ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ: ಬೇಕಿದೆ ಆಟದ ಮೈದಾನ

Published 14 ಅಕ್ಟೋಬರ್ 2023, 5:51 IST
Last Updated 14 ಅಕ್ಟೋಬರ್ 2023, 5:51 IST
ಅಕ್ಷರ ಗಾತ್ರ

ಮೂಡುಬಿದಿರೆ: ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಇಲ್ಲಿನ ಜ್ಯೋತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಸಜ್ಜಿತ ಆಟದ ಮೈದಾನವೇ ದೊಡ್ಡ ಕೊರತೆಯಾಗಿದೆ.

ಕೂಲಿ ಕಾರ್ಮಿಕರ ಮಕ್ಕಳು, ಪರಿಶಿಷ್ಟ ಜಾತಿ ವಸತಿ ನಿಲಯದಲ್ಲಿ ಉಳಿದು ಬರುವ ವಿದ್ಯಾರ್ಥಿಗಳೇ ಹೆಚ್ಚಿರುವ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 129 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ನಾಲ್ವರು ಕಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಇದ್ದಾರೆ. ಇವರಲ್ಲಿ ಒಬ್ಬ ಅತಿಥಿ ಶಿಕ್ಷಕರಿಗೆ ಶಾಲೆಯ ಹಳೆ ವಿದ್ಯಾರ್ಥಿಯೊಬ್ಬರು ತಿಂಗಳ ಗೌರವ ಧನ ನೀಡಿ ಸಹಕರಿಸುತ್ತಿದ್ದಾರೆ.

‘ಸರ್ಕಾರಿ ಶಾಲೆಗೆ ಎರಡು ಎಕರೆಯಷ್ಟು ವಿಸ್ತಾರವಾದ ಜಾಗವಿದೆ. ಮುಂಭಾಗದಲ್ಲಿ ಸಣ್ಣ ಮೈದಾನ ಇದ್ದರೂ ಇಲ್ಲಿ ಮಕ್ಕಳಿಗೆ ಆಟವಾಡಲು ಇಕ್ಕಟ್ಟಾಗುತ್ತದೆ. ಸುತ್ತಮುತ್ತಲಿನ ಜಾಗವನ್ನು ಸಮತಟ್ಟುಗೊಳಿಸಿ ಮೈದಾನ ಮಾಡಿದರೆ, ಮಕ್ಕಳಿಗೆ ಆಟವಾಡಲು ಅನುಕೂಲ. ಈ ಶಾಲೆಯ ಮಕ್ಕಳಿಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇದೆ. ಹೀಗಾಗಿ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನೂ ನೇಮಿಸಬೇಕು’ ಎಂದು ಶಿಕ್ಷಣ ಪ್ರೇಮಿ ಶಿವಾನಂದ ಪ್ರಭು ಒತ್ತಾಯಿಸಿದರು.

‘ಶಾಲೆಯ ಮುಂಭಾಗದಲ್ಲಿ ಮಾತ್ರ ಕಾಂಪೌಂಡ್ ಇದೆ. ಇದು ಕೂಡ ಹಳೆಯದಾಗಿದೆ. ಉಳಿದ ದಿಕ್ಕುಗಳಲ್ಲಿ ಕಾಂಪೌಂಡ್ ಇಲ್ಲ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುತ್ತಲೂ ಕಾಂಪೌಂಡ್ ನಿರ್ಮಾಣವಾಗಬೇಕು. ನಲಿ–ಕಲಿ ತರಗತಿಗೆ ಉಳಿದ ಶಾಲೆಗಳಂತೆ ಇಲ್ಲಿಗೂ ರೌಂಡ್ ಟೇಬಲ್‌ ಅನ್ನು ಶಿಕ್ಷಣ ಇಲಾಖೆ ನೀಡುವ ಮೂಲಕ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು’ ಎಂದು ಆಗ್ರಹಿಸಿದರು.

ಅವರು ಈ ವಿಷಯ ಹೇಳುತ್ತಿರುವಾಗಲೇ ತಾಟನ್ನು ಹಿಡಿದು ಮಧ್ಯಾಹ್ನದ ಬಿಸಿಯೂಟಕ್ಕೆ ಹೊರಟಿದ್ದ ವಿದ್ಯಾರ್ಥಿನಿಯರು, ದೊಡ್ಡ ಮೈದಾನ ಇದ್ದರೆ ಆಟವಾಡಲು ಒಳ್ಳೆಯದಾಗುತ್ತದೆ ಎನ್ನುತ್ತ ಊಟದ ಕೊಠಡಿಯೆಡೆಗೆ ಸಾಗಿದರು.

‘ಶಾಲೆಯಲ್ಲಿ ಕಂಪ್ಯೂಟರ್‌ಗಳು, ಗ್ರಂಥಾಲಯ ಇವೆ. ಐದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಕಂಪ್ಯೂಟರ್ ತರಗತಿಗಳು ನಡೆಯುತ್ತವೆ. ಸ್ಪರ್ಧಾತ್ಮಕ ಶಿಕ್ಷಣಕ್ಕೆ ಮಕ್ಕಳನ್ನು ಅಣಿಗೊಳಿಸುವ ದಿಸೆಯಲ್ಲಿ ಸಣ್ಣ ಮಕ್ಕಳಿಗೂ ಕಂಪ್ಯೂಟರ್‌ ಜ್ಞಾನ ನೀಡುತ್ತೇವೆ. ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಉದ್ಯಮಿ ರಾಜೇಶ್ ಮಲ್ಯ, ಎಸ್‌ಡಿಎಂಸಿ, ದಾನಿಗಳು, ಸಂಘ–ಸಂಸ್ಥೆಗಳ ಸಹಕಾರದಿಂದ ಶಾಲೆಗೆ ಅನೇಕ ಸೌಲಭ್ಯಗಳು ದೊರೆತಿವೆ’ ಎಂದು ಮುಖ್ಯ ಶಿಕ್ಷಕಿ ಅಪೋಲಿನ್ ಮೋನಿಸ್ ಸ್ಮರಿಸಿದರು.

ನಮ್ಮ ಶಾಲೆಯ ಮಕ್ಕಳು ಕಬಡ್ಡಿ ಮತ್ತು ಥ್ರೋಬಾಲ್‌ನಲ್ಲಿ ತಾಲ್ಲೂಕು ಮಟ್ಟದಲ್ಲಿ ಬಹುಮಾನ ಪಡೆದು ಜಿಲ್ಲಾ ಮಟ್ಟದಲ್ಲೂ ಉತ್ತಮವಾಗಿ ಆಟವಾಡಿದ್ದಾರೆ.
–ಅಪೋಲಿನ್ ಮೋನಿಸ್, ಮುಖ್ಯ ಶಿಕ್ಷಕಿ
ಮೂಡುಬಿದಿರೆಯ ಜ್ಯೋತಿ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಖುಷಿಯಲ್ಲಿ ಮಕ್ಕಳು
ಮೂಡುಬಿದಿರೆಯ ಜ್ಯೋತಿ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಖುಷಿಯಲ್ಲಿ ಮಕ್ಕಳು
ಶಾಲೆ ಹಿಂಭಾಗದ ಖಾಲಿ ಜಾಗ
ಶಾಲೆ ಹಿಂಭಾಗದ ಖಾಲಿ ಜಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT