದ ಮನೆ ತೆರವಿನ ವೇಳೆ ಉಪ್ಪಿನಂಗಡಿ ಅರಣ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಶಾಸಕ ಹರೀಶ್ ಪೂಂಜ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದೂರಿನಲ್ಲಿ ಏನಿದೆ?: 'ಕಳೆಂಜ ಗ್ರಾಮದ ಸರ್ವೇ ನಂಬ್ರ 309ರಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿ ಲೋಲಾಕ್ಷ ಗೌಡ ಅವರು ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಅ.9ರಂದು ಬೆಳಗ್ಗೆ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದೆವು. ಆಗ ಲೋಲಾಕ್ಷ ಗೌಡ ಅವರು ಮೀಸಲು ಅರಣ್ಯದಲ್ಲಿ ಮನೆಯ ತಳಪಾಯ ಹಾಕಿದ್ದು ಕಂಡುಬಂದಿತ್ತು. ಅದನ್ನು ತೆರವು ಮಾಡುವಂತೆ ಅವರಿಗೆ ಸೂಚಿಸಿದರೂ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ನಾವೇ ತೆರವುಗೊಳಿಸಲು ಮುಂದಾದೆವು. ಆಗ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದ ಶಾಸಕ ಹರೀಶ್ ಪೂಂಜ ತೆರವು ಕಾರ್ಯವನ್ನು ತಡೆದರು. ಅಲ್ಲದೇ, ನನ್ನನ್ನು ಉದ್ದೇಶಿಸಿ ‘ಲೋಫರ್‌ ನನ್ನ ಮಗ’ ಎಂದು ಅವಾಚ್ಯವಾಗಿ ನಿಂದಿಸಿದರು. ಅದನ್ನು ತೆರವುಗೊಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು‌. ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಾಸಕ ಹರೀಶ್ ಪೂಂಜ ಮತ್ತು ಅವರ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರು ಅ.13ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಕಾನೂನು ಸಲಹೆ ಪಡೆದ ಬಳಿಕ ದೂರು ನೀಡಿದ್ದೇನೆ. ಹಾಗಾಗಿ ದೂರು ನೀಡಲು ವಿಳಂಬವಾಗಿದೆ’ ಎಂದು ಜಯಪ್ರಕಾಶ್ ಕೆ.ಕೆ. ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ದೂರಿನ ಅನ್ವಯ ಶಾಸಕ ಹರೀಶ್ ಪೂಂಜ ವಿರುದ್ಧ ಅಕ್ರಮ ಕೂಟ ರಚನೆ, ಕರ್ತವ್ಯಕ್ಕೆ ಅಡ್ಡಿ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಏನು: ಕಳೆಂಜ ಗ್ರಾಮದ ಅಮ್ಮಿನಡ್ಕದಲ್ಲಿ ಲೋಲಾಕ್ಷ ಗೌಡ ಅವರು ಮನೆ ನಿರ್ಮಿಸಲು ಪಂಚಾಂಗ ಹಾಕಿದ್ದನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಅ.6ರಂದು ತೆರವುಗೊಳಿಸಿತ್ತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಅ.7ರಂದು ಸ್ಥಳೀಯರ ಸಹಕಾರದಲ್ಲಿ ತಾತ್ಕಾಲಿಕ ಮನೆಯನ್ನು ಕಟ್ಟಿಕೊಟ್ಟಿದ್ದರು. ಅರಣ್ಯ ಇಲಾಖೆ ಅದನ್ನೂ ತೆರವುಗೊಳಿಸಲು ಮುಂದಾಗಿತ್ತು. ಈ ವೇಳೆ ಹರೀಶ್‌ ಪೂಂಜ ಅವರು ಜಿಲ್ಲೆಯಲ್ಲಿ ಬಿಜೆಪಿಯಿಂದ ಗೆದ್ದ ಇತರ ಶಾಸಕರಾದ ರಾಜೇಶ್‌ ನಾಯ್ಕ್‌ ಉಳೆಪಾಡಿ, ಭಾಗಿರಥಿ ಮುರುಳ್ಯ, ಉಮಾನಾಥ ಕೋಟ್ಯಾನ್‌, ಭರತ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಜೊತೆ ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದರು. ಈ ವೇಳೆ ಹರೀಶ್ ಪೂಂಜಾ ಅವರು ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರ ವಿರುದ್ಧ ಅವಾಚ್ಯವಾಗಿ ನಿಂದಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

‘ದೂರಿನ ಪ್ರತಿಯನ್ನು ಅ. 13ರಂದೇ ನ್ಯಾಯಾಲಯಕ್ಕೆ ಕಳುಹಿಸಿದ್ದೇವೆ ಎಂದು ಧರ್ಮಸ್ಥಳ ಠಾಣೆಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ಜಾಗವು ಅರಣ್ಯ ಇಲಾಖೆಗೆ ಸಂಬಂಧಿಸಿದ್ದು ಹೌದೋ ಅಲ್ಲವೋ’ ಎಂದು ನಿರ್ಧರಿಸಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT