ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಒಇ ಮಾನ್ಯತೆ: ಪ್ರಸ್ತಾವ ಸಲ್ಲಿಕೆಗೆ ಸಿದ್ಧತೆ

ಆಯುಷ್ ಆಸ್ಪತ್ರೆಯಲ್ಲಿ ಗಂಟುನೋವು, ಅಸ್ತಮಾ ಚಿಕಿತ್ಸೆಗೆ ಮಾನ್ಯತೆ ಪಡೆಯುವ ಯೋಜನೆ
Published 3 ಜುಲೈ 2024, 6:43 IST
Last Updated 3 ಜುಲೈ 2024, 6:43 IST
ಅಕ್ಷರ ಗಾತ್ರ

ಮಂಗಳೂರು: ಆಯುರ್ವೇದ, ಜಲಚಿಕಿತ್ಸೆ, ಹೋಮಿಯೊಪತಿ, ಯುನಾನಿ ಪದ್ಧತಿಯ ಚಿಕಿತ್ಸೆ ನೀಡುತ್ತಿರುವ ನಗರದ ವೆನ್ಲಾಕ್ ಆಯುಷ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು, ಅಸ್ತಮಾ ಮತ್ತು ಗಂಟುನೋವಿನ ಚಿಕಿತ್ಸೆಗೆ ಸಂಬಂಧಿಸಿ, ಕೇಂದ್ರ ಸರ್ಕಾರದ ಸೆಂಟರ್‌ ಆಫ್ ಎಕ್ಸಲೆನ್ಸ್ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿರುವ ಆಯುರ್ವೇದ ಸೆಂಟರ್‌ನಲ್ಲಿ ನರರೋಗಕ್ಕೆ ವಿಶೇಷ ಚಿಕಿತ್ಸೆ ಲಭ್ಯವಿದೆ. ಈ ಕೇಂದ್ರಕ್ಕೆ ಕೇಂದ್ರ ಸರ್ಕಾರದ ಸೆಂಟರ್‌ ಆಫ್ ಎಕ್ಸಲೆನ್ಸ್ (ಸಿಒಇ) ಮಾನ್ಯತೆ ದೊರೆತಿದೆ. ಇದೇ ಮಾದರಿಯಲ್ಲಿ ಇಲ್ಲಿನ ಆಯುಷ್ ಆಸ್ಪತ್ರೆಯಲ್ಲಿ ನೀಡುವ ಗಂಟುನೋವು ಮತ್ತು ಅಸ್ತಮಾ ಚಿಕಿತ್ಸೆಗೆ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಿದ್ಧತೆಗಳು ಪ್ರಾರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗೆ ಆಯುರ್ವೇದ ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಗಂಟು ನೋವು ಮತ್ತು ಅಸ್ತಮಾ ಚಿಕಿತ್ಸೆ ಪಡೆದ ಹಲವರು ಗುಣಮುಖರಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಈ ಯಶಸ್ಸು ಸಿಒಇಗೆ ಪ್ರಸ್ತಾವ ಸಲ್ಲಿಸುವ ಯೋಜನೆಗೆ ಪ್ರೇರಣೆಯಾಗಿದೆ ಎನ್ನುತ್ತಾರೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್.

ನ್ಯಾಷನಲ್ ಎಕ್ರಿಡೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ ಆ್ಯಂಡ್ ಹೆಲ್ತ್‌ಕೇರ್ (ಎನ್‌ಎಬಿಎಚ್‌) ಮಾನ್ಯತೆಯನ್ನು ಪಡೆದ ನಂತರ ಸಿಒಇಗೆ ಪ್ರಸ್ತಾವ ಸಲ್ಲಿಸಲು ಸಾಧ್ಯವಾಗುತ್ತದೆ. ಎನ್‌ಎಬಿಎಚ್‌ ಮಾನ್ಯತೆ ಪಡೆಯಲು ಹಲವು ಮಾನದಂಡಗಳು ಇವೆ. ಆಸ್ಪತ್ರೆಯಲ್ಲಿ ಎಲ್ಲ ಮಾದರಿಯ ಚಿಕಿತ್ಸಾ ಪದ್ಧತಿಗಳು ಇದ್ದರೂ ಸಿಬ್ಬಂದಿ ಕೊರತೆ ಇದೆ. ಲಭ್ಯ ಮಾನವ ಸಂಪನ್ಮೂಲದ ಮಿತಿಯಲ್ಲಿ ಸದ್ಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯದಲ್ಲಿ ಸಿಬ್ಬಂದಿ ನೇಮಕಾತಿ ಸದ್ಯದಲ್ಲಿ ಆಗಲಿದ್ದು, ಈ ಕೊರತೆ ನೀಗಿದರೆ ಇನ್ನಷ್ಟು ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸೆಂಟರ್‌ ಆಫ್ ಎಕ್ಸಲೆನ್ಸ್ ಮಾನ್ಯತೆ ದೊರೆತರೆ, ಔಷಧ, ಮೂಲ ಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ದೊರೆಯುತ್ತದೆ. ಹೆಚ್ಚಿನ ಸಿಬ್ಬಂದಿ ನೇಮಕಾತಿ ಆಗುತ್ತದೆ ಎಂದು ವಿವರಿಸಿದರು.

ನಗರದಲ್ಲಿ ಸ್ಪೋರ್ಟ್ಸ್‌ ಮೆಡಿಸಿನ್ ಸೆಂಟರ್ ಆರಂಭಿಸುವ ಸಂಬಂಧ ಸರ್ಕಾರಕ್ಕೆ ₹10 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ದೊರೆತಿದ್ದು, ಚುನಾವಣೆ ನೀತಿ ಸಂಹಿತೆ ಇರುವ ಕಾರಣಕ್ಕೆ ವಿಳಂಬವಾಗಿದೆ. ಈ ಕೇಂದ್ರ ನಿರ್ಮಾಣಗೊಂಡರೆ ಇದು ದೇಶದಲ್ಲೇ ಮೊದಲ ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ಆಗಲಿದೆ. ಇದರಂತೆ ಕೇಂದ್ರ ಸರ್ಕಾರದ  ‘ಸುಪ್ರಜಾ’ ತಾಯಿ ಮತ್ತು ನವಜಾತ ಶಿಶುಗಳ ಮಧ್ಯಸ್ಥಿಕೆ ಯೋಜನೆಯು ರಾಜ್ಯದಲ್ಲಿ ಪ್ರಥಮವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರು ಆಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಶೀಘ್ರದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಈ ಎಲ್ಲ ಯೋಜನೆಗಳು ಜಾರಿಯಾದರೆ ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದು ಅವರು ಪ್ರತಿಕ್ರಿಯಿಸಿದರು.

2023–24ನೇ ಸಾಲಿನಲ್ಲಿ ಚಿಕಿತ್ಸೆ ಪಡೆದವರು (ಹೊರರೋಗಿ ವಿಭಾಗ) ಕಾಯಿಲೆ;ಪುರುಷರು;ಸ್ತ್ರೀಯರು;ಮಕ್ಕಳು;ಒಟ್ಟು ಅಸ್ತಮಾ;349;486;242;1077 ಗಂಟುನೋವು ಡಿಸ್ಕ್ ಸಮಸ್ಯೆ;2713;3518;07;6238

ಪ್ರತಿ ತಿಂಗಳು ಸರಾಸರಿ ಚಿಕಿತ್ಸೆ ಪಡೆಯುವವರು (ಹೊರರೋಗಿಗಳು) ಆಯುರ್ವೇದ;2000 ಯುನಾನಿ;1500 ಹೋಮಿಯೊಪತಿ;500 ನಿಸರ್ಗ ಚಿಕಿತ್ಸೆ;500

‘ಸಮಗ್ರ ಚಿಕಿತ್ಸೆಗೆ ಒತ್ತು’ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಯ ಆರೋಗ್ಯ ಸ್ಥಿತಿ ಪರೀಕ್ಷಿಸಿ ಚಿಕಿತ್ಸೆ ನೀಡಲಾಗುತ್ತದೆ. ಡಿಸ್ಕ್ ಸಮಸ್ಯೆ ಇರುವವರಿಗೆ ಒಳರೋಗಿಗಳಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಆಯುರ್ವೇದ ಔಷಧದ ಜೊತೆಗೆ ಅಗತ್ಯವಿದ್ದಲ್ಲಿ ಪಂಚಕರ್ಮ ಫಿಸಿಯೊಥೆರಪಿ ಜಲಚಿಕಿತ್ಸೆ ಹಿಜಾಮಾ ಯೋಗ ಹೀಗೆ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆಗಳನ್ನು ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನೀಡಿ ಗುಣಪಡಿಸಲಾಗುತ್ತದೆ. ಅಸ್ತಮಾ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ಮಾತ್ರ ನೀಡಲಾಗುತ್ತದೆ ಎಂದು ಆಯುರ್ವೇದ ವೈದ್ಯ ಡಾ. ಅಜಿತ್‌ನಾಥ್ ಇಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT