ಬುಧವಾರ, ಜನವರಿ 29, 2020
29 °C

ಮನೆಯಲ್ಲಿ ಸ್ಫೋಟ : ನಾಲ್ವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಸರೋಳಿಕಾನ ಎಂಬಲ್ಲಿ ಗುರುವಾರ ತಡರಾತ್ರಿ ಮನೆಯೊಳಗೆ ಕಚ್ಚಾ ಸಾಮಗ್ರಿಗಳಿಂದ ಸ್ಫೋಟಕ ತಯಾರಿಸುತ್ತಿದ್ದ ಸಂದರ್ಭದಲ್ಲಿ ಅದು ಸ್ಫೋಟಿಸಿ ನಾಲ್ವರು ಗಾಯಗೊಂಡಿದ್ದು, ಮನೆಗೆ ಹಾನಿಯಾಗಿದೆ. ಗಾಯಾಳುಗಳ ಪೈಕಿ ಒಬ್ಬರಿಗೆ ಗಂಭೀರ ಗಾಯವಾಗಿದೆ. ನಾಡಬಾಂಬ್‌ ಅಥವಾ ಕರ್ನಾಲ್‌  ಎಂದು ಪೊಲೀಸರು ಖಚಿತಪಡಿಸಿಲ್ಲ.

‘ಸರೋಳಿಕಾನ ನಿವಾಸಿ ಕೇಪು ಗೌಡ ಎಂಬುವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ.  ಅವರ ಪುತ್ರ ಬಾಲಕೃಷ್ಣ ಗೌಡ (54) ಅವರು ತಮ್ಮ ಕೃಷಿಗೆ ಹಾನಿ ಮಾಡುವ ಕಾಡುಪ್ರಾಣಿಗಳನ್ನು ಕೊಲ್ಲುವ ಉದ್ದೇಶದಿಂದ, ಕಚ್ಚಾ ಸಾಮಗ್ರಿಗಳನ್ನು ತಂದು ಸ್ಫೋಟಕ ತಯಾರಿಸುತ್ತಿದ್ದ ವೇಳೆ ಅದು  ಸಿಡಿದಿದೆ’ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಹಿಂಬದಿಯಲ್ಲಿರುವ ಕೋಣೆಯಲ್ಲಿ ಬಾಂಬ್ ಸ್ಫೋಟವಾಗಿದ್ದು, ಬಾಲಕೃಷ್ಣ ಗೌಡ ಅವರ ಕೈಗೆ ತೀವ್ರ ಗಾಯವಾಗಿದೆ. ಶುಕ್ರವಾರ ನಡೆಯಲಿದ್ದ ಶಾಲಾ ವಾರ್ಷಿಕೋತ್ಸವದಪ್ರಯುಕ್ತ ಮನೆಯ ಪಕ್ಕದ ಕೊಟ್ಟಿಗೆಯ ಜಗಲಿಯಲ್ಲಿ ಕುಳಿತುಕೊಂಡು ಹೂವಿನ ಮಾಲೆ ಕಟ್ಟುತ್ತಿದ್ದ ಬಾಲಕೃಷ್ಣ ಗೌಡ ಅವರ ನಾದಿನಿ ವೇದಾವತಿ (35), ಅವರ ಪುತ್ರಿಯಾದ ಉಪ್ಪಳಿಗೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಮೋನಿಶಾ (15) ಮತ್ತು ಪುತ್ರ ಸಾಜ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್(12) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಬಾಲಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.  ಪುತ್ತೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರರು ಅಪಾಯದಿಂದ ಪಾರಾಗಿದ್ದಾರೆ.

ಸ್ಫೋಟದ ತೀವ್ರತೆಗೆ ಮನೆಯ ಕೋಣೆ ಮಣ್ಣು ಎದ್ದುಹೋಗಿ ಹೊಂಡ ನಿರ್ಮಾಣವಾಗಿದೆ. ಕೋಣೆಯಲ್ಲಿದ್ದ ಗೋದ್ರೇಜ್ ಕಪಾಟು ಹಾನಿಯಾಗಿದೆ. ಕಿಟಿಕಿ ಕಳಚಿ ಬಿದ್ದಿದ್ದು,  ಗಾಜುಗಳು ನುಚ್ಚುನೂರಾಗಿದೆ. ಮನೆಯ ಗೋಡೆಯೂ ಬಿರುಕುಬಿಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಬೆನ್ನಲ್ಲೇ ಸಂಪ್ಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಶುಕ್ರವಾರ ಮಧ್ಯಾಹ್ನ ಬಂದು ಮಾಹಿತಿ ಸಂಗ್ರಹಿಸಿದ್ದಾರೆ.

‘ಕೇಪು ಗೌಡ ಅವರ ಮನೆಯಲ್ಲಿ ಸ್ಫೋಟಗೊಂಡಿರುವುದು ನಾಡ ಬಾಂಬ್‌ ಅಥವಾ ಗರ್ನಾಲ್‌ ಇರಬಹುದೇ ಸ್ಪಷ್ಟವಾಗಿ ಹೇಳುವಂತಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಸ್ಫೋಟಕ ಯಾವುದೆಂಬುವುದು ಸ್ಪಷ್ಟವಾಗಲಿದೆ’ ಎಂದು ಸಂಪ್ಯ ಠಾಣೆಯ ಎಸ್ಐ ಸಕ್ತಿವೇಲು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು