ಮಂಗಳವಾರ, ಸೆಪ್ಟೆಂಬರ್ 28, 2021
24 °C
ಕಾಲೇಜುಗಳಲ್ಲಿ ಪದವಿ ತರಗತಿ ಆರಂಭ: ವಿದ್ಯಾರ್ಥಿಗಳು, ಬೋಧಕರ ಉತ್ಸಾಹ

ಮಂಗಳೂರು: ವಿವಿ ಪರೀಕ್ಷೆಗೂ ಮುನ್ನ ಶುರುವಾದ ಕಾಲೇಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಾದ್ಯಂತ ಪದವಿ ತರಗತಿಗಳು ಆರಂಭವಾಗಿದ್ದು, ಮೂರು ತಿಂಗಳ ನಂತರ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಉತ್ಸಾಹದಿಂದಲೇ ತರಗತಿಗಳಿಗೆ ಹಾಜರಾದರು.

ಮಾಸ್ಕ್, ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್‌ ಮೂಲಕ ಆರೋಗ್ಯ ತಪಾಸಣೆ ಕಡ್ಡಾಯ ಮಾಡಲಾಗಿತ್ತು. ಮಂಗಳೂರು ವಿಶ್ವವಿದ್ಯಾಲಯವು ಆಗಸ್ಟ್‌ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಬೆಸ ಸಂಖ್ಯೆಯ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದ್ದು, ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಆಫ್‌ಲೈನ್‌ ತರಗತಿಗಳು ಅನುಕೂಲ ಮಾಡಿಕೊಟ್ಟಂತಾಗಿದೆ.

ಮೂರು, ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪುನರ್‌ ಮನನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಸ್ವಾಯತ್ತ ಕಾಲೇಜುಗಳೂ ತರಗತಿಗಳನ್ನು ಆರಂಭಿಸಿವೆ.

‘ಬೆಸ ಸಂಖ್ಯೆಯ ಸೆಮಿಸ್ಟರ್‌ನ ವಿದ್ಯಾರ್ಥಿಗಳ ಜೊತೆಗೆ ಆದಾಯ ತೆರಿಗೆ ಹಾಗೂ ಅಕೌಂಟನ್ಸಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿಜ್ಞಾನ ಪದವಿಯ ವಿದ್ಯಾರ್ಥಿಗಳಿಗೆ ಪ್ರಯೋಗ ತರಗತಿಗಳಿದ್ದು, ಅವರನ್ನು ಕಾಲೇಜಿನ ಕರೆಯಿಸಲಾಗಿದೆ’ ಎಂದು ನಗರದ ರಥಬೀದಿಯ ಪಿ. ದಯಾನಂದ ಪೈ–ಸತೀಶ್ ಪೈ ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ತಿಳಿಸಿದರು.

‘2, 4 ಹಾಗೂ 6 ನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಆಗಸ್ಟ್ 18 ರಿಂದ ಶೇ 50 ರಷ್ಟು ಸಾಮರ್ಥ್ಯದೊಂದಿಗೆ ತರಗತಿಗಳನ್ನು ಆರಂಭಿಸಲಾಗುವುದು. ಸೋಮವಾರ ಹಲವಾರು ವಿದ್ಯಾರ್ಥಿಗಳು ಪುನರ್‌ ಮನನ ತರಗತಿಗೆ ಹಾಜರಾಗಿದ್ದು, ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡಿದ್ದಾರೆ’ ಎಂದರು.

‘ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗೆ ಹಾಜರಾಗಿದ್ದರು. ಪ್ರಾಯೋಗಿಕ ತರಬೇತಿ ಇರುವವರು ಕಾಲೇಜಿಗೆ ಬರುತ್ತಿದ್ದಾರೆ. ದೂರದ ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳು ಇನ್ನಷ್ಟೇ ತರಗತಿಗಳಿಗೆ ಹಾಜರಾಗಬೇಕಿದೆ’ ಎಂದು ಸೇಂಟ್‌ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿಸ್ಟರ್ ಎಂ.ವೆನಿಸ್ಸಾ ತಿಳಿಸಿದರು.

‘ಸ್ನಾತಕೋತ್ತರ ಪದವಿಯ ಬಹುತೇಕ ವಿದ್ಯಾರ್ಥಿಗಳು ಊರುಗಳಿಂದ ಹಾಸ್ಟೆಲ್‌ಗಳಿಗೆ ಮರಳಿದ್ದಾರೆ. ಮೊದಲ ಮತ್ತು 3 ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಲು ರಜೆ ಕೇಳಿದ್ದಾರೆ. 2 ಮತ್ತು 4 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳು ಮುಂದುವರಿದಿವೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.

50 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ: ಕಾಲೇಜು ತರಗತಿ ಆರಂಭಕ್ಕೂ ಮುನ್ನ ಲಸಿಕೆ ಕಡ್ಡಾಯ ಮಾಡಲಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಲಸಿಕಾ ಶಿಬಿರ ನಡೆಸಲಾಗಿದೆ.

ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಸೇರಿದಂತೆ 62,577 ಜನರಿಗೆ 313 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದೆ. ಇದರಲ್ಲಿ 50,914 ವಿದ್ಯಾರ್ಥಿಗಳಿದ್ದು, 5,286 ಬೋಧಕರು ಹಾಗೂ 6,377 ಬೋಧಕೇತರ ಸಿಬ್ಬಂದಿ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದ ವಿದ್ಯಾರ್ಥಿಗಳು: ತೀವ್ರ ನಿಗಾ
ಜಿಲ್ಲೆಯಲ್ಲಿ ಕಾಲೇಜು ತರಗತಿಗಳು ಆರಂಭವಾಗಿದ್ದು, ಪಕ್ಕದ ಕೇರಳದ ವಿದ್ಯಾರ್ಥಿಗಳೂ ಇಲ್ಲಿನ ಕಾಲೇಜುಗಳಿಗೆ ಬರುತ್ತಿದ್ದಾರೆ. ಕೇರಳದಲ್ಲಿ ಪಾಸಿಟಿವಿಟಿ ದರ ಶೇ 13 ರಷ್ಟಿದ್ದು, ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಜಿಲ್ಲೆಗೆ ಬರುವವರ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಪರೀಕ್ಷೆಗಾಗಿ ಕೇರಳದಿಂದ ನಗರಕ್ಕೆ ಬಂದು ಹಾಸ್ಟೆಲ್‌ಗಳಲ್ಲಿ ಉಳಿದಿರುವ ವಿದ್ಯಾರ್ಥಿಗಳ ಪೈಕಿ ಕೆಲವರಲ್ಲಿ ಕೋವಿಡ್–19 ಕಂಡು ಬಂದಿದೆ. ಆದರೆ, ಗಡಿ ಭಾಗದ ತಪಾಸಣಾ ಕೇಂದ್ರಗಳಲ್ಲಿ ಬಹಳಷ್ಟು ಜನರ ವರದಿ ನೆಗೆಟಿವ್‌ ಇದೆ ಎಂದು ಜಿಲ್ಲಾ ಕೋವಿಡ್‌ ನೋಡೆಲ್‌ ಅಧಿಕಾರಿ ಡಾ.ಅಶೋಕ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 30ಕ್ಕೂ ಅಧಿಕ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜುಗಳಿದ್ದು, ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಕೇರಳದವರಾಗಿದ್ದಾರೆ. ವೈದ್ಯಕೀಯ, ಎಂಜಿನಿಯರಿಮಗ್ ಹಾಗೂ ಇತರ ಕಾಲೇಜುಗಳಲ್ಲೂ ಕೇರಳ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.