ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಪ್ರಯೋಗವೇ ನನ್ನ ಆಯ್ಕೆ: ವಿಜಯ ಕುಮಾರ್ ಕೊಡಿಯಾಲ್‌ಬೈಲ್

ಪ್ರೆಸ್‌ಕ್ಲಬ್‌ ಗೌರವ ಸ್ವೀಕರಿಸಿ ವಿಜಯಕುಮಾರ್ ಕೊಡಿಯಾಲ್‌ಬೈಲ್
Published 29 ಸೆಪ್ಟೆಂಬರ್ 2023, 2:34 IST
Last Updated 29 ಸೆಪ್ಟೆಂಬರ್ 2023, 2:34 IST
ಅಕ್ಷರ ಗಾತ್ರ

ಮಂಗಳೂರು: ‘ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಏಳು–ಬೀಳು ಕಂಡಿದ್ದೇನೆ. ಆದರೆ ಎಂದೂ ಏಕತಾನತೆಗೆ ಶರಣಾಗಿಲ್ಲ. ಯಾವತ್ತೂ ವಿಭಿನ್ನ ಪ್ರಯೋಗವೇ ನನ್ನ ಆಯ್ಕೆ’ ಎಂದು ರಂಗಕರ್ಮಿ, ಸಿನಿಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.

ಮಂಗಳೂರು ಪ್ರೆಸ್‌ಕ್ಲಬ್‌ನ ಗೌರವವನ್ನು ಗುರುವಾರ ಸ್ವೀಕರಿಸಿದ ಅವರು ಬಳಿಕ ನಡೆದ ಸಂವಾದದಲ್ಲಿ ತಮ್ಮ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದ ಪಯಣದ ಕುರಿತು ಅಭಿಪ್ರಾಯ ಹಂಚಿಕೊಂಡರು.

‘ನಾನು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ. ತಂದೆ ತೀರಿದ ಬಳಿಕ ಇಲ್ಲಿಗೆ ಬಂದೆ. ಕಷ್ಟದಿಂದ ಬಾಲ್ಯವನ್ನು ಕಳೆದಿದ್ದೇನೆ. ಮನೆಮನೆಗೆ ಪತ್ರಿಕೆ, ಹಾಲು ಹಾಕಿ ಪಿ.ಯು.ವರೆಗೆ ಶಿಕ್ಷಣ ಪಡೆದೆ. ಅಭಿನಯದ ತುಡಿತದಿಂದ ರಂಗಭೂಮಿಗೆ ಬಂದೆ. 1983ರಲ್ಲಿ ರಚಿಸಿದ ‘ತಯ್ಯ ತಕ ತಯ್ಯ’ ಚೊಚ್ಚಲ ನಾಟಕ ಅಷ್ಟೇನೂ ಯಶಸ್ವಿಯಾಗಲಿಲ್ಲ. ‘ಒರಿಯೆ ಮಗೆ’ ಮತ್ತು ‘ಒಂಜಿ ನಿಮಿಷ' ಯಶಸ್ವಿಯಾಯಿತು. ನಂತರ ರಚಿಸಿದ ‘ಒರಿಯರ್ದೊರಿ ಅಸಲ್’ ನಾಟಕದಿಂದ ರಂಗಭೂಮಿ ಬದುಕು ತಿರುವು ಪಡೆಯಿತು’ ಎಂದರು.

‘ನಮ್ಮ ತಂಡ ಇಬ್ಬಾಗವಾದಾಗ ‘ಒಯಿಕ್ಲಾ ಆವಂದಿನಕುಲು’ ನಾಟಕ ರಚಿಸಿದೆ. ಅದು ಅಷ್ಟಾಗಿ ಯಶಸ್ವಿಯಾಗಲಿಲ್ಲ. ಆದರೆ, ಅತ್ಯಂತ ತೃಪ್ತಿಕೊಟ್ಟ ನಾಟಕವದು. ತುಳು ರಂಗಭೂಮಿ ಹಾಸ್ಯನಾಟಕಗಳ ಏಕತಾನತೆಯಿಂದ ಕೂಡಿದ್ದಾಗ ‘ಶಿವಧೂತೆ ಗುಳಿಗೆ’ ರಚಿಸಿದೆ. ದೇಶ ವಿದೇಶಗಳಲ್ಲಿ ಪ್ರದರ್ಶನಗೊಂಡ ಈ ನಾಟಕ ರಂಗಭೂಮಿಗೆ ಹೊಸ ಆಯಾಮ ನೀಡಿದೆ. ಈ ತುಳು ನಾಟಕ ಈಗಾಗಲೇ 500 ಪ್ರದರ್ಶನಗಳನ್ನು ಪೂರೈಸಿದೆ. ಕನ್ನಡದಲ್ಲೂ ಪ್ರದರ್ಶನಗೊಳ್ಳುತ್ತಿದೆ.  ಮಲಯಾಳ ಪ್ರದರ್ಶನಕ್ಕೂ ಸಿದ್ಧತೆ ನಡೆದಿದೆ. ಮರಾಠಿಯಲ್ಲೂ ಪ್ರದರ್ಶಿಸುವ ಚಿಂತನೆ ಇದೆ. ಇನ್ನು ಪೌರಾಣಿಕ ನಾಟಕ ಮಾಡುವುದಿಲ್ಲ’ ಎಂದರು. 

‘ಸಿನಿಮಾ ವೀಕ್ಷಣೆಯ ಅನುಭವವನ್ನೇ ಕಟ್ಟಿಕೊಡುವ ‘ಮೈತಿದಿ’ ನಾಟಕ ಈಗಾಗಲೇ ಮೂರು ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದು, ಶೀಘ್ರವೇ ನಗರದಲ್ಲೂ ಪ್ರದರ್ಶನಗೊಳ್ಳಲಿದೆ’ ಎಂದರು.

‘ಕಂಬಳ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಕ್ರಿಕೆಟ್‌ ಕಥಾಹಂದರವಿರುವ ಸಿನಿಮಾಕ್ಕೆ ಚಿತ್ರಕತೆ ಸಿದ್ಧಪಡಿಸಿದ್ದೇನೆ.  ತುಳುನಾಡಿನ ಹಿರಿಮೆಯನ್ನು ಕಟ್ಟಿಕೊಡುವ ‘ತುಳುವೆ’, ಭೂಗತ ಜಗತ್ತಿನ ಕಥಾವಸ್ತುವಿರುವ`ಕೊಡಿಯಾಲ್‌ಬೈಲ್' ಚಿತ್ರಕತೆ  ಸಿದ್ಧವಾಗುತ್ತಿದೆ. ಚಾರಿತ್ರಿಕ ಕಥೆ ಆಧರಿಸಿದ ‘ಶಿವಾಜಿ’ ಸಿನಿಮಾ ನಿರ್ಮಿಸುವ ಬಯಕೆ ಇದೆ. ದೇವದಾಸ್‌ ಕಾಪಿಕಾಡ್‌ ಅವರಿಗೆ ಹೊಂದುವ  ಚಿತ್ರಕತೆ ಸಿದ್ಧವಿದ್ದು, ಅವರು ಒಪ್ಪಿದರೆ ಸಿನಿಮಾ ಮಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತುಳು ಸಿನಿಮಾ ಸೋಲಬಹುದು. ಆದರೆ, ಈ ನೆಲದಲ್ಲಿ ಜಾತ್ರೆ ಉತ್ಸವಗಳು ನಡೆಯುವವರೆಗೆ ತುಳು ರಂಗಭೂಮಿಗೆ ಸಾವಿಲ್ಲ. ತುಳು ಸಿನಿಮಾಗಳಿಗೆ ಜನ ಬರುತ್ತಿಲ್ಲ ಎಂಬುದು ನಿಜ. ಪ್ರೇಕ್ಷಕರ ಕೊರತೆ ಇದೆ ಎಂಬುದು ಇದರರ್ಥವಲ್ಲ. ಹಾಸ್ಯ ಕಥಾನಕದ ಏಕತಾನತೆಯಿಂದ ಹೊರಬಂದು ಪ್ರೇಕ್ಷಕರಿಗೆ ರುಚಿಸುವ ವಿಭಿನ್ನ ಪ್ರಯೋಗಗಳನ್ನು ಮಾಡಬೇಕಿದೆ’ ಎಂದರು.    

‘ನಮ್ಮ ಕುಡ್ಲ’ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,  ಪತ್ರಕರ್ತ ಪುಷ್ಪರಾಜ್ ಬಿ.ಎನ್, ಪತ್ರಿಕಾ ಭವನ ಟ್ರಸ್ಟ್‌ನ ರಾಮಕೃಷ್ಣ ಇದ್ದರು. ವಿಜಯ್ ಕೋಟ್ಯಾನ್ ನಿರೂಪಿಸಿದರು. ಜಿತೇಂದ್ರ ಕುಂದೇಶ್ವರ ವಂದಿಸಿದರು.

Cut-off box - ‘ಶಿವಧೂತೆ ಗುಳಿಗೆ’ 4 ಭಾಷೆಗಳಲ್ಲಿ ಸತತ ಪ್ರದರ್ಶನ’ ‘ಒಂದೇ ತಂಡವನ್ನು ಬಳಸಿ ‘ಶಿವಧೂತೆ ಗುಳಿಗೆ’ ನಾಟಕವನ್ನು ನಾಲ್ಕು (ತುಳು ಕನ್ನಡ ಮಲಯಾಳ ಮರಾಠಿ) ಬೇರೆ ಬೇರೆ ಭಾಷೆಗಳಲ್ಲಿ ಪ್ರದರ್ಶಿಸುವ ಮೂಲಕ ಗಿನ್ನೆಸ್ ಅಥವಾ ಲಿಮ್ಕಾ ದಾಖಲೆ ನಿರ್ಮಿಸಬೇಕೆಂಬ ಹಂಬಲವಿದೆ.  ಇದಕ್ಕೆ ತಯಾರಿ ನಡೆಯುತ್ತಿದೆ. ಒಂದೇ ನಾಟಕವನ್ನು ಒಂದೇ ತಂಡ ಮೂರಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರದರ್ಶಿಸಿದ ನಿದರ್ಶನವಿಲ್ಲ’ ಎಂದು ವಿಜಯ ಕುಮಾರ್ ಕೊಡಿಯಾಲ್‌ಬೈಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT