ಬುಧವಾರ, ಅಕ್ಟೋಬರ್ 16, 2019
21 °C

ಐಎಸ್‌ಗೆ ತೆರಳಿದ 23 ಮಂದಿಯಲ್ಲಿ 8 ಮಂದಿ ಸಾವು

Published:
Updated:

ಕಾಸರಗೋಡು: ಕಾಸರಗೋಡಿನಿಂದ ಗುಪ್ತವಾಗಿ ಅಪ್ಘಾನಿಸ್ತಾನಕ್ಕೆ ತೆರಳಿ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ ಸ್ಟೇಟ್ (ಐಎಸ್) ಸಂಘಟನೆ ಸೇರ್ಪಡೆಯಾದ 23 ಮಂದಿಯಲ್ಲಿ 8 ಮಂದಿ ಸಾವಿಗೀಡಾದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಖಚಿತ ಪಡಿಸಿದೆ.

ಇವರ ಹೊರತಾಗಿ ಐ ಎಸ್ ಉಗ್ರಗಾಮಿ ತಂಡಕ್ಕೆ ಸೇರಿಸಲು ಕಾಸರಗೋಡಿನಿಂದ ಯುವಕರನ್ನೂ ಯುವತಿಯರನ್ನೂ ಕೊಂಡೊಯ್ದ ವ್ಯಕ್ತಿ ಹಾಗೂ ಆತನ ಪತ್ನಿ ಕೂಡಾ ಅಮೇರಿಕದ ವಾಯು ದಾಳಿಯಲ್ಲಿ ಸತ್ತಿದ್ದಾರೆ ಎಂದು ಊರಿಗೆ ಮಾಹಿತಿ ಲಭಿಸಿದೆ.

ಜಿಲ್ಲೆಯ ಚೆರ್ವತ್ತೂರು ಪಡನ್ನ ನಿವಾಸಿಗಳಾದ ಮುಹಮ್ಮದ್ ಮುರ್ಶಾದ್, ಹಫೀಸುದ್ದೀನ್, ಶಿಹಾಸ್, ಅಜ್ಮಲ, ತ್ರಿಕರಿಪುರದ ಮುಹಮ್ಮದ್ ಮರ್ವಾನ್, ತ್ರಿಕರಿಪುರ ಇಳಂಬಚ್ಚಿಯ ಮುಹಮ್ಮದ್ ಮಂಶಾದ್, ಪಾಲ್ಘಾಟ್‌ ನಿವಾಸಿ ಯಾಹ್ಯಾ ಯಾನೆ ಬಾಸ್ಟಿನ್, ಶಿಬಿ ಎಂಬವರು ಹತ್ಯೆಗೆ ಈಡಾದವರು.

ಅಪ್ಘಾನಿಸ್ತಾನದ ನಂಗರ್ ಹಾಲ್ನಲ್ಲಿ ಅಮೇರಿಕ ನಡೆಸಿದ ವಾಯು ದಾಳಿಗೆ ಇವರು ಹತರಾಗಿದ್ದಾರೆ ಎಂದು ಎನ್ಐಎ ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇವರು ಅಮೇರಿಕಾ ದಾಳಿಗೆ ಬಲಿಯಾಗಿರುವ ಮಾಹಿತಿಯನ್ನು ಈ ತಂಡದಲ್ಲೇ ಇದ್ದ ವ್ಯಕ್ತಿಗಳು ಊರಿನಲ್ಲಿರುವ ಸಂಬಂಧಿಕರಿಗೆ ತಿಳಿಸಿದ್ದರು. ಆದರೆ ಆ ಸುದ್ದಿಯನ್ನು ಈಗ ಎನ್ಐಎ ಖಚಿತ ಪಡಿಸಿದೆ.

ಐಎಸ್ನ ಕೇರಳ ವಿಭಾಗದ ಕಮಾಂಡರ್ ಎನ್ನಲಾಗಿರುವ ತ್ರಿಕರಿಪುರ ಉಡುಂಬುಂತಲ ಅಬ್ದುಲ್ ರಾಶೀದ್ ಮತ್ತು ಆತನ ಪತ್ನಿ ಅಮೇರಿಕಾದ ವ್ಯೋಮ ದಾಳಿಯಲ್ಲಿ ಸತ್ತಿರುವುದಾಗಿ ಎರಡು ತಿಂಗಳ ಹಿಂದೆ ಊರಿಗೆ ಸಂದೇಶ ಬಂದಿತ್ತು. ಅಪ್ಘಾನಿಸ್ತಾನದ ಖೋರಾಸ್ತಾನ್ ನಲ್ಲಿ ಅಮೇರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಗಂಡಸರು, ಇಬ್ಬರು ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಹತರಾಗಿದ್ದರು. ಸತ್ತವರಲ್ಲಿ ಅಬ್ದುಲ್ ರಾಶೀದ್ ಮತ್ತು ಆತನ ಪತ್ನಿ ಆಯಿಷಾ ಯಾನೆ ಸೋನಿ ಸೆಬಾಸ್ಟಿಯನ್ ಸೇರಿದ್ದಾರೆಂದು ಊರಿಗೆ ಟೆಲಿಗ್ರಾಫ್ ಸಂದೇಶ ಬಂದಿತ್ತು. ಆದರೆ ಈ ಮಾಹಿತಿಯನ್ನು ಎನ್ಐಎ ಖಚಿತ ಪಡಿಸಿಲ್ಲ. ತನಿಖೆಯನ್ನು ದಾರಿ ತಪ್ಪಿಸಲು
ನಡೆಸಿದ ತಂತ್ರಗಾರಿಕೆ ಆಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗುತ್ತಿದೆ.

ಉಡುಂಬುಂತಲ ಅಬ್ದುಲ್ ರಾಶೀದ್ ನೇತೃತ್ವದಲ್ಲಿ 2016 ರಲ್ಲಿ ಕಾಸರಗೋಡಿನಿಂದ 21 ಮಂದಿ ಹಾಗೂ ಪಾಲ್ಘಾಟಿನಿಂದ ಇಬ್ಬರು ಐ ಎಸ್ ಸೇರಲು ಗುಪ್ತವಾಗಿ ಭಾರತ ತೊರೆದಿದ್ದರು. ಬಳಿಕ ತಾವು ಅಪ್ಘಾನಿಸ್ತಾನದ ಇರುವುದಾಗಿ ಅವರು ಊರಿಗೆ ಮಾಹಿತಿ ನೀಡಿದ್ದರು.

Post Comments (+)