ಪುತ್ತೂರು: ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡ್ನೂರು ಗ್ರಾಮದ ಕಾವು ಸಮೀಪದ ಅಮ್ಚಿನಡ್ಕ, ಮುಖಾರಿಮೂಲೆ ಪರಿಸರಕ್ಕೆ ಕಾಡಾನೆಗಳು ಗುರುವಾರ ರಾತ್ರಿ ದಾಳಿ ಮಾಡಿದ್ದು, ಮೂವರು ಕೃಷಿಕರ ಬೆಳೆ ಹಾನಿ ಮಾಡಿವೆ.
ಅಮ್ಚಿನಡ್ಕ ಸಮೀಪ ಇರುವ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯ ರಾಘವೇಂದ್ರ ಭಟ್ ಅವರ ತೋಟಕ್ಕೆ ಭಾನುವಾರ ರಾತ್ರಿ ಕಾಡಾನೆ ಬಂದು ಸುಮಾರು 10 ಬಾಳೆಗಿಡಗಳನ್ನು ನಾಶ ಮಾಡಿತ್ತು. ಕುಮಾರ್ ಪೆರ್ನಾಜೆ ಅವರ ತೋಟದ ಮಧ್ಯೆ ಇರುವ ಕೆರೆಗೆ ಇಳಿದಿತ್ತು. ಮೂರು ದಿನಗಳ ಬಳಿಕ ಮತ್ತೆ ಕಾಡಾನೆಗಳು ಕಾವು ಸಮೀಪದ ಅಮ್ಚಿನಡ್ಕ ಪರಿಸರಕ್ಕೆ ದಾಳಿ ಮಾಡಿದ್ದು, ಎರಡು ಕಾಡಾನೆಗಳು ಬಂದಿರಬಹುದೆಂದು ಅಲ್ಲಿನ ಕೃಷಿಕರು ಮಾಹಿತಿ ನೀಡಿದ್ದಾರೆ.
ಅಮ್ಚಿನಡ್ಕದ ಮುರಳಿಸ್ಟೋರ್‌ನ ಶರತ್‌ಕುಮಾರ್ ರೈ ಅವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಬಾಳೆಹಿಂಡು, ಅಡಿಕೆ, ತೆಂಗಿನ ಗಿಡಗಳನ್ನು, ಈಚಲು ಮರವನ್ನು ನಾಶ ಮಾಡಿದೆ. ಮುಖಾರಿಮೂಲೆಯ ಅಬ್ದುಲ್ ರಝಾಕ್ ಅವರ ಬಾಳೆ ಗಿಡ, ತೆಂಗು ಮತ್ತು ಅಡಿಕೆ ಗಿಡಗಳನ್ನು, ಪೈಪ್ ಲೈನ್, ತೋಟದ ಬೇಲಿಯನ್ನೂ ನಾಶ ಮಾಡಿವೆ.
ವಲಯ ಅರಣ್ಯಾಧಿಕಾರಿಗಳಾದ ಪಾಣಾಜೆ ವಲಯದ ಮದನ್, ಆನೆಗುಂಡಿ ವಲಯದ ಸೌಮ್ಯಾ, ಅರಣ್ಯ ಇಲಾಖೆಯ ಪ್ರಧಾನ ಕಚೇರಿಯ ಬಿ.ಟಿ.ಪ್ರಕಾಶ್, ಕುಮಾರಸ್ವಾಮಿ, ಫಾರೆಸ್ಟ್ ಗಾರ್ಡ್ ದೀಕ್ಷಿತ್ ಅವರು ಶುಕ್ರವಾರ ಅಂಕೋತಿಮಾರು ಪ್ರದೇಶಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ.
ಆನೆಗುಂಡಿ ರಕ್ಷಿತಾರಣ್ಯದಿಂದ ಕಾಡಾನೆಗಳು ಅಮ್ಚಿನಡ್ಕ -ಮುಖಾರಿಮೂಲೆ ಪರಿಸರಕ್ಕೆ ಬಂದಿದ್ದು, ಮತ್ತೆ ಕೃಷಿ ನಾಶ ಮಾಡುವ ಸಾಧ್ಯತೆ ಇದೆ. ಕುಡಿಯುವ ನೀರು ಸರಬರಾಜು ಯೋಜನೆಯ ಪಂಪ್ ಹೌಸ್ ಇದೇ ಪರಿಸರದಲ್ಲಿ ಇದ್ದು, ನೀರಿನ ಆಪರೇಟರ್ ವಿದ್ಯುತ್ ಸ್ವಿಚ್ ಹಾಕಲು ರಾತ್ರಿ ವೇಳೆಯೂ ಅಲ್ಲಿಗೆ ಹೋಗಬೇಕಾಗುತ್ತದೆ. ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.