ಶನಿವಾರ, ಜೂನ್ 25, 2022
24 °C
ಭಾರತೀಯ ಜೈನ ಸಂಘಟನೆ: ಸಾವಿರಕ್ಕೂ ಅಧಿಕ ಆಮ್ಲಜನಕ ಸಾಂದ್ರಕ ಕೊಡುಗೆ

ಜೈನ ಸಂಘಟನೆಯ ಸೇವೆ ಸ್ತುತ್ಯಾರ್ಹ: ಬಿ.ಎಸ್. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ‘ಅಹಿಂಸೆಯೇ ಜೈನ ಧರ್ಮದ ಶ್ರೇಷ್ಠ ತತ್ವವಾಗಿದ್ದು, ಜೈನರ ಸಮಾಜ ಸೇವಾ ಕಳಕಳಿ ಶ್ಲಾಘನೀಯವಾಗಿದೆ. ಕೋವಿಡ್‌ ನಿರ್ಮೂಲನೆಗೆ ಭಾರತೀಯ ಜೈನ ಸಂಘಟನೆಯ ಮಾನವೀಯ ಸೇವೆ ಸ್ತುತ್ಯಾರ್ಹವಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಭಾರತೀಯ ಜೈನ ಸಂಘಟನೆ (ಬಿಜೆಎಸ್) ಆಶ್ರಯದಲ್ಲಿ ರಾಜ್ಯದ ಜನತೆಗಾಗಿ 61 ಕೇಂದ್ರಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಆಮ್ಲಜನಕ ಸಾಂದ್ರಕಗಳನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಜನತೆಗೆ ನೀಡಿದ ಸಂದೇಶವನ್ನು ಎಲ್ಲರೂ ಪಾಲಿಸಿ ಕೋವಿಡ್‌ ಮುಕ್ತ ಸಮಾಜಕ್ಕೆ ಸಹಕಾರ ನೀಡಬೇಕು’ ಎಂದು ಯಡಿಯೂರಪ್ಪ ಹೇಳಿದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಶಾಂತಿಲಾಲ್ ಮುತ್ತಾರ ನೇತೃತ್ವದಲ್ಲಿ ಭಾರತೀಯ ಜೈನ ಸಂಘಟನೆಯ ಸೇವೆ ದೇಶಕ್ಕೆ ಮಾದರಿಯಾಗಿದೆ. ಪ್ರತಿ ರಾಜ್ಯದಲ್ಲಿಯೂ ಇಂತಹ ಸೇವಾ ಘಟಕಗಳಿರಬೇಕು. ದೇಶದಲ್ಲಿ ನೆರೆ- ಬರಗಾಲ ಸಂದರ್ಭದಲ್ಲೂ ಬಿಜೆಎಸ್‍ನ ಸೇವೆ ಶ್ಲಾಘನೀಯ’ ಎಂದರು.

‘ಗ್ರಾಮೀಣ ಪ್ರದೇಶದಲ್ಲಿಯೂ ಕೋವಿಡ್‌ ಮಾಯಾಸುರನಂತೆ ವೇಗವಾಗಿ ಹರಡುತ್ತಿರುವುದು ಆತಂಕಕಾರಿ. ಆದರೆ, ಈಗ ಸರ್ಕಾರದ ಸೇವಾ ಕಾರ್ಯದಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿದೆ. ಜನರು ಭಯಭೀತರಾಗದೆ, ಬೇಜವಾಬ್ದಾರಿಯಿಂದ ವರ್ತಿಸದೆ, ಮೂಢನಂಬಿಕೆಗೆ ಬಲಿಯಾಗದೆ, ರೋಗದ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ದೇಶದೆಲ್ಲೆಡೆ ಕೋವಿಡ್‌ ಸಂಪೂರ್ಣ ನಿರ್ಮೂಲನೆಯಾಗಿ ನಾವೆಲ್ಲರೂ ಕೈಜೋಡಿಸೋಣ’ ಎಂದು ಹೆಗ್ಗಡೆಯವರು ಹಾರೈಸಿದರು.

ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಮುಖ್ಯಮಂತ್ರಿ ಅಭಿನಂದಿಸಿದರು.

ಬಿಜೆಎಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರಜಿ ಲಂಕರ್ ಸ್ವಾಗತಿಸಿದರು. ಬಿಜೆಎಸ್‌ನ ಸ್ಥಾಪಕ ಶಾಂತಿಲಾಲ್ ಮುತ್ತ ಸಂಘಟನೆಯ ಸೇವಾ ಕಾರ್ಯಗಳ ಸಮಗ್ರ ಮಾಹಿತಿ ನೀಡಿದರು.

ಭಾರತೀಯ ಜೈನ ಸಂಘಟನೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಮಹಾವೀರ ಚಂದ್ ಜಿ ಪರೆಕ್ ಧನ್ಯವಾದ ಸಲ್ಲಿಸಿದರು. ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಬಿಜೆಎಸ್‌ನ ಓಂಪ್ರಕಾಶ್ ಲುನಾವತ್ ಮತ್ತು ಗೌತಮ್‍ಜಿ ಬಫ್ನಾ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು