ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ರಿ ಗೋಪಾಲನಾಥ್ ಆಕಾಶವಾಣಿ ‘ಬಿ’ ಗ್ರೇಡ್ ಪರೀಕ್ಷೆ ಪಾಸಾದ ಕಥೆ

Last Updated 13 ಅಕ್ಟೋಬರ್ 2019, 2:56 IST
ಅಕ್ಷರ ಗಾತ್ರ

ಓರ್ವ ಮಹಾನ್ ಕಲಾವಿದನ ಜೀವನದಮೊದಲ ಹೆಜ್ಜೆಗಳು, ತೆಗೆದುಕೊಳ್ಳುವ ನಿರ್ಧಾರಗಳು ಅವರ ಜೀವನವನ್ನು ಮಾತ್ರವಲ್ಲ ನಾಡಿನ ಸಾಂಸ್ಕೃತಿಕ ಚರಿತ್ರೆಯ ದಿಕ್ಕನ್ನೂ ಪ್ರಭಾವಿಸುತ್ತವೆ. ಆಕಾಶವಾಣಿಯವಿಶ್ರಾಂತ ಸಹಾಯಕ ನಿರ್ದೇಶಕಡಾ.ಶಿವಾನಂದ ಬೇಕಲ್ ಅವರು ಬರೆದಿರುವ ಈ ಲೇಖನವುಸ್ಯಾಕ್ಸೊಫೋನ್ ಮಾಂತ್ರಿಕಕದ್ರಿ ಗೋಪಾಲನಾಥ್ ಅವರಿಗೆತಮ್ಮ ನುಡಿಸಾಣಿಕೆ ಬಗ್ಗೆ ಇದ್ದಶ್ರದ್ಧೆ ಮತ್ತುಆತ್ಮವಿಶ್ವಾಸವನ್ನೂ ಬಿಂಬಿಸುತ್ತದೆ.

---

1980ರ ಸಮಯ. ಮಂಗಳೂರು ಆಕಾಶವಾಣಿಯ ಪ್ರಾರಂಭಿಕ ದಿನಗಳವು. ನಾನು ಕಾರ್ಯಕ್ರಮ ನಿರ್ವಾಹಕನಾಗಿ ನಿಯುಕ್ತನಾಗಿದ್ದೆ. ನನಗೆ ಸಂಗೀತ ವಿಭಾಗದ ಉಸ್ತುವಾರಿಯನ್ನೂ ವಹಿಸಲಾಗಿತ್ತು. ಅದಾಗಲೇ ಕದ್ರಿ ಗೋಪಾಲನಾಥ್ ಅವರು ಸ್ಯಾಕ್ಸೋಫೋನ್‍ನಲ್ಲಿ ಓರ್ವ ಪ್ರಬುದ್ಧ ಕಲಾವಿದರಾಗಿ ಹೆಸರು ಮಾಡಲು ಪ್ರಾರಂಭಿಸಿದ್ದರು.

ನನಗಿನ್ನೂ ನೆನಪಿದೆ, ಕದ್ರಿಯವರು ಆಕಾಶವಾಣಿಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡುವ ಪ್ರಯುಕ್ತ ಪ್ರಾಥಮಿಕ ‘ಬಿ’ಗ್ರೇಡ್ ಪರೀಕ್ಷೆಗಾಗಿ ಕುಳಿತಿದ್ದರು. ಶಾಸ್ತ್ರೀಯ ಸಂಗೀತವಾಗಿದ್ದರಿಂದ ಅಂದಿನ ನಿಯಮಗಳ ಪ್ರಕಾರ ನಿಲಯದ ಮಟ್ಟದಲ್ಲಿ ಪ್ರಾಥಮಿಕ ಆಯ್ಕೆಯ ನಂತರ ಅವರ ಕಾರ್ಯಕ್ರಮದ ಧ್ವನಿಮುದ್ರಿಕೆಯನ್ನು ದೆಹಲಿಯ ನಮ್ಮ ಆಕಾಶವಾಣಿ ಮಹಾನಿರ್ದೇಶನಾಲಯಕ್ಕೆ ಕಳುಹಿಸಬೇಕಾಗಿತ್ತು. ನನಗಿನ್ನೂ ನೆನಪಿದೆ, ನಾನೇ ಮುತುವರ್ಜಿ ವಹಿಸಿ ಆ ಧ್ವನಿ ಮುದ್ರಣವನ್ನು ಮಾಡಿದ್ದೆ.

ತಮ್ಮ ಗುರು ಎನ್.ಗೋಪಾಲಕೃಷ್ಣ ಅಯ್ಯರ್ ಅವರೊಂದಿಗೆ ಕದ್ರಿ ಗೋಪಾಲನಾಥ್
ತಮ್ಮ ಗುರು ಎನ್.ಗೋಪಾಲಕೃಷ್ಣ ಅಯ್ಯರ್ ಅವರೊಂದಿಗೆ ಕದ್ರಿ ಗೋಪಾಲನಾಥ್

ಕಲಾವಿದನಲ್ಲಿರುವ ಹೆಚ್ಚಿನ ಪ್ರೌಢಿಮೆಯನ್ನು ಹೊರತರುವ ಸಲುವಾಗಿ ಅವರಿಗೆ ಧ್ವನಿಮುದ್ರಣ ಮನಸ್ಸಿಗೆ ಸಮಾಧಾನವಾಗುವ ತನಕ ಮಾಡಿ ಅದನ್ನು ಕೇಳಿಸುವ ಸಂಪ್ರದಾಯವಿದೆ. ಇವೆಲ್ಲ ಗೌಪ್ಯವಾಗಿಯೇ ನಡೆಯುವಂಥದ್ದು. ಮೊದಲ ಸರದಿಯ ಧ್ವನಿ ಮುದ್ರಣವನ್ನು ಕೇಳಿದ ಕದ್ರಿಯವರಿಗೆ ಅದು ಒಪ್ಪಿಗೆಯಾಗಲಿಲ್ಲ. ಇನ್ನೊಮ್ಮೆ ನುಡಿಸುತ್ತೇನೆ ಎಂದು ವಿನಂತಿಸಿಕೊಂಡರು. ಎರಡನೆಯ ಸಲವೂ ಧ್ವನಿಮುದ್ರಣ ನಡೆಸಿ ಅವರಿಗೆ ಕೇಳಿಸಲಾಯಿತು. ಅದೂ ಒಪ್ಪಿಗೆಯಾದಂತೆ ತೋರಲಿಲ್ಲ. ಅದಾಗಲೇ ಅವರು ತುಸು ಸುಸ್ತಾದವರಂತೆ ತೋರಿದರು. ನಾನು ಅವರನ್ನು ಇನ್ನೊಮ್ಮೆ ನುಡಿಸುವಂತೆ ಕೇಳಿದೆ. ಮರುದಿನವಾದರೆ ಬಹಳ ಅನುಕೂಲವೆಂದರು. ಮರುದಿನಕ್ಕೆ ಮತ್ತೆ ಧ್ವನಿಮುದ್ರಣವನ್ನು ನಿಗದಿತಗೊಳಿಸಲಾಯಿತು.

ಮರುದಿನದ ಅವರ ಕಾರ್ಯಕ್ರಮ ಅದ್ವಿತೀಯವಾಗಿತ್ತು. ನಮ್ಮೆಲ್ಲರಿಗೂ ಒಪ್ಪಿತವಾಯಿತು. ಅವರಿಗೂ ಖುಷಿಕೊಟ್ಟಿತು. ನಮ್ಮ ನಿಲಯಕ್ಕೆ ಓರ್ವ ಉನ್ನತ ಮಟ್ಟದ ಕಲಾವಿದನನ್ನು ತಂದಂತೆ ಆಗುತ್ತದೆ ಎನ್ನುವುದು ನಮ್ಮೆಲ್ಲರ ಅನ್ನಿಸಿಕೆಯಾಗಿತ್ತು. ಅವರ ಧ್ವನಿಮುದ್ರಿಕೆಯನ್ನು ಮೊದಲೇ ಹೇಳಿದ ಹಾಗೆ ಗೌಪ್ಯವಾಗಿ ದೆಹಲಿಯ ನಮ್ಮ ಆಕಾಶವಾಣಿ ಮುಖ್ಯ ಕೇಂದ್ರಕ್ಕೆ ಕಳುಹಿಸಲಾಯಿತು. ಅದೊಂದು ತವಕದ ಸಮಯ. ನಾವೆಲ್ಲ ಅಂದುಕೊಂಡಂತೆ ಕದ್ರಿ ಗೋಪಾಲನಾಥರು ಬಿ-ಹೈ ಗ್ರೇಡ್ ಕಲಾವಿದರಾಗಿ ಆಯ್ಕೆಯಾಗಿದ್ದರು. ನಮಗೆಲ್ಲ ಸಂಭ್ರಮವೇ ಸಂಭ್ರಮ. ಮುಂದೆ ಆಕಾಶವಾಣಿಯ ಓರ್ವ ಪ್ರಬುದ್ಧ ಕಲಾವಿದರಾಗಿ ಅವರು ಬೆಳೆದರು. ಪ್ರಾಯಶಃ ಮಂಗಳೂರು ಆಕಾಶವಾಣಿಯ ಇತಿಹಾಸದಲ್ಲಿ ಮೊತ್ತಮೊದಲ ‘ಟಾಪ್‍ ಗ್ರೇಡ್’ ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಆಯ್ಕೆಯಾದವರೆಂದರೆ ಕದ್ರಿ ಗೋಪಾಲನಾಥರೊಬ್ಬರೇ.

ಮುಂದೆ 2010ರಲ್ಲಿ ಮತ್ತೆ ನಾನು ಮಂಗಳೂರು ಆಕಾಶವಾಣಿಗೆ ಸಹಾಯಕ ಕೇಂದ್ರ ನಿರ್ದೇಶಕನಾಗಿ ವರ್ಗವಾಗಿ ಬಂದಾಗ ‘ನೂರೆಂಟು ನಮಸ್ಕಾರ’ ಎಂಬ ಹೊಚ್ಚಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆ. ಸ್ಥಳೀಯ ಅನೇಕ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾಗಿ ಕದ್ರಿಯವರೂ ಪಾಲ್ಗೊಂಡರು. ಸುಮಾರು ಒಂದು ತಾಸಿನ ಆ ಕಾರ್ಯಕ್ರಮದಲ್ಲಿ ಕದ್ರಿಯವರು ಹೇಳಿದ ಒಂದು ಮಾತಂತೂ ನನಗಿನ್ನೂ ನೆನಪಲ್ಲಿದೆ: ಅವರ ಪ್ರಾರಂಭಿಕ ಸಂಗೀತ ಅಭ್ಯಾಸದ ಸಮಯದಲ್ಲಿ ಮನೆಯಲ್ಲಿ ಅಷ್ಟೊಂದು ಅನುಕೂಲವಿಲ್ಲದಿದ್ದ ಕಾರಣ ಅವರು ಬೆಳಗ್ಗಿನಿಂದ ಮಧ್ಯಾಹ್ನದ ತನಕ ಉಪವಾಸವೇ ಇದ್ದು, ಬರೀ ನೀರನ್ನು ಮಾತ್ರ ಸೇವಿಸಿ, ಕದ್ರಿ ದೇವಸ್ಥಾನದಲ್ಲಿ ಸ್ಯಾಕ್ಸೋಫೋನ್‍ನ್ನು ನುಡಿಸಿದ್ದರಂತೆ.

ಪತ್ನಿ ಸರೋಜಿನಿ, ಹಿರಿಯ ಮಗ ಗುರುಪ್ರಸಾದ್‌, ಮಗಳು ಅಂಬಿಕಾ ಮತ್ತು ಕಿರಿಯ ಮಗ ಮಣಿಕಾಂತ್‌ ಕದ್ರಿ ಅವರೊಂದಿಗೆ ಗೋಪಾಲನಾಥ್‌.
ಪತ್ನಿ ಸರೋಜಿನಿ, ಹಿರಿಯ ಮಗ ಗುರುಪ್ರಸಾದ್‌, ಮಗಳು ಅಂಬಿಕಾ ಮತ್ತು ಕಿರಿಯ ಮಗ ಮಣಿಕಾಂತ್‌ ಕದ್ರಿ ಅವರೊಂದಿಗೆ ಗೋಪಾಲನಾಥ್‌.

ಅವರ ಏಳಿಗೆಯಲ್ಲಿ ಮುಖ್ಯವಾದವರೆಂದರೆ ಅವರ ತಂದೆ ತನಿಯಪ್ಪನವರೆಂದೂ ಸ್ವತಃ ನಾಗಸ್ವರ ವಿದ್ವಾಂಸರಾಗಿದ್ದ ಅವರ ಆಶೀರ್ವಾದದ ಬಳುವಳಿ ತಮ್ಮ ಏಳಿಗೆಗೆ ಕಾರಣವೆಂದೂ ಅವರು ನೆನಪಿಸಿಕೊಂಡಿದ್ದರು. ಎರಡನೆಯವರು ಸಂಗೀತ ಗುರುಗಳಾದ ಮಂಗಳೂರು ಕಲಾನಿಕೇತನವೆಂಬ ಸಂಗೀತ ತರಬೇತಿ ಸಂಸ್ಥೆಯಲ್ಲಿನ ಎನ್. ಗೋಪಾಲಕೃಷ್ಣ ಅಯ್ಯರ್ ಅವರು, ಶಾಸ್ತ್ರೀಯ ಸಂಗೀತದ ಬೀಜಾಕ್ಷರಗಳನ್ನು ಕದ್ರಿಯವರಿಗೆ ಬೋಧಿಸಿದ್ದರು. ಇನ್ನಷ್ಟು ಉತ್ತುಂಗಕ್ಕೆ ಏರಿಸಿದವರೆಂದರೆ ಚೆನ್ನೈನ ಟಿ.ವಿ.ಗೋಪಾಲಕೃಷ್ಣನ್ ಅವರು. ಮುಂದೆ ಅವರ ಜುಗಲ್ ಬಂದಿಯ ಫ್ಯೂಷನ್ ಕಾರ್ಯಕ್ರಮಗಳು ಪ್ರವೀಣ್ ಗೋಡ್ಕಿಂಡಿಯವರ ಜತೆಗೆ ಸಂಪನ್ನವಾಯಿತು. ಅವೆಲ್ಲ ಇಂದು ಇತಿಹಾಸ.

ತಮ್ಮ ಪ್ರಾರಂಭಿಕ ದಿನಗಳಲ್ಲಿ ತನಗೆ ಸಹಾಯ ಮಾಡಿದವರನ್ನು ಎಂದಿಗೂ ಕದ್ರಿಯವರು ಮರೆತವರಲ್ಲ. ಚೆನ್ನೈಯನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಕೊಂಡಿದ್ದ ಅವರು ಒಮ್ಮೆ ಮಂಗಳೂರಿಗೆ ಬಂದಾಗ ನನ್ನನ್ನು ಭೇಟಿ ಮಾಡಿ ತಮ್ಮ ಎಲ್ಲ ಧ್ವನಿಮುದ್ರಿಕೆಗಳ ಆಲ್ಬಂಗಳ ಬಹಳ ದೊಡ್ಡ ಗುಚ್ಛವನ್ನೇ ನನಗೆ ಸಮರ್ಪಿಸಿ ಬೀಳ್ಕೊಂಡಿದ್ದರು. ಅವರ ಕಲಾಕಾಣಿಕೆಗಳೇ ನಮ್ಮನ್ನೆಲ್ಲ ಅವರನ್ನು ಸದಾ ಕಾಲ ನೆನಪಿನಲ್ಲಿರಿಸುವ ಸಾಧನಗಳಾಗಿಯೇ ಉಳಿಯುತ್ತವೆ. ಆದರೂ ಒಬ್ಬ ಸಹೃದಯ ಸ್ನೇಹಜೀವಿಯನ್ನು ಕಳೆದುಕೊಂಡ ವ್ಯಾಕುಲ ಭಾವ ಸದಾ ಕಾಲ ನನ್ನಂಥ ಸಂಗೀತ ಪ್ರೇಮಿಗಳಲ್ಲಿ ಆ ಧ್ವನಿಮುದ್ರಿಕೆಗಳನ್ನು ಆಲಿಸುವ ಸಮಯ ಮೂಡಿಯೇ ಮೂಡುತ್ತದೆ.

(ವಿಶ್ರಾಂತ ಸಹಾಯಕ ನಿರ್ದೇಶಕ, ಆಕಾಶವಾಣಿ/ದೂರದರ್ಶನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT