ಸೋಮವಾರ, ಸೆಪ್ಟೆಂಬರ್ 20, 2021
29 °C

ಮಂಗಳೂರು; ಆತ್ಮಹತ್ಯೆಗೆ ಶರಣಾದ ದಂಪತಿ ದೇಹ ಮರಣೋತ್ತರ ಪರೀಕ್ಷೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೋವಿಡ್ ತಗುಲಿದೆ ಎಂಬ ಭಯದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ ರಮೇಶ ಸುವರ್ಣ ಮತ್ತು ಗುಣ ಸುವರ್ಣ ಮೃತದೇಹಗಳನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

‘ನಮಗೆ ಕೋವಿಡ್ ಬಂದಿರುವ ಕಾರಣಕ್ಕೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ರಮೇಶ ಸುವರ್ಣ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಧ್ವನಿ ಮುದ್ರಣ ಕಳುಹಿಸಿದ್ದರು. ಕಮಿಷನರ್ ತಿರುಗಿ ಅವರಿಗೆ ಕರೆ ಮಾಡಿದಾಗ ಕರೆ ಸ್ವೀಕೃತವಾಗಿರಲಿಲ್ಲ.

‘ಪೊಲೀಸರು ಅವರು ಇರುವ ಜಾಗವನ್ನು ಪತ್ತೆ ಹಚ್ಚಿ, ಪಣಂಬೂರಿನ ಚಿತ್ರಾಪುರ ಬೀಚ್ ರಸ್ತೆಯಲ್ಲಿದ್ದ ಫ್ಲ್ಯಾಟ್ ತಲುಪುವಷ್ಟರಲ್ಲಿ, ಮನೆ ಬಾಗಿಲು ಹಾಕಿತ್ತು. ಚಾವಿ ಒಡೆದು ಒಳ ಹೋದಾಗ, ಈ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂತು. ಈ ದಂಪತಿಗೆ ಅಕ್ಕಪಕ್ಕದವರ ಜೊತೆ ಹೆಚ್ಚು ಒಡನಾಟ ಇರಲಿಲ್ಲ. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಸಾಧ್ಯತೆ ಇದ್ದು, ಈಗ ಕೋವಿಡ್ ತಗುಲಿದೆ ಎಂಬ ಭಯ ನೆಪವಾಗಿರಬಹುದು’ ಎಂದು ಡಿಸಿಪಿ ಹರಿರಾಂ ಶಂಕರ್ ಪ್ರತಿಕ್ರಿಯಿಸಿದರು.

ಗುಣ ಸುವರ್ಣ ಬರೆದಿರುವ ಡೆತ್‌ನೋಟ್‌ನಲ್ಲಿ ಅಂತ್ಯ ಸಂಸ್ಕಾರವನ್ನು ಸತ್ಯಜಿತ್ ಸುರತ್ಕಲ್, ಶರಣ್ ಪಂಪ್‌ವೆಲ್ ಮಾಡಬೇಕು ಎಂದು ತಿಳಿಸಲಾಗಿದೆ. ಈ ಕಾರಣ ಶರಣ್ ಪಂಪ್‌ವೆಲ್ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸ್ಥಳಕ್ಕೆ ನೀಡಿದ್ದಾರೆ. ‘ರಮೇಶ್ ಸುವರ್ಣ ಪಡುಬಿದ್ರಿ ಮೂಲದವರು ಎಂದು ತಿಳಿದು ಬಂದಿದೆ. ಅವರ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಹಿಂದೂ ಧಾರ್ಮಿಕ ಪದ್ಧತಿಯಂತೆ ದಂಪತಿಯ ಅಂತ್ಯ ಸಂಸ್ಕಾರ ಮಾಡಲಾಗುವುದು’ ಎಂದು ಶರಣ್ ತಿಳಿಸಿದ್ದಾರೆ.

ಇದನ್ನು ಓದಿ... ಮಂಗಳೂರು: ಕೋವಿಡ್ ತಗುಲಿರುವ ಆತಂಕ, ದಂಪತಿ ಆತ್ಮಹತ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು