ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತ

7
15 ಗಂಟೆಗಳಿಂದಲೂ ರಸ್ತೆಯ ಮಧ್ಯೆ ಸಿಲುಕಿರುವ ವಾಹನಗಳು

ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತ

Published:
Updated:

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಮಾರ್ಗದಲ್ಲಿ ಮಂಗಳವಾರ ನಸುಕಿನ ಜಾವದಿಂದ ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, 15 ಗಂಟೆಗಳಿಂದ ಸಂಚಾರ ಸ್ಥಗಿತವಾಗಿತ್ತು. ನೂರಾರು ವಾಹನಗಳು ನಿಂತಿದ್ದು, ಸಾವಿರಾರು ಮಂದಿ ಮಾರ್ಗಮಧ್ಯೆ ಸಿಲುಕಿ ತೊಂದರೆ ಅನುಭವಿಸಿದರು.

ಸೋಮವಾರ ತಡರಾತ್ರಿ 2 ಗಂಟೆಯ ಬಳಿಕ ಸಕಲೇಶಪುರ ಸಮೀಪದ ಮಾರನಹಳ್ಳಿ ಸೇರಿದಂತೆ ಐದು ಕಡೆ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿತ್ತು. ಉದನೆ ಸಮೀಪ ಮರಗಳು ರಸ್ತೆಯ ಮೇಲೆ ಉರುಳಿಬಿದ್ದಿದ್ದವು. ಅಲ್ಲಿಯೇ ಗುಂಡ್ಯಹೊಳೆ ಪ್ರವಾಹದಿಂದ ರಸ್ತೆ ಮೇಲೆ ನೀರು ನಿಂತಿತ್ತು. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆಯಿಂದ ಸೋಮವಾರ ರಾತ್ರಿ ಪ್ರಯಾಣಿ ಆರಂಭಿಸಿದವರು ಮಂಗಳವಾರ ಇಡೀ ದಿನ ಶಿರಾಡಿ ಘಾಟಿಯಲ್ಲೇ ಕಳೆಯುವಂತಾಯಿತು.

ಭೂಕುಸಿತದ ಮಾಹಿತಿ ತಿಳಿಯುತ್ತಿದ್ದಂತೆಯೇ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದರು. ಆದರೆ, ಪದೇ ಪದೇ ಮಣ್ಣು ಕುಸಿಯುತ್ತಲೇ ಇದ್ದುದರಿಂದ ಕಾರ್ಯಾಚರಣೆಗೆ ಅಡ್ಡಿಯಾಯಿತು. ಎಡೆಬಿಡದೆ ಸುರಿಯುತ್ತಿರುವ ಮಳೆ ಕೂಡ ಕಾರ್ಯಾಚರಣೆ ವಿಳಂಬಕ್ಕೆ ಕಾರಣವಾಯಿತು. ಹತ್ತು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆ ಬಳಿಕ ರಸ್ತೆಯಲ್ಲಿದ್ದ ಮಣ್ಣನ್ನು ಪೂರ್ತಿಯಾಗಿ ತೆರವು ಮಾಡಲು ಸಾಧ್ಯವಾಯಿತು.

ಬಸ್‌ ಸಂಚಾರ ವ್ಯತ್ಯಯ:

ಮಂಗಳೂರಿನಿಂದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಸಂಚರಿಸುವ ನೂರಾರು ಬಸ್‌ಗಳು ಸೋಮವಾರ ರಾತ್ರಿ ಈ ಮಾರ್ಗದಲ್ಲಿ ಹೊರಟಿದ್ದವು. ಆದರೆ, ಭೂಕುಸಿತದಿಂದಾಗಿ ಎಲ್ಲ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕೆಎಸ್‌ಆರ್‌ಟಿಸಿಯ 170 ಸೇರಿದಂತೆ 300ಕ್ಕೂ ಹೆಚ್ಚು ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಮಧ್ಯಾಹ್ನ 3 ಗಂಟೆಯವರೆಗೂ ಕಾದು ನೋಡಿದ ಅಧಿಕಾರಿಗಳು, ಬಳಿಕ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್‌ಗಳನ್ನು ಪುನಃ ಸಕಲೇಶಪುರಕ್ಕೆ ವಾಪಸ್ ಕಳುಹಿಸಿ, ಅಲ್ಲಿಂದ ಚಾರ್ಮಾಡಿ ಮಾರ್ಗವಾಗಿ ಸಂಚರಿಸಲು ಅವಕಾಶ ಕಲ್ಪಿಸಿದರು. ಇತ್ತ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಕೆಲವು ಬಸ್‌ಗಳ ಸಂಚಾರ ಮಾರ್ಗದಲ್ಲೂ ಬದಲಾವಣೆ ಮಾಡಲಾಯಿತು.

‘ಕೆಎಸ್‌ಆರ್‌ಟಿಸಿಯ ಮಂಗಳೂರು ಘಟಕದ 100ಕ್ಕೂ ಹೆಚ್ಚು ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕರ್ನಾಟಕ ಸಾರಿಗೆ ಬಸ್‌ಗಳನ್ನು ಮಾತ್ರ ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಓಡಿಸಬಹುದು. ರಾಜಹಂಸ, ಸ್ಲೀಪರ್‌, ವೋಲ್ವೊ ಮತ್ತು ಮಲ್ಟಿ ಆ್ಯಕ್ಸೆಲ್‌ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ ಕುಮಾರ್ ತಿಳಿಸಿದರು.

‘ಪುತ್ತೂರು ಘಟಕದಲ್ಲೂ ಕರ್ನಾಟಕ ಸಾರಿಗೆ ಬಸ್‌ಗಳನ್ನು ಮಾತ್ರ ಓಡಿಸಲಾಗಿದೆ. ಚಾರ್ಮಾಡಿ ಮತ್ತು ಬಿಸಿಲೆ ಘಾಟಿ ಮಾರ್ಗಗಳಲ್ಲಿ ಕೆಲವು ಬಸ್‌ಗಳು ತೆರಳಿವೆ. ಬಿಸಿಲೆ ಘಾಟಿಯಲ್ಲೂ ಮರಗಳು ಉರುಳಿದರೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಸೋಮವಾರ ರಾತ್ರಿ ಹೊರಟಿರುವ ಬಹುತೇಕ ಬಸ್‌ಗಳು 10ರಿಂದ 12 ಗಂಟೆಗಳಷ್ಟು ತಡವಾಗಿ ತಲುಪಲಿವೆ’ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ಸಂಚಾರ ಅಧಿಕಾರಿ ಮುರಳೀಧರ ಆಚಾರ್ಯ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !