ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಟ್ವಾಳ: ಹೆಚ್ಚುತ್ತಿರುವ ಡೆಂಗಿ ಪ್ರಕರಣ

ಗ್ರಾಮೀಣ ಪ್ರದೇಶಗಳಲ್ಲಿ ನೊಣ ಮತ್ತು ನುಸಿ ಕಾಟ l ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ
ಮೋಹನ್ ಕೆ.ಶ್ರೀಯಾನ್ ರಾಯಿ
Published 9 ಜುಲೈ 2024, 7:42 IST
Last Updated 9 ಜುಲೈ 2024, 7:42 IST
ಅಕ್ಷರ ಗಾತ್ರ

ಬಂಟ್ವಾಳ: ಸತತ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಡಿಕೆ ತೋಟ, ಕಾಡು, ಗುಡ್ಡ ಪ್ರದೇಶಗಳು ಇರುವಲ್ಲಿ ನೊಣ ಹಾಗೂ ನುಸಿ ಕಾಟ ಹೆಚ್ಚಳಗೊಂಡಿದೆ. ನಗರ ಪ್ರದೇಶಗಳಲ್ಲಿ  ಚರಂಡಿ ನಿರ್ವಹಣೆ ಮತ್ತು ಕಸ ವಿಲೇವಾರಿ ಸಮರ್ಪಕವಾಗಿ ಮಾಡದ ಕಾರಣ ಸೊಳ್ಳೆ ಹಾವಳಿ ಹೆಚ್ಚಿದೆ.

ಐದು ತಿಂಗಳಲ್ಲಿ 162 ಶಂಕಿತ ಡೆಂಗಿ ಪ್ರಕರಣಗಳು ತಾಲ್ಲೂಕು ವ್ಯಾಪ್ತಿಯಲ್ಲಿ ವರದಿಯಾಗಿವೆ. ಇದರಲ್ಲಿ 35 ಮಂದಿಗೆ ಡೆಂಗಿ ದೃಢಪಟ್ಟಿದೆ. ಈ ಬಾರಿ ಡೆಂಗಿ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಿದ್ದು, ಬಹುತೇಕ ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಆರೋಗ್ಯ ಇಲಾಖೆಯಲ್ಲಿ ರೋಗಿಗಳ ನಿಖರವಾದ ಅಂಕಿ ಅಂಶ ಸಿಗುತ್ತಿಲ್ಲ. ಸರ್ಕಾರಿ  ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ತಜ್ಞರು, ಸಿಬ್ಬಂದಿಗಳ ಕೊರತೆ ಇರುವುದರಿಂದ ಪ್ರಯೋಗಾಲಯದ ವರದಿ ಬರುವುದು ವಿಳಂಬ ಆಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಪ್ರತಿ ವರ್ಷ ಇಲ್ಲಿನ ದೈವಸ್ಥಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಡೆಂಗಿ ಪ್ರಕರಣಗಳು ದಾಖಲಾಗುತ್ತಿದ್ದವು. ಈ ಬಾರಿಯೂ ದೈವಸ್ಥಳ, ಮಣಿನಾಲ್ಕೂರು, ಸರಪಾಡಿ, ಉಳಿ ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿದೆ. ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದೊಂದು ತಿಂಗಳಲ್ಲಿ 36 ಶಂಕಿತ ಡೆಂಗಿ ಪ್ರಕರಣಗಳು  ದಾಖಲಾಗಿದ್ದು, ಈ ಪೈಕಿ 7 ಮಂದಿಗೆ ಡೆಂಗಿ ದೃಢಪಟ್ಟಿದ್ದು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ 10 ಸಾವಿರಕ್ಕಿಂತ ಕಡಿಮೆ ಪ್ಲೇಟ್‌ಲೆಟ್ ಕಂಡು ಬಂದಲ್ಲಿ ಅವರನ್ನು ತಕ್ಷಣ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸುತ್ತಾರೆ ಎಂಬ ದೂರು ರೋಗಿಗಳಿಂದ ಕೇಳಿ ಬಂದಿದೆ. ಈ ವರ್ಷ ಅಂತಹ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಪುಷ್ಪಲತಾ ಹೇಳಿದರು.

ಆಶಾ ಕಾರ್ಯಕರ್ತೆಯರನ್ನು ಮನೆಗಳಿಗೆ ಕಳುಹಿಸಿ ಡೆಂಗಿ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಆಶಾ ಕಾರ್ಯಕರ್ತೆಯರಿಗೆ ಗ್ರಾಮ ಪಂಚಾಯಿತಿ ಅಥವಾ ಪುರಸಭೆಯಿಂದ ಇದಕ್ಕಾಗಿ ಹೆಚ್ಚಿನ ನೆರವು ಸಿಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಫಾಗಿಂಗ್ ನಡೆಸುವಲ್ಲಿ ಕೂಡಾ ಆರೋಗ್ಯ ಇಲಾಖೆ ನಿರಾಸಕ್ತಿ ತೋರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ಒಂದು ವಾರದಿಂದ ಚೆನ್ನಾಗಿ ಮಳೆಯಾಗುತ್ತಿದ್ದು ನುಸಿ ಕಾಟ ಕಡಿಮೆಯಾಗಿ ಡೆಂಗಿ ಪ್ರಕರಣವೂ ತಗ್ಗಲಿದೆ. ಡೆಂಗಿ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ
ಡಾ.ಅಶೋಕ್ ಕುಮಾರ್ ರೈ ತಾಲ್ಲೂಕು ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT