ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಪೌಡರ್‌ಗೂ ಬೇಡಿಕೆ ಇಲ್ಲ

ಉತ್ಪಾದನೆ 4.55 ಲಕ್ಷ ಲೀಟರ್‌: ಮಾರಾಟ 3.20 ಲಕ್ಷ ಲೀಟರ್‌
Last Updated 6 ಅಕ್ಟೋಬರ್ 2020, 3:10 IST
ಅಕ್ಷರ ಗಾತ್ರ

ಮಂಗಳೂರು: ಒಂದೆಡೆ ಹಾಲು ಉತ್ಪಾದನೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಹಾಲಿನ ಉತ್ಪನ್ನಗಳ ಮಾರಾಟ ಕಡಿಮೆಯಾಗಿದೆ. ಕೋವಿಡ್–19 ಅನ್‌ಲಾಕ್‌ ನಂತರವೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸಂಕಷ್ಟ ಮುಂದುವರಿದಿದೆ.

ಹೋಟೆಲ್‌ಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿದೆ. ಇನ್ನೊಂದೆಡೆ ಶಾಲೆ–ಕಾಲೇಜುಗಳು ಆರಂಭವಾಗದೇ ಇರುವುದರಿಂದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳೂ ಇಲ್ಲದಾಗಿದೆ. ಲಾಕ್‌ಡೌನ್‌ಗೆ ಮುನ್ನ ದಿನಕ್ಕೆ ಸರಾಸರಿ 3.34 ಲಕ್ಷ ಲೀಟರ್ ಹಾಲು ಮಾರಾಟ ಆಗುತ್ತಿತ್ತು. ಈಗ 3.20 ಲಕ್ಷ ಲೀಟರ್ ಮಾರಾಟ ಆಗುತ್ತಿದೆ. ಮೊಸರು ಮಾರಾಟವೂ ದಿನಕ್ಕೆ 64,015 ಕೆ.ಜಿ.ಯಿಂದ 42,336 ಕೆ.ಜಿಗೆ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹಾಲು ಮಾರಾಟ ಶೇ 4 ಮತ್ತು ಮೊಸರು ಶೇ 13ರಷ್ಟು ಕಡಿಮೆಯಾಗಿದೆ.

ಮಾರಾಟದಲ್ಲಿ ನಷ್ಟವಾದರೂ ಉತ್ಪಾದನೆಗೆ ಹಿನ್ನಡೆಯಾಗಿಲ್ಲ. ಹೊರ ಜಿಲ್ಲೆ, ರಾಜ್ಯ, ವಿದೇಶದಲ್ಲಿದ್ದವರು ತಮ್ಮ ಊರಿಗೆ ಬಂದು ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಡೇರಿಗೆ ಹಾಲು ನೀಡುವ ಪ್ರಮಾಣ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ. ಏಪ್ರಿಲ್ ತಿಂಗಳಲ್ಲಿ ದಿನಕ್ಕೆ ಸರಾಸರಿ 3.93 ಲಕ್ಷ ಲೀಟರ್‌ ಹಾಲು ಸರಬರಾಜು ಆಗುತ್ತಿದ್ದರೆ, ಸೆಪ್ಟೆಂಬರ್‌ನಲ್ಲಿ ಹಾಲಿನ ಪ್ರಮಾಣ 4.55 ಲಕ್ಷ ಲೀಟರ್‌ಗೆ ಏರಿದೆ.

ಪೌಡರ್‌ಗೂ ಬೇಡಿಕೆ ಇಲ್ಲ: ಮಾರ್ಚ್‌ಗೆ ಮುನ್ನ ಹಾಲಿನ ಪೌಡರ್‌ಗೂ ಬೇಡಿಕೆಯಿತ್ತು. ಆದರೆ ಸದ್ಯ ಎಲ್ಲ ಒಕ್ಕೂಟಗಳು ಪೌಡರ್ ಉತ್ಪಾದನೆಯಲ್ಲಿ ತೊಡಗಿದ್ದು, ಬೇಡಿಕೆಯೂ ಕಡಿಮೆಯಾಗಿದೆ. ಶಾಲೆಗಳಿಗೆ ಸರಬರಾಜು ನಿಂತಿದೆ. ಐಸ್‌ಕ್ರೀಂ ಉದ್ದಿಮೆಗಳಿಂದ ಬೇಡಿಕೆ ಬರುತ್ತಿಲ್ಲ. ಪೌಡರ್ ತಯಾರಿಸಲು ಒಂದು ಲೀಟರ್ ಹಾಲಿನ ಮೇಲೆ ಹೆಚ್ಚವರಿ ₹11 ವೆಚ್ಚವಾಗುತ್ತದೆ. 6 ತಿಂಗಳೊಳಗೆ ಉಪಯೋಗಿಸದೇ ಇದ್ದರೆ ನಷ್ಟವಾಗುತ್ತದೆ ಎಂದು ಒಕ್ಕೂಟದ ಅಧಿಕಾರಿಗಳು ಹೇಳುತ್ತಾರೆ.

ಒಕ್ಕೂಟವು ಕೋವಿಡ್‌ ಮಧ್ಯೆಯೂ ರೈತರಿಗೆ ಉತ್ತಮ ರೀತಿಯಲ್ಲಿ ನೆರವಾಗಿದೆ. ಮಾರುಕಟ್ಟೆ ವಿಷಯದಲ್ಲಿ ಕೆಎಂಎಫ್ ನಷ್ಟ ಅನುಭವಿಸುತ್ತಿದ್ದು, ವಾಣಿಜ್ಯ ಬಳಕೆ ಹೆಚ್ಚಾದರೆ ಚೇತರಿಸಿಕೊಳ್ಳಬಹುದು.
-ರವಿರಾಜ್ ಹೆಗ್ಡೆ
ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT