ಸೋಮವಾರ, ಏಪ್ರಿಲ್ 6, 2020
19 °C
ಕೊರೊನಾ ಆತಂಕ: ಜಿಲ್ಲೆಯಲ್ಲಿ 685 ಜನರ ಆರೋಗ್ಯ ತಪಾಸಣೆ

6 ಮಾದರಿ ಪರೀಕ್ಷೆ: ನಾಲ್ಕರಲ್ಲಿ ಸೋಂಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಶಂಕಿತರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಶುಕ್ರವಾರ ಒಟ್ಟು 685 ಜನರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಒಟ್ಟು 54 ಜನರು 28 ದಿನಗಳ ವೈದ್ಯಕೀಯ ನಿಗಾದಲ್ಲಿ ಇದ್ದಾರೆ. ಅಲ್ಲದೇ ಒಟ್ಟು 6 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ನಾಲ್ಕು ಮಾದರಿಗಳ ವರದಿ ಬಂದಿದ್ದು, ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಫೆಬ್ರುವರಿ 15 ರಿಂದ ಇಲ್ಲಿಯವರೆಗೆ ಚೀನಾ, ಇಟಲಿ, ಸ್ಪೇನ್‌, ಜರ್ಮನಿ, ಇರಾನ್‌ ಮತ್ತು ದಕ್ಷಿಣ ಕೊರಿಯಾಗಳಿಂದ ಬಂದಿರುವ ಪ್ರಯಾಣಿಕರು ಕಡ್ಡಾಯವಾಗಿ ವೈದ್ಯಕೀಯ ನಿಗಾದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

ಚಟುವಟಿಕೆ ಸ್ಥಗಿತ: ಕೊರೊನಾ ವೈರಸ್‌ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಎಲ್ಲ ಮಾಲ್‌, ಚಿತ್ರಮಂದಿರಗಳು, ಸಭೆ, ಸಮಾರಂಭಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸುವಂತೆ ಸೂಚನೆ ನೀಡಿದ್ದು, ಕರಾವಳಿಯಲ್ಲಿ ಬಹುತೇಕ ಚಟುವಟಿಕೆಗಳು ಶನಿವಾರದಿಂದ ಸ್ತಬ್ಧಗೊಳ್ಳಲಿವೆ.

ನಗರದ ನಾಲ್ಕು ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು, ಚಿತ್ರಮಂದಿರ ಗಳಲ್ಲಿ ಶನಿವಾರ, ಭಾನುವಾರ ಹೆಚ್ಚಿನ ಜನದಟ್ಟಣೆ ಇರುತ್ತಿತ್ತು. ಇದೀಗ ಎಲ್ಲೆಡೆ ಚಟುವಟಿಕೆಗಳು ಸ್ಥಗಿತಗೊಳ್ಳಲಿದ್ದು, ವಾಣಿಜ್ಯ ವಹಿವಾಟಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಈಗಾಗಲೇ ಸರ್ಕಾರಿ ಕಾರ್ಯಕ್ರಮ ಗಳನ್ನು ರದ್ದುಪಡಿ ಸಲಾಗಿದೆ. ಶನಿವಾರ (ಇದೇ 14) ನಡೆಯಬೇಕಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ. ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇದೇ ಇದೇ 16 ಮತ್ತು 17 ಕ್ಕೆ ನಿಗದಿಯಾಗಿದ್ದ ಪ್ರತಿಭಾ ದಿನಾಚರಣೆ ಮತ್ತು ಕಾಲೇಜು ವಾರ್ಷಿಕೋತ್ಸವವನ್ನು ರದ್ದುಪಡಿಸಲಾಗಿದೆ.

ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ಜಿಲ್ಲಾ ಪ್ರವಾಸ ರದ್ದುಗೊಳಿಸಲಾಗಿದ್ದು, ಶನಿವಾರ ನಗರದಲ್ಲಿ ನಡೆಯಬೇಕಿದ್ದ ರೈತರ, ಸಹಕಾರಿಗಳ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸಮ್ಮೇಳನವನ್ನು ರದ್ದುಗೊಳಿಸಲಾಗಿದೆ.

ಮಸೀದಿಗಳಲ್ಲಿ ಪ್ರಾರ್ಥನೆ: ಕೊರೊನಾ ವೈರಸ್ ವ್ಯಾಪಿಸುತ್ತಿದ್ದು, ಈ ರೋಗದಿಂದ ರಕ್ಷೆ ಹೊಂದಲು ಸಲುವಾಗಿ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝ್‌ನಲ್ಲಿ ನಾಝಿಲತ್ ಕುನೂತ್ ಪಠಿಸಲಾಯಿತು.

ಫರಳ್ ನಮಾಝ್‌ಗಳಲ್ಲಿ ವಿಶೇಷ ನಾಝಿಲತ್ ಕುನೂತ್ ಪಠಿಸುವಂತೆ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್‌ ಕರೆ ನೀಡಿದ್ದರು. ಅದರಂತೆ ನಗರ ಮತ್ತು ಹೊರವಲಯದ ಮಸೀದಿಗಳಲ್ಲಿ ಗುರುವಾರದಿಂದ ದಿನದ ಐದು ಬಾರಿಯ ನಮಾಝ್‌ನಲ್ಲೂ ನಾಝಿಲತ್ ಕುನೂತ್ ಪಠಿಸಲಾಗುತ್ತಿದೆ. ಅದರಲ್ಲೂ ಮಸೀದಿಗಳ ಇಮಾಮರು ಶುಕ್ರವಾರದ ಜುಮಾ ನಮಾಝ್ ಬಳಿಕ ಈ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಸಾರಿದರು.

ಯಾವುದೇ ವಿಪತ್ತು, ಮಾರಕ ರೋಗಗಳಿಗೆ ಪ್ರದೇಶ, ಗಡಿ, ಭಾಷೆ, ಜಾತಿ, ಧರ್ಮದ ಹಂಗಿಲ್ಲ. ಅದು ಎಲ್ಲವನ್ನೂ ಮೀರಿದ ಪ್ರಕ್ರಿಯೆಯಾಗಿದೆ. ಹಾಗಾಗಿ ಎಲ್ಲರೂ ಅವೆಲ್ಲವನ್ನೂ ಮೀರಿ ಮಾನವೀಯತೆಯ ನೆಲೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರೆ ಖಂಡಿತಾ ಪ್ರತಿಫಲವಿದೆ ಎಂದು ಮೂಲ್ಕಿಯ ಶಾಫಿ ಕೇಂದ್ರ ಜುಮಾ ಮಸೀದಿಯ ಖತೀಬ್‌ ಮುಹಮ್ಮದ್ ದಾರಿಮಿ ಅವರು ತಿಳಿಸಿದ್ದಾರೆ.

ಹಕ್ಕಿ ಜ್ವರ: ಪಿಲಿಕುಳದಲ್ಲಿ ಮುನ್ನೆಚ್ಚರಿಕೆ

ಮಂಗಳೂರು: ಕೇರಳದಲ್ಲಿ ಹಕ್ಕಿಜ್ವರ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ನಗರದ ಪಿಲಿಕುಳ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಉದ್ಯಾನದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಉದ್ಯಾನ ಮತ್ತು ಆವರಣದಲ್ಲಿರುವ ಜಲಮೂಲ ಬಳಿ ಪಕ್ಷಿಗಳ ನಡವಳಿಕೆಯ ಉಸ್ತುವಾರಿ ಮಾಡಲಾಗುತ್ತಿದೆ. ಮೃಗಾಲಯದಲ್ಲಿ ಹಾಗೂ ಕೆರೆಯ ಆವರಣದಲ್ಲಿ ಪಕ್ಷಿಗಳ ಸಾವಿನ ಪ್ರಕರಣ ನಡೆದಿಲ್ಲ. ಅದಾಗ್ಯೂ ಸಿಬ್ಬಂದಿ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕೆರೆಗಳಂತಹ ತೆರೆದ ಜಲಮೂಲಗಳ ಬಗ್ಗೆ ಜಾಗ್ರತೆ ವಹಿಸಲಾಗಿದ್ದು, ಉದ್ಯಾನದ ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಉದ್ಯಾನದ ನಿರ್ದೇಶಕ ಎಚ್.ಜೆ.ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳುವ ಎಲ್ಲ ಸಿಬ್ಬಂದಿಗೆ ಕೈ ಮತ್ತು ಕಾಲುಗಳನ್ನು ಸ್ವಚ್ಛಗೊಳಿಸಲು ತಿಳಿಸಲಾಗಿದೆ. ಉದ್ಯಾನದ ಎಲ್ಲ ಮಾರ್ಗಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸುವ ಮೂಲಕ ಮುಂಜಾಗ್ರತೆ ವಹಿಸಲಾಗಿದೆ. ಶುಕ್ರವಾರ ಮುಖಗವುಸುಗಳನ್ನು ಉದ್ಯಾನದ ನೌಕರರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು