ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಅಭ್ಯರ್ಥಿ ಬದಲಾವಣೆ: ಹಳೆ ತಂತ್ರಕ್ಕೆ ಬಿಜೆಪಿ ಮಣೆ

ಅಸಮಾಧಾನದ ಅಲೆ ಮೆಟ್ಟಿ ನಿಲ್ಲಲು ಹೊಸ ಮುಖಕ್ಕೆ ಮಣೆ ಹಾಕಿದ ಬಿಜೆಪಿ
Published 14 ಮಾರ್ಚ್ 2024, 6:49 IST
Last Updated 14 ಮಾರ್ಚ್ 2024, 6:49 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿಯ ಭದ್ರ ಕೋಟೆ ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಸಮಾಧಾನದ ಅಲೆಯನ್ನು ತಣಿಸಲು ಪಕ್ಷದ ನಾಯಕತ್ವವು ಅಭ್ಯರ್ಥಿ ಬದಲಾವಣೆಯ ತಂತ್ರಗಾರಿಕೆಯ ಮೊರೆ ಹೋಗಿದೆ. ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ ಬದಲು ಯುವ ಮುಖ ಬೃಜೇಶ್‌ ಚೌಟ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. 

ಪಕ್ಷವು ಇಂತಹ ತಂತ್ರಗಾರಿಕೆ ನಡೆಸಿದ್ದು ಇದೇ ಮೊದಲಲ್ಲ. ಜನಾರ್ದನ ಪೂಜಾರಿ ಅವರಂತಹ ಘಟಾನುಘಟಿಯನ್ನು  ಸೋಲಿಸಿ 1991ರಿಂದ 2004ರವರೆಗೆ ಸತತವಾಗಿ ಲೋಕಸಭಾ ಸದಸ್ಯರಾಗಿದ್ದ ವಿ.ಧನಂಜಯ ಕುಮಾರ್‌ ವಿರುದ್ಧ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿತ್ತು. ಪಕ್ಷವು 2004ರಲ್ಲಿ ಧನಂಜಯ್‌ ಕುಮಾರ್‌ ಬದಲು ಡಿ.ವಿ. ಸದಾನಂದ ಗೌಡರನ್ನು ಕಣಕ್ಕಿಳಿಸಿ ಕ್ಷೇತ್ರದ ಪಾರುಪತ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 2009ರ ಸಾರ್ವತ್ರಿಕ ಚುನಾವಣೆ ವೇಳೆ  ಸದಾನಂದ ಗೌಡರ ಬಗ್ಗೆ ಕಾರ್ಯಕರ್ತರ ಒಲವು ಕಡಿಮೆ ಆಗಿತ್ತು. ಆಗ ಸಂಘ ಪರಿವಾರದಲ್ಲಿ ಪ್ರಚಾರಕರಾಗಿ ಗುರುತಿಸಿಕೊಂಡಿದ್ದ ಯುವ ನಾಯಕ ನಳಿನ್‌ ಕುಮಾರ್‌ ಕಟೀಲ್‌ಗೆ ಪಕ್ಷವು ಅವಕಾಶ ನೀಡಿತ್ತು.

ಸತತ ಮೂರು ಅವಧಿಗೆ ಸಂಸದರಾಗಿದ್ದ ನಳಿನ್‌ಗೆ ಮತ್ತೊಂದು ಅವಕಾಶ ನೀಡಬಾರದು ಎಂದು ಲೋಕಸಭಾ ಚುನಾವಣೆಗೆ ಸಾಕಷ್ಟು ಮೊದಲೇ ಪಕ್ಷದೊಳಗೇ ಕೂಗೆದ್ದಿತ್ತು. ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ಪಕ್ಷದ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಯಾದಾಗ ನಳಿನ್‌ ವಿರುದ್ಧ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ತೋರ್ಪಡಿಸಿದ್ದರು. ಪುತ್ತೂರು ಕ್ಷೇತ್ರದ ಟಿಕೆಟ್‌ ಹಂಚಿಕೆ ಆದ ಬಳಿಕ ಇದು ತಾರಕಕ್ಕೇರಿತ್ತು.

ಪಕ್ಷದ ವಿರುದ್ಧ ಸೆಟೆದು ನಿಂತ ಅರುಣ್ ಪುತ್ತಿಲ ಪ್ರತ್ಯೇಕ ಪರಿವಾರವನ್ನು ಕಟ್ಟಿಕೊಂಡು ಪಕ್ಷದ ನಾಯಕರಿಗೆ ಸೆಡ್ಡು ಹೊಡೆದಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷದ ಅಧಿಕೃತ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಮೂರನೇ ಸ್ಥಾನಕ್ಕೆ ಸರಿಯುವಂತೆ ಮಾಡಿದ್ದರು. ಅಷ್ಟಕ್ಕೇ ಸುಮ್ಮನಾಗದ ಅವರು, ‘ನಳಿನ್‌ ಕುಮಾರ್‌ ಅವರಿಗೆ ಮತ್ತೆ ಟಿಕೆಟ್‌ ನೀಡಿದರೆ ಬಂಡಾಯ ಅನಿವಾರ್ಯ’ ಎಂದು ಬಹಿರಂಗವಾಗಿಯೇ ಸಂದೇಶ ನೀಡಿದ್ದರು. ಇನ್ನೊಂದೆಡೆ ಹಿಂದೂ ಜಾಗರಣ ವೇದಿಕೆಯ ಚಟುವಟಿಕೆ ಮೂಲಕ ಹಿಂದೂ ಯುವಕರ ಕಣ್ಮಣಿಯಾಗಿ ಗುರುತಿಸಿಕೊಂಡಿದ್ದ ಸತ್ಯಜಿತ್‌ ಸುರತ್ಕಲ್‌ ಜಿಲ್ಲೆಯಲ್ಲಿ ಅಲ್ಲಲ್ಲಿ ಸಭೆ ನಡೆಸಿ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದರು. ಈ ಇಬ್ಬರು ನಾಯಕರು ಪಕ್ಷದ ಯುವ ಕಾರ್ಯಕರ್ತರ ಬುಟ್ಟಿಗೆ ಕೈಹಾಕುವ ಮುನ್ಸೂಚನೆ ಅರಿತ ಬಿಜೆಪಿ ವರಿಷ್ಠರು ಈ ಸಲ ಮತ್ತೆ ಅಭ್ಯರ್ಥಿ ಬದಲಾಯಿಸಲು ನಿರ್ಧರಿಸಿದ್ದಾರೆ.   

ನಳಿನ್‌ ವಿರುದ್ಧ ಪಕ್ಷದೊಳಗೆ ಮಡುಗಟ್ಟಿದ್ದ ಆಕ್ರೋಶ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಕ್ಯಾ. ಬೃಜೇಶ್‌ ಚೌಟ ಅವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಯ ಟಿಕೆಟ್‌ ಗಳಿಸುವ ಪ್ರಬಲ ಆಕಾಂಕ್ಷಿಯಾಗಿದ್ದ ಬೃಜೇಶ್‌ ಚೌಟ ಕೆಲ ವರ್ಷಗಳಿಂದ ಅದಕ್ಕೆ ‘ಕರೆ’ಯನ್ನು ಹದಗೊಳಿಸಿದ್ದರು. ಕೂಳೂರಿನಲ್ಲಿ ಕಂಬಳ ಆಯೋಜಿಸುವ ಮೂಲಕ ಯುವಮನಸುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಮಂಗಳೂರು ಸಾಹಿತ್ಯ ಉತ್ಸವವನ್ನು 2018ರಿಂದ ಪ್ರತಿವರ್ಷವೂ ಆಯೋಜಿಸುವ ಮೂಲಕ ಸಂಘ ಪರಿವಾರದ ವಿಚಾರಧಾರೆಯ ಬಗ್ಗೆ ಒಲವಿರುವವರ ಪ್ರೀತಿ ಗಳಿಸುವ ಪ್ರಯತ್ನದಲ್ಲಿ ತೊಡಗಿದ್ದರು.

ಬಿಜೆಪಿ ಹುರಿಯಾಳು ಯಾರೆಂಬುದು ನಿರ್ಧಾರವಾಗಿದೆ.ಅವರಿಗೆ ಪ್ರಬಲ ಪೈಪೋಟಿ ಒಡ್ಡುವ ಪ್ರಬಲ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕಣಕ್ಕಿಳಿಸಿದ್ದೇ ಆದರೆ, ಈ ಸಲ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಕಣ ರಂಗೇರಲಿದೆ.

ಪಕ್ಷವು 15 ವರ್ಷ ಅವಕಾಶ ನೀಡಿದ್ದೇ ದೊಡ್ಡದು: ಕಟೀಲ್‌

ಮಂಗಳೂರು: ‘ಪಕ್ಷದ ಕಟ್ಟಾಳು. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುವ ಜವಾಬ್ದಾರಿ ನನ್ನದು. ಪಕ್ಷವು ನನಗೆ 15 ವರ್ಷ ನೀಡಿದ ಅವಕಾಶವೇ ದೊಡ್ಡದು ಎಂದು ತಿಳಿದಿದ್ದೇನೆ. ಇನ್ನು ಮುಂದಿನ ದಿನಗಳಲ್ಲೂ ಕಾಯಾ ವಾಚಾ ಮನಸ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ. ಪಕ್ಷ ಹೇಳುವ ಎಲ್ಲ ಕೆಲಸ ಕಾರ್ಯಗಳನ್ನು ಮುಂದೆಯೂ ಮಾಡುತ್ತೇನೆ’ ಎಂದು ಸಂಸದ ನಳಿನ್ ಕುಮಾರ್‌ ಕಟೀಲ್ ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಯನ್ನಾಗಿ ಬೃಜೇಶ್‌ ಚೌಟ ಅವರ ಹೆಸರು ಘೋಷಣೆಯಾದ ಬಳಿಕ ಅವರು ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದರು.

‘ಜಗತ್ತಿನ ಅತಿದೊಡ್ಡ ಪಕ್ಷವು ನನ್ನ ಮೇಲೆ ನಂಬಿಕೆ ಇಟ್ಟು  ರಾಜ್ಯ ಘಟಕದ ಅಧ್ಯಕ್ಷನಾಗಿ ನಾಲ್ಕೂವರೆ ವರ್ಷ ಕೆಲಸ ಮಾಡುವ ಅವಕಾಶ ನೀಡಿದೆ. ಪಕ್ಷವು ಕೇರಳದ ಸಹಪ್ರಭಾರಿ ಕೆಲಸ ಮಾಡಲು ಅವಕಾಶ ನೀಡಿದೆ. ಪಕ್ಷ ಕಟ್ಟಿ ಬೆಳೆಸಲು ನಾನು  ಪ್ರಾಮಾಣಿಕ  ಪ್ರಯತ್ನ ಮಾಡಿದ್ದೇನೆ. ನಮ್ಮ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ ಕಾರ್ಯಕರ್ತ ಹುದ್ದೆ ಸಾಯುವವರೆಗೆ ಇರುತ್ತದೆ. ನನಗೆ ಕಾರ್ಯಕರ್ತ ಹುದ್ದೆಯೇ ದೊಡ್ಡದು’ ಎಂದರು.

‘ಯಾವುದೇ ಅಪೇಕ್ಷೆ ಇಟ್ಟು ರಾಜಕಾರಣಕ್ಕೆ ಬಂದವನಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಬೂತ್ ಮಟ್ಟದಿಂದ ಬೆಳೆದು ಬಂದವ ನಾನು. ಸಂಘಟನೆಯ ಪ್ರಚಾರಕನಾಗಿ, ಬಿಜೆಪಿ ಜವಾಬ್ದಾರಿ ಹೊತ್ತು, ಬಳಿಕ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷದ, ಸಂಘ ಪರಿವಾರದ ಹಿರಿಯರು ಅವಕಾಶ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಕಾರ್ಯಕರ್ತರು ಅಹೋರಾತ್ರಿ ದುಡಿದು ಗೆಲ್ಲಿಸಿ, ನನ್ನನ್ನು ಬೆಳೆಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಯೋಜನೆಗಳನ್ನು ಹಾಕುವ ಅವಕಾಶ ನೀಡಿದ್ದಾರೆ. ಹಿರಿಯರ ಅಪೇಕ್ಷೆ ಹಾಗೂ ನಂಬಿಕೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ ಎಂಬ ವಿಶ್ವಾಸ ಇದೆ’ ಎಂದರು. 

ಟಿಕೆಟ್‌ ತಪ್ಪಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ಬೇರೆ ಬೇರೆ ಕಾರಣ ಇಟ್ಟುಕೊಂಡು ರಾಷ್ಟ್ರೀಯ ನಾಯಕರು ಯೋಚನೆ ಮಾಡುತ್ತಾರೆ. ಬದಲಾವಣೆ ಮಾಡಿ, ಹೊಸಬರಿಗೆ ಅವಕಾಶ ನೀಡಿದ್ದಾರೆ. ಪಕ್ಷದ ಸಂಘಟನೆಗೂ ಜನ ಬೇಕಲ್ಲವೇ’ ಎಂದರು. 75 ವರ್ಷ ಮೀರಿದವರಿಗೆ ಟಿಕೆಟ್‌ ನೀಡಿದ ಕುರಿತು ಪ್ರತಿಕ್ರಿಯಿದ ಅವರು, ‘ಸಂಘಟನೆ ಕಾರ್ಯ ಮಾಡುವವರು ಬೇರೆ. ಚುನಾಯಿತ ಪ್ರತಿನಿಧಿಗಳಾಗುವವರು ಬೇರೆ. ಸಂಘಟನೆಯ ಕೆಲಸಕ್ಕೆ ಬೇಕು ಎಂದೂ ಜವಾಬ್ದಾರಿ ನೀಡುತ್ತಾರೆ’ ಎಂದರು. ‘ಕಾರ್ಯಕರ್ತರಲ್ಲಿ ಮತದಾರರಲ್ಲಿ ನನ್ನ ವಿನಂತಿ ಇಷ್ಟೇ. ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು. ಜಗದ್ವಂದ್ಯ ಭಾರತ ನಿರ್ಮಾಣ ಆಗಬೇಕು.  ಆ ಸಂಕಲ್ಪ ಈಡೇರಿಸಲು ಸಮರ್ಥವಾದ ಬೃಜೇಶ್‌ ಚೌಟ ಅವರನ್ನು ಪಕ್ಷವು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಹೊಸ ಯುವಕರು ಬರಬೇಕು ಪಕ್ಷದ ಕಾರ್ಯ ಚಟುವಟಿಕೆ ವಿಸ್ತಾರ ಆಗಬೇಕು ಎಂಬ ದೃಷ್ಟಿಯಿಂದ ಪಕ್ಷವು ತೀರ್ಮಾನ ಕೈಗೊಂಡಿದೆ. ಇದನ್ನು ಸ್ವಾಗತಿಸುತ್ತೇನೆ’ ಎಂದರು.

‘ಬೃಜೇಶ್‌ ಚೌಟ ಅವರು ಸೇನೆಯಲ್ಲಿ ಕೆಲಸ ಮಾಡಿದ ಯುವಕ. ನಾವು ಹಾಕಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಶಕ್ತಿಯನ್ನು ಹೊಂದಿದ್ದಾರೆ. ಅವರನ್ನೂ ಸಂಸದನನ್ನಾಗಿ ಆಯ್ಕೆ ಮಾಡಿ, ಬಿಜೆಪಿಯನ್ನು ಗೆಲ್ಲಿಸಬೇಕು. ಅವರಿಗೂ ನಿಮ್ಮ ಶಕ್ತಿ ತುಂಬಿ ಮಾರ್ಗದರ್ಶನ ಮಾಡಬೇಕು.  ನನಗೆ ನೀಡಿದಂತಹದ್ದೇ ಸಹಕಾರವನ್ನು ಚೌಟ ಅವರಿಗೂ ನೀಡಬೇಕು. ನಾನೂ ಪೂರ್ಣವಾಗಿ ಅವರ ಜೊತೆ ನಿಂತು ಗೆಲ್ಲಿಸಲು ಕೆಲಸ ಮಾಡುತ್ತೇನೆ. ಬಿಜೆಪಿಯನ್ನು ಗೆಲ್ಲಿಸಲು ಪೂರ್ಣ ಸಮಯ ವಿನಿಯೋಗಿಸಿ ಪ್ರಯತ್ನ ಮಾಡುತ್ತೇನೆ’ ಎಂದರು.

‘ಲೋಕಸಭಾ ಸದಸ್ಯನಾಗಿದ್ದಾಗ ಪಕ್ಷದ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ರಾಜಾನಾಥ ಸಿಂಗ್‌,  ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರು ಪೂರ್ಣ ಮಾರ್ಗದರ್ಶನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತದ ಅವಧಿಯ ಹತ್ತು ವರ್ಷಗಳ್ಲಲಿ ಕ್ಷೇತ್ರಕ್ಕೆ ಏನೆಲ್ಲ ಕೇಳಿದ್ದೇವೋ ಎಲ್ಲವನ್ನೂ ಕೊಟ್ಟಿದ್ದಾರೆ. ಇಲ್ಲಿನ ಯೋಜನೆಗಳಿಗೆ ಮಂತ್ರಿ ಮಂಡಲ ಸದಸ್ಯರು ಸಹಕಾರ ಕೊಟ್ಟಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡುವ ಕೆಲಸ ಆಗಿದೆ’ ಎಂದರು. 

‘ಜಿಲ್ಲೆಯಲ್ಲಿ ಯಾರೂ ನಿರಂತರ 15 ವರ್ಷ ಲೋಕಸಭಾ ಸದಸ್ಯರಾಗಿರಲಿಲ್ಲ. ಧನಂಜಯ ಕುಮಾರ್‌ 12.5 ವರ್ಷ, ಜನಾರ್ಧನ ಪೂಜಾರಿ 14 ವರ್ಷ ಸಂಸದರಗಿದ್ದರು.  ನಾನು 15 ವರ್ಷ ಸಂಸದನಾಗಿ ಜವಾಬ್ದಾರಿ ನಿರ್ವಹಿಸಲು ಸಹಕರಿಸಿದವರಿಗೆ ಕೃತಜ್ಞತೆ’ ಎಂದರು.

‘ಸಹಜವಾಗಿ ಎಲ್ಲರ ಜೊತೆಗೂ ವರಿಷ್ಠರು ಮಾತನಾಡಿದ್ದಾರೆ. ಆರು ತಿಂಗಳ ಹಿಂದೆಯೇ ವರಿಷ್ಠರು ಕೇಳಿದ್ದು. ಆಗಲೇ  ಜಿಲ್ಲೆಯಲ್ಲಿ ಪರಿವರ್ತನೆ ಮಾಡುವುದಾದರೆ ಅವಕಾಶಗಳಿವೆ. ಹೊಸಬರಿಗೆ ಅವಕಾಶ ಕೊಡುವುದಕ್ಕೆ ನನ್ನಿಂದ ಅಡ್ಡಿ ಇಲ್ಲ. ಅವರಿಗೂ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದ್ದೆ’ ಎಂದರು.

ಮುಂದಿನ ಲೋಕಸಭೆ ಚುನಾವಣೆ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ 3 ಲಕ್ಷಕ್ಕೂ ಹೆಚ್ಚು ಮತದಿಂದ ಚೌಟ ಅವರನ್ನು ಗೆಲ್ಲಿಸುವಂತೆ ನಳಿನ್‌ ಕುಮಾರ್‌ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT