ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡದಲ್ಲಿ ಈಸ್ಟರ್: ಮನೆ–ಮನಗಳಲ್ಲಿ ಪುನರುತ್ಥಾನದ ಸಂಭ್ರಮ

ಯೂ ಟ್ಯೂಬ್, ಸಾಮಾಜಿಕ ಜಾಲತಾಣದ ಮೂಲಕ ಆರಾಧನೆ
Last Updated 12 ಏಪ್ರಿಲ್ 2020, 12:53 IST
ಅಕ್ಷರ ಗಾತ್ರ

ಮಂಗಳೂರು: ಯೇಸು ಕ್ರಿಸ್ತರು ಪುನರುತ್ಥಾನಗೊಂಡ ‘ನವ ಜೀವನ’ದ ಶುಭ ದಿನದ ಈಸ್ಟರ್ ಜಿಲ್ಲೆಯಾದ್ಯಂತ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಮನೆಯಲ್ಲಿಯೇ ಆಚರಿಸಿದರು.

ಈಸ್ಟರ್‌ ಹಿಂದಿನ ದಿನ (ಶನಿವಾರ ರಾತ್ರಿ) ಪಾಸ್ಕಾ ಜಾಗರಣೆ (ಈಸ್ಟರ್ ವಿಜಿಲ್) ವಿಧಿ ವಿಧಾನಗಳನ್ನು ನಗರದ ರೊಜಾರಿಯೊ ಕ್ಯಾಥಡ್ರಾಲ್‌ ಚರ್ಚ್‌ನಲ್ಲಿ ಧರ್ಮಪ್ರಾಂತದ ಅಧ್ಯಕ್ಷ (ಬಿಷಪ್) ಡಾ.ಪೀಟರ್ ಪಾವ್ಲ್‌ ಸಲ್ಡಾನ ನೆರವೇರಿಸಿದರು. ಧಾರ್ಮಿಕ ವಿಧಿಗಳನ್ನು ಟಿವಿ, ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ ಮಾಡಲಾಗಿದ್ದು, ಕ್ರೈಸ್ತರು ತಮ್ಮ ತಮ್ಮ ಮನೆಯಲ್ಲಿಯೇ ಆಚರಿಸಿದರು. ಹೊಸಬಟ್ಟೆತೊಟ್ಟು ಈಸ್ಟರ್‌ ವಿಜಿಲ್ ಸಂಭ್ರಮಿಸಿದರು.

‘ಪ್ರತಿವರ್ಷ ಸಾಮುದಾಯಿಕವಾಗಿ ಆಚರಣೆಗಳು ನಡೆಯುತ್ತವೆ. ಈ ಬಾರಿ ಅದೇ ಶ್ರದ್ಧಾಭಕ್ತಿಯಿಂದ ಮನೆಯಲ್ಲಿಯೇ ಆಚರಣೆ ಮಾಡಿದ್ದಾರೆ. ಬಿಷಪ್ ನೇತೃತ್ವ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಆರಾಧನಾ ವಿಧಾನಗಳ ಅಗತ್ಯ ಪರಿಕರಗಳನ್ನೆಲ್ಲ ಈ ಹಿಂದೆಯೇ ಎಲ್ಲರ ಮನೆಗಳಿಗೆ ತಲುಪಿಸಲಾಗಿತ್ತು’ ಎಂದು ಫಾದರ್ ವಿಜಯ ವಿಕ್ಟರ್ ವಿವರಿಸಿದರು.

ಈಸ್ಟರ್‌ ಹಬ್ಬದ ಭಾನುವಾರದ ಆಚರಣೆಗಳನ್ನು ಬಿಷಪ್ ತಮ್ಮ ಅಧಿಕೃತ ನಿವಾಸದ ಲೇಡಿ ಆಫ್ ಡಾಲರ್ಸ್ ಚಾಪೆಲ್ ಆರಾಧನಾಲಯದಲ್ಲಿ ನೆರವೇರಿಸಿದ್ದು, ಆನ್‌ಲೈನ್ ಮೂಲಕ ಕ್ರೈಸ್ತ ಬಾಂಧವರು ಪಾಲ್ಗೊಂಡರು. ಆಶೀರ್ವಚನ, ಈಸ್ಟರ್ ಕ್ಯಾಂಡಲ್ ಪ್ರತಿಷ್ಠಾಪನೆ, ಹೊಸ ನೀರಿನ ಆಶೀರ್ವಚನ ವಿಧಿವಿಧಾನಗಳು ಜರುಗಿತು.

‘ಅನಿಶ್ಚಿತತೆಯ ಕಾರ್ಮೋಡ ಮರೆಯಾಗಿ ದೇಶ, ಲೋಕಕ್ಕೆ ಕಲ್ಯಾಣವಾಗಲಿ. ಸಂತೋಷ ಹಾಗೂ ತೃಪ್ತಿ ಎಲ್ಲರಿಗೂ ಲಭಿಸಲಿ. ಎಲ್ಲರಿಗೂ ಪಾಸ್ಕಾ ಹಬ್ಬ ಶುಭವಾಗಲಿ’ ಎಂದು ಬಿಷಪ್ ಸಂದೇಶ ನೀಡಿದರು.

ಮನೆಗಳಲ್ಲಿ:ಭಾನುವಾರ ಬೆಳಿಗ್ಗೆ ಹೊಸ ಬಟ್ಟೆ ಧರಿಸಿ, ಕ್ಯಾಂಡಲ್ ಹಚ್ಚಿ ತಮ್ಮ ಮನೆಯ ಸದಸ್ಯರು ಒಡಗೂಡಿ ಪ್ರಾರ್ಥನೆ ಸಲ್ಲಿಸಿದರು. ಬೈಬಲ್ ಪಠಣ ಮಾಡಿದರು.

ಇದೇ ಸಂದರ್ಭದಲ್ಲಿ ಬಿಷಪ್ ನಿವಾಸದಲ್ಲಿ ನಡೆದ ಆಚರಣೆಗಳನ್ನು ಯೂ ಟ್ಯೂಬ್‌ನಲ್ಲಿ ಡಿವೈನ್ ವರ್ಲ್ಡ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿ, ಕೃತಾರ್ಥರಾದರು. ಆದರೆ, ಪ್ರತಿ ಹಬ್ಬದ ಸಂದರ್ಭದಲ್ಲೂ ಗಿಜಿಗಿಡುತ್ತಿದ್ದ ಚರ್ಚ್‌ಗಳ ಆವರಣವು ಲಾಕ್‌ಡೌನ್ ಪರಿಣಾಮ ಮೌನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT