ಗುರುವಾರ , ಜುಲೈ 29, 2021
23 °C
ಆಸ್ಪತ್ರೆಗೆ ದಾಖಲಿಸುವುದು, ಅಂತ್ಯಸಂಸ್ಕಾರಕ್ಕೆ ನೆರವು

ಸ್ವಯಂಸೇವಕರ ನಿಯೋಜನೆಗೆ ಮುಂದಾದ ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದಲ್ಲಿ ಕೋವಿಡ್‌–19 ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು ಮತ್ತು ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ವಿಚಾರದಲ್ಲಿ ಸಮಸ್ಯೆ ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಸ್ವಯಂಸೇವಕರ ತಂಡಗಳನ್ನು ನಿಯೋಜಿಸಲಾಗುವುದು ಎಂದು ಶಾಸಕ ಯು.ಟಿ.ಖಾದರ್‌ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ವಿವಿಧೆಡೆ ಕೋವಿಡ್‌ ಸೋಂಕಿತರು ಮೃತಪಟ್ಟಾಗ ಅಮಾನವೀಯ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಮಂಗಳೂರಿನಲ್ಲಿ ಅಂತಹ ಘಟನೆಗಳನ್ನು ತಪ್ಪಿಸಲು ಪಕ್ಷದ ವತಿಯಿಂದ ಸ್ವಯಂಸೇವಕರನ್ನು ನಿಯೋಜಿಸಲಾಗುವುದು’ ಎಂದರು.

ಶನಿವಾರ ಸೋಂಕಿತರೊಬ್ಬರು ಗಂಟೆಗಟ್ಟಲೆ ಕಾದರೂ ಆಸ್ಪತ್ರೆಗೆ ಕರೆದೊಯ್ಯುವವರು ಇರಲಿಲ್ಲ. ಬಳಿಕ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್‌ ಪರೀಕ್ಷಾ ವರದಿ ಮತ್ತು ಸೋಂಕು ತಗುಲದೇ ಇರುವುದನ್ನು ದೃಢಪಡಿಸುವ ಪ್ರಮಾಣಪತ್ರ ನೀಡಲು ಜಿಲ್ಲಾಡಳಿತ ಏಕಗವಾಕ್ಷಿ ವ್ಯವಸ್ಥೆಯೊಂದನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ ಮಾತನಾಡಿ, ‘ಸ್ವಯಂಸೇವಕರನ್ನು ನಿಯೋಜಿಸುವ ಪ್ರಸ್ತಾವಕ್ಕೆ ಪಕ್ಷದ ಕಾರ್ಯಕರ್ತರಿಂದ ಉತ್ತಮ ಸ್ಪಂದನೆ ದೊರಕಿದೆ. ಪ್ರತಿ ಐದು ವಾರ್ಡ್‌ಗಳಿಗೆ ತಲಾ ಆರು ಜನರ ಒಂದು ತಂಡವನ್ನು ನಿಯೋಜಿಸಲಾಗುವುದು’ ಎಂದರು.

ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ವಿಚಾರದಲ್ಲಿ ಜಿಲ್ಲಾಡಳಿತದಲ್ಲಿ ಸಮನ್ವಯ ಇಲ್ಲ. ಶುಕ್ರವಾರ ಒಂದೇ ಕುಟುಂಬದ ಆರು ಜನರನ್ನು ಆಸ್ಪತ್ರೆಗೆ ದಾಖಲಿಸುವ ಮೊದಲು ಮೂರು ಗಂಟೆಗಳ ಕಾಲ ಆಂಬುಲೆನ್ಸ್‌ನಲ್ಲೇ ಕಾದು ನಿಲ್ಲಿಸಿದ್ದರು ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.