ಭಾನುವಾರ, ಸೆಪ್ಟೆಂಬರ್ 26, 2021
23 °C

ಎಲ್ಲೆಡೆ ಸ್ವಾತಂತ್ರ್ಯ ‘ಅಮೃತ’ದ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಹಾನಗರ ಪಾಲಿಕೆಯ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಕೋವಿಡ್ ಮಾರ್ಗಸೂಚಿ ಅನುಸರಿಸಿ ಸರಳವಾಗಿ ಆಚರಿಸಲಾಯಿತು.

ಮೇಯರ್ ಪ್ರೇಮಾನಂದ ಶೆಟ್ಟಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ಉಪಮೇಯರ್ ಸುಮಂಗಲಾ ರಾವ್, ಆಯುಕ್ತ ಅಕ್ಷಯ್ ಶ್ರೀಧರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ ರಾಜೇಶ್, ಸಂದೀಪ್ ಗರೋಡಿ, ಪಾಲಿಕೆಯ ಸದಸ್ಯರು, ಉಪ ಆಯುಕ್ತ ಬಿನಾಯ್, ಪಾಲಿಕೆಯ ಅಧಿಕಾರಿಗಳು ಇದ್ದರು.

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ: ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ, ಪದವಿ ಪೂರ್ವ ಕಾಲೇಜು ಜಂಟಿಯಾಗಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಿದವು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಕಟಪೂರ್ವ ನಿರ್ದೇಶಕ ಆನಂದ್ ಧ್ವಜಾರೋಹಣ ನೆರವೇರಿಸಿದರು. ‘ಕೃಷಿ ಕ್ಷೇತ್ರ, ಮೀನುಗಾರಿಕೆ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತವು ಪ್ರಗತಿಯಲ್ಲಿದೆ. ವಿವಿಧ ಕ್ಷೇತ್ರಗಳಲ್ಲಿ ದೇಶ ನೀಡಿರುವ ಕೊಡುಗೆಯಿಂದ ಜಗತ್ತಿನಲ್ಲಿ ನಾವು ಗುರುತಿಸಿಕೊಂಡಿದ್ದೇವೆ. ನಮ್ಮ ರಾಷ್ಟ್ರವು ಶತ್ರುತ್ವ, ದ್ವೇಷ ಮತ್ತು ಭ್ರಮೆಗಳನ್ನು ಬಿಟ್ಟು ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ. ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ನಮ್ಮ ಸ್ವಾತಂತ್ರ್ಯವನ್ನು ಉಳಿಸೋಣ’ ಎಂದರು.

ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ ರಾಜರಾಮ್ ರಾವ್ ಅಧ್ಯಕ್ಷತೆ ವಹಿಸಿದ್ದರು. ‘ಭಾರತದ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ನಾವು ಜಗತ್ತಿನ ಸರ್ವಶ್ರೇಷ್ಠ ರಾಷ್ಟ್ರವಾಗಬೇಕು’ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಕೆ.ಸಿ. ನಾಯ್ಕ್, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ಇದ್ದರು.

ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿದರು. ಸುರೇಖಾ, ಆಕಾಶ್, ರಾಜೇಶ್ ಖಾರ್ವಿ ಕಾರ್ಯಕ್ರಮ ಸಂಯೋಜಿಸಿದರು.

ವಿಶ್ವವಿದ್ಯಾಲಯ ಕಾಲೇಜು: ‘ಸಮಗ್ರ ಅಭಿವೃದ್ಧಿಯೊಂದಿಗೆ ಜಗತ್ತಿನ ಸೂಪರ್‌ ಪವರ್‌ ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಭಾರತಕ್ಕೆ, ದೇಶದ ನಾಗರಿಕ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಬಹುದು, ಎಂದು ಎನ್‌ಸಿಸಿಯ ನೌಕಾದಳದ (5 ಕರ್ನಾಟಕ ನೌಕಾದಳ ಘಟಕ) ಕಮಾಂಡಿಂಗ್‌ ಆಫೀಸರ್‌ ಲೆಫ್ಟಿನೆಂಟ್‌ ಕಮಾಂಡರ್‌ ಭರತ್‌ ಕುಮಾರ್‌ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಭಾರತಕ್ಕೆ ಶಿಸ್ತು, ಜವಾಬ್ದಾರಿ, ಪ್ರಾಮಾಣಿಕತೆ, ನೈತಿಕತೆ ಇರುವ ಶ್ರಮಜೀವಿ ಪ್ರಜೆಗಳ ಅಗತ್ಯವಿದೆ ಎಂದರು.

ಪ್ರಾಂಶುಪಾಲೆ ಡಾ. ಅನಸೂಯಾ ರೈ ಅಧ್ಯಕ್ಷತೆ ವಹಿಸಿದ್ದರು. ಭೂದಳ ಮತ್ತು ನೌಕಾದಳದ ವಿದ್ಯಾರ್ಥಿಗಳ ಕವಾಯತು ಗಮನ ಸೆಳೆಯಿತು. ಪ್ರಾಧ್ಯಾಪಕರಾದ ಡಾ. ಕುಮಾರಸ್ವಾಮಿ ಎಂ ಮತ್ತು ಡಾ. ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ಎನ್‌ಸಿಸಿ ಅಧಿಕಾರಿಗಳಾದ ಡಾ. ಲೆಫ್ಟಿನೆಂಟ್‌ ಡಾ. ಯತೀಶ್‌ ಕುಮಾರ್‌ (ನೌಕಾದಳ), ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್‌ ಡಾ. ಜಯರಾಜ್‌ ಎನ್‌. (ಭೂದಳ), ಎನ್‌ಎಸ್‌ಎಸ್‌ನ ಡಾ. ಸುರೇಶ್‌, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ ಇದ್ದರು.

ಶ್ರೀಶಾ ಕೋ ಆಪರೇಟಿವ್: ಶ್ರೀಶಾ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ವತಿಯಿಂದ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಹಕಾರಿಯ ಅಧ್ಯಕ್ಷ ಎಂ.ಎಸ್. ಗುರುರಾಜ್ ಧ್ವಜಾರೋಹಣ ಮಾಡಿದರು. ನಂತರ 75 ಕಾಲೇಜು ವಿದ್ಯಾರ್ಥಿಗಳಿಗೆ ನಿವೃತ್ತ ಪ್ರಾಧ್ಯಾಪಕ ಡಾ. ಪಿ. ಅನಂತಕೃಷ್ಣ್ ಭಟ್ ಬರೆದ ‘ಭಾರತ ಸಂವಿಧಾನ’ ಪುಸ್ತಕ ವಿತರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಉದಯ ಶಾಸ್ತ್ರಿ, ನಿರ್ದೇಶಕರಾದ ಕೇಶವ ಭಟ್, ಎಂ.ಎಸ್. ಮಾಧವ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.