ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಯಾಲಿಸಿಸ್ ಕೇಂದ್ರಗಳ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ: ದಿನೇಶ್ ಗುಂಡೂರಾವ್

ಮುಷ್ಕರ ಕೈಬಿಡಿ– ಸಿಬ್ಬಂದಿಯನ್ನು ಕೋರಿದ ಆರೋಗ್ಯ ಸಚಿವ
Published : 2 ಡಿಸೆಂಬರ್ 2023, 23:30 IST
Last Updated : 2 ಡಿಸೆಂಬರ್ 2023, 23:30 IST
ಫಾಲೋ ಮಾಡಿ
Comments

ಮಂಗಳೂರು: ‘ಡಯಾಲಿಸಿಸ್ ಕೇಂದ್ರಗಳ ಕಾರ್ಯನಿರ್ವಹಣೆಗೆ ಎದುರಾಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದೇವೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

‘ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಅವರು ಮನವಿ ಮಾಡಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಮುಷ್ಕರದಿಂದ ರೋಗಿಗಳಿಗೆ  ಸಮಸ್ಯೆ ಆಗುವುದನ್ನು ತಪ್ಪಿಸಲು ಆಯಾ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಯೇ ಸದ್ಯಕ್ಕೆ ಡಯಾಲಿಸಿಸ್ ಕಾರ್ಯವನ್ನೂ ನಿರ್ವಹಿಸಬೇಕು ಎಂದು ಸೂಚಿಸಿದ್ದೇನೆ’ ಎಂದರು.

‘ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕ ಗೊಂಡಿದ್ದ ಬಿಆರ್‌ಎಸ್‌ ಏಜೆನ್ಸಿ ಅರ್ಧದಲ್ಲೇ ಕೆಲಸ ಸ್ಥಗಿತಗೊಳಿಸಿತ್ತು. ಆಗ ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆಯ ಹೊಣೆಯನ್ನು ಇಎಸ್‌ಕೆಇಜಿ ಸಂಸ್ಥೆಗೆ ಆಗಿನ ಸರ್ಕಾರ ವಹಿಸಿತ್ತು. ಆ ಸಂಸ್ಥೆಯು ಡಯಾಲಿಸಿಸ್ ಕೇಂದ್ರಗಳನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಸಿಬ್ಬಂದಿಗೆ ವೇತನವನ್ನೂ ಸರಿಯಾಗಿ ನೀಡುತ್ತಿರಲಿಲ್ಲ. ಸಿಬ್ಬಂದಿಯ ಇಎಸ್‌ಐ ಮತ್ತು ಭವಿಷ್ಯ ನಿಧಿ  ಹಣವನ್ನು ಕಟ್ಟಿಲ್ಲ’ ಎಂದರು.

‘ಸಿಬ್ಬಂದಿಯ ಇಎಸ್‌ಐ, ಪಿ.ಎಫ್‌ ಹಣವನ್ನು ಇಲಾಖೆಯಿಂದಲೇ ಭರಿಸಬೇಕಾದರೆ ಗುತ್ತಿಗೆ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಪ್ರಕ್ರಿಯೆ ಶುರುವಾಗಿದೆ. ಸಿಬ್ಬಂದಿಗೆ  ಎರಡು ತಿಂಗಳ ಬಾಕಿ ವೇತನವನ್ನು ಇಲಾಖೆಯಿಂದ ನೀಡುವುದಕ್ಕೆ ಆರ್ಥಿಕ ಇಲಾಖೆಯ ಅನುಮತಿ ಕೋರಿದ್ದೇವೆ’ ಎಂದರು.

‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರಗಳಿಗೆ 800 ಹೊಸ ಡಯಾಲಿಸಿಸ್ ಯಂತ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಸಲಾಗುತ್ತಿದೆ. ಇವುಗಳ ನಿರ್ವಹಣೆಗೆ ಮೈಸೂರು, ಬೆಳಗಾವಿ ಕಲಬುರಗಿ ಮತ್ತು ಬೆಂಗಳೂರು ಸೇರಿದಂತೆ ನಾಲ್ಕೂ ವಿಭಾಗಗಳಲ್ಲಿ ಹೊಸ ಟೆಂಡರ್ ಆಹ್ವಾನಿಸಿದ್ದೇವೆ. ಮೈಸೂರು ಮತ್ತು ಬೆಂಗಳೂರು ವಿಭಾಗಗಳ ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ’ ಎಂದರು.

‘ಹೊಸ ಏಜನ್ಸಿಯವರು ಸೇವೆಯನ್ನು ಸರಿಯಾಗಿ ನೀಡದಿದ್ದರೆ, ಇಲಾಖೆಯಿಂದಲೇ ಯಂತ್ರಗಳನ್ನ ಖರೀದಿಸಿ ಡಯಾಲಿಸಿಸ್ ನಿರ್ವಹಿಸುವ ಚಿಂತನೆಯೂ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT