ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ತಿಮರೋಡಿಯ ಕುಂಜರ್ಪ ಎಂಬಲ್ಲಿ ಸೆ. 8ರಂದು ಗಣೇಶೋತ್ಸವದ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಜೈನ ಧರ್ಮದ ಅವಹೇಳನ ಮಾಡಿದ್ದಾರೆ’ ಎಂದು ಆರೋಪಿಸಿ ಭಾರತೀಯ ಜೈನ್ ಮಿಲನ್ ನೇತೃತ್ವದಲ್ಲಿ ಇಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
‘ಜೈನ ಧರ್ಮವನ್ನು ನಿಂದಿಸಿದ ವ್ಯಕ್ತಿ ವಿರುದ್ಧ ಕ್ರಮವಾಗಿಲ್ಲ. ಈ ಬಗ್ಗೆ ಧರ್ಮಸ್ಥಳ, ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್ ಠಾಣೆಗಳಿಗೆ ದೂರು ನೀಡಿದರೂ ಎಫ್ಐಆರ್ ದಾಖಲಾಗಿಲ್ಲ’ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು. ‘ನಮ್ಮ ಧರ್ಮವನ್ನು ನಿಂದಿಸಿದ ವ್ಯಕ್ತಿ ವಿರುದ್ಧ ಕ್ರಮವಾಗದಿದ್ದರೆ ತೀವ್ರ ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, ‘ಧರ್ಮ ನಿಂದನೆ ಮೂಲಕ ಜನರನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಬಾರದು. ಶಾಂತಿ ಬಯಸುವ ಜೈನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.