ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿನ ನಂಬರ್ ಪ್ಲೇಟ್‌ನಲ್ಲಿ ದೇವರ ಸ್ಟಿಕರ್; ಪ್ರಶ್ನಿಸಿದ್ದಕ್ಕೆ ಆಕ್ರೋಶ

Last Updated 31 ಆಗಸ್ಟ್ 2021, 13:45 IST
ಅಕ್ಷರ ಗಾತ್ರ

ಉಳ್ಳಾಲ: ಕಾರಿನ ನಂಬರ್ ಪ್ಲೇಟ್‌ನಲ್ಲಿ ಅಂಟಿಸಿರುವ ಸ್ಟಿಕರ್ ಕಂಡು ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ವಾಹನವನ್ನು ತಡೆದು ನಿಲ್ಲಿಸಿದ ಬಗ್ಗೆ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದರು.

ನಂಬರ್ ಪ್ಲೇಟ್‌ನಲ್ಲಿ ‘ಟೀಂ ಪರಶುರಾಮ ಹಾಗೂ ಧರ್ಮೋ ರಕ್ಷತಿ ರಕ್ಷಿತ:’ ಅನ್ನುವ ಸ್ಟಿಕ್ಕರ್ ಹಾಗೂ ಗಾಜಿನಲ್ಲಿ ಅಳವಡಿಸಿದ ಓಂ ಸಾಯಿ ಮತ್ತು ಸ್ವಾಮಿ ಕೊರಗಜ್ಜ ಸ್ಟಿಕರ್ ಇರುವುದನ್ನು ತೆಗೆಯಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಎಎಸ್ಐ ವಿರುದ್ಧ ಹಿಂದುತ್ವ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ ಕಾರಣ ತೊಕ್ಕೊಟ್ಟು ಫ್ಲೈ ಓವರ್ ಕೆಳಭಾಗದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬಬೀಶ್ ಪೂಜಾರಿ ಎಂಬುವರು ಮಾರುತಿ ಕಾರಿನಲ್ಲಿ ತೊಕ್ಕೊಟ್ಟು ಫ್ಲೈ ಓವರ್ ಕೆಳಗಿನಿಂದ ಹೋಗುತ್ತಿದ್ದ ಸಂದರ್ಭದಲ್ಲಿ ನಾಗುರಿ ಸಂಚಾರಿ ಠಾಣಾ ಎಎಸ್‌ಐ ಆಲ್ಬರ್ಟ್ ಲಸ್ರಾದೊ ಅವರು ಪರಿಶೀಲನೆಗಾಗಿ ನಿಲ್ಲಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ನಂತರ, ಕಾರಿನ ನಂಬರ್‌ ಪ್ಲೇಟ್‌ನಲ್ಲಿ ಸ್ಟಿಕರ್‌ ಅಂಟಿಸಿರುವುದು ಕಾನೂನು ವಿರುದ್ಧವಾಗಿದೆ ಹಾಗೂ ಕಾರಿನ ಗಾಜಿನಲ್ಲಿಯೂ ಸ್ಟಿಕ್ಕರ್‌ ಅಂಟಿಸಲಾಗಿದೆ, ಅದಕ್ಕಾಗಿ ದಂಡ ಪಾವತಿಸಬೇಕು ಎಂದು ಹೇಳಿದ್ದಾರೆ. ‘ಕಾರಿನಲ್ಲಿರುವುದು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸ್ಟಿಕರ್‌, ಇದನ್ನು ತೆಗೆಯುವುದಿಲ್ಲ’ ಎಂದು ಕಾರು ಚಾಲಕ ಬಬೀಶ್‌ ಪೂಜಾರಿ ಆಕ್ರೋಶ ವ್ಯಕ್ತಪಡಿಸಿ, ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್‌ ಪಂಡಿತ್‌ ಹೌಸ್‌, ಕಾರ್ಯಕರ್ತರು ಎಎಸ್‌ಐ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಂದೂಗಳ ಆರಾಧನೆಗೆ ಸಂಬಂಧಿಸಿದ ಸ್ಟಿಕರ್‌ ಅನ್ನು ಕಾರಿನಲ್ಲಿ ಅಳವಡಿಸಲಾಗಿದೆ. ಇದನ್ನು ಮತೀಯ ಆಧಾರದಲ್ಲಿ ನೋಡಿ, ತೆಗೆಯಲು ಒತ್ತಾಯಿಸಿದ್ದಾರೆ. ಹಿಂದೂ ಧರ್ಮಕ್ಕೆ ವಿರೋಧಿಸುವ ಎಎಸ್‌ಐ ಕರ್ತವ್ಯದಲ್ಲಿ ಇರಬಾರದು. ಕ್ರಮಕ್ಕೆ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ನ ಅರ್ಜುನ್‌ ಮಾಡೂರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT