ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಮಾ ದಾನಕ್ಕೆ 750 ಕಿ.ಮೀ. ಪ್ರಯಾಣ

ಮಂಗಳೂರಿನ ಜೀಶಾನ್‌ ಅಲಿ, ಹೈದರ್‌ ಅಲಿ ಅವರ ಮಾನವೀಯ ನಡೆಗೆ ಮೆಚ್ಚುಗೆ
Last Updated 12 ಆಗಸ್ಟ್ 2020, 15:56 IST
ಅಕ್ಷರ ಗಾತ್ರ

ಮಂಗಳೂರು: ತೀವ್ರ ನಿಗಾ ಘಟಕದಲ್ಲಿರುವ ಇಬ್ಬರು ಕೋವಿಡ್‌ ಸೋಂಕಿತರ ಜೀವ ಉಳಿಸಲು ಯುವಕರಿಬ್ಬರು 750 ಕಿ.ಮೀ. ಸಂಚರಿಸಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಯುವಕರ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಕೋವಿಡ್‌ ಸೋಂಕಿತರಾಗಿ, ಗುಣಮುಖರಾಗಿರುವ ವಕೀಲ ಜೀಶಾನ್‌ ಅಲಿಮತ್ತು ಸೌದಿ ಅರೇಬಿಯಾದಲ್ಲಿ ಉದ್ಯಮಿ
ಯಾಗಿರುವ ಬಜ್ಪೆ ನಿವಾಸಿ ಹೈದರ್‌ ಅಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಇಬ್ಬರೂ ಬೆಂಗಳೂರಿಗೆ ಹೋಗಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಸಂಗ್ರಹಿಸಿದ ಪ್ಲಾಸ್ಮಾವನ್ನು ನಗರಕ್ಕೆ ವಾಪಸು ತಂದು ಕೊಡುವ ಮೂಲಕ ಇಬ್ಬರು ಸೋಂಕಿತರಿಗೆ ಆಪತ್ಬಾಂಧವರಾಗಿದ್ದಾರೆ.

ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಭಟ್ಕಳದ 85 ವರ್ಷದ ವೃದ್ಧ ಹಾಗೂ ಮತ್ತೊಬ್ಬ ರೋಗಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದರೆ ಇಬ್ಬರನ್ನೂ ಸೋಂಕಿನಿಂದ ರಕ್ಷಿಸಲು ಸಾಧ್ಯ ಎಂದು ವೈದ್ಯರು ಸಲಹೆ ನೀಡಿದ್ದರು.

ಈ ಕುರಿತು ಮಂಗಳೂರಿನ ವೆಲ್‌ನೆಸ್‌ ಹೆಲ್ಪ್‌ಲೈನ್‌ ಗ್ರೂಪ್‌ ಎಂಬ ಸಾಮಾಜಿಕ ಕಾರ್ಯಕರ್ತರ ಗುಂಪಿನ ಸಂಯೋಜಕ ಝಕರಿಯಾ ಪರ್ವೇಝ್‌ ಅವರು ಜೀಶಾನ್‌ ಅಲಿಯವರನ್ನು ಸಂಪರ್ಕಿಸಿದ್ದರು. ಭಾನುವಾರ ರಾತ್ರಿ ಬೆಂಗಳೂರು ತಲುಪಿದ ಜೀಶಾನ್‌, ಸೋಮವಾರ ಬೆಳಿಗ್ಗೆ ಅಲ್ಲಿನ ಎಚ್‌ಸಿಜಿ ಆಸ್ಪತ್ರೆಗೆ ತೆರಳಿ ಪ್ಲಾಸ್ಮಾ ನೀಡಿದ್ದರು. ಸಂಸ್ಕರಿಸಿದ ಪ್ಲಾಸ್ಮಾವನ್ನು ಅವರೇ ವಾಪಸ್‌ ತಂದು ತಲುಪಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಹಿದಾಯ ಫೌಂಡೇಶನ್‌ ಅಧ್ಯಕ್ಷ ಖಾಸಿಂ ಅಹ್ಮದ್‌ ಅವರ ಮನವಿಯಿಂದ ಹೈದರ್‌ ಅಲಿ ಅವರು ಪ್ಲಾಸ್ಮಾ ದಾನ ಮಾಡಿ, ಅದನ್ನೂ ವಾಪಸು ತಂದು ರೋಗಿಯೊಬ್ಬರಿಗೆ ನೀಡಲಾಗಿದೆ. ಈಗ ಇಬ್ಬರೂ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಜೀಶಾನ್‌ ಅಲಿ, ‘ಪ್ಲಾಸ್ಮಾ ದಾನಕ್ಕೆ ಬೆಂಗಳೂರಿಗೆ ಹೋಗಿ, ಬರಬೇಕಿರುವುದರಿಂದ ತೊಂದರೆ ಆಗುತ್ತಿದೆ. ಮಂಗಳೂರಿನಲ್ಲೇ ಪ್ಲಾಸ್ಮಾ ಸಂಗ್ರಹಿಸಲು ಅನುಮತಿ ನೀಡಬೇಕು. ಆಗ ಹೆಚ್ಚಿನ ಜನರು ಪ್ಲಾಸ್ಮಾ ದಾನ ಮಾಡಲು ಬರುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT