ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೈನ ಧರ್ಮದ ಅವಹೇಳನ ಆರೋಪ– ಜೈನ್‌ ಮಿಲನ್‌ನಿಂದ ಪ್ರತಿಭಟನೆ

Published : 19 ಸೆಪ್ಟೆಂಬರ್ 2024, 6:44 IST
Last Updated : 19 ಸೆಪ್ಟೆಂಬರ್ 2024, 6:44 IST
ಫಾಲೋ ಮಾಡಿ
Comments

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ತಿಮರೋಡಿಯ ಕುಂಜರ್ಪ ಎಂಬಲ್ಲಿ ಸೆ. 8ರಂದು ಗಣೇಶೋತ್ಸವದ ಸಭೆಯಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ, ಜೈನ ಧರ್ಮದ ಅವಹೇಳನ ಮಾಡಿದ್ದಾರೆ’ ಎಂದು ಆರೋಪಿಸಿ ಭಾರತೀಯ ಜೈನ್ ಮಿಲನ್ ನೇತೃತ್ವದಲ್ಲಿ ಇಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

‘ಜೈನ ಧರ್ಮವನ್ನು ನಿಂದಿಸಿದ ವ್ಯಕ್ತಿ ವಿರುದ್ಧ ಕ್ರಮವಾಗಿಲ್ಲ. ಈ  ಬಗ್ಗೆ ಧರ್ಮಸ್ಥಳ, ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್‌ ಠಾಣೆಗಳಿಗೆ ದೂರು ನೀಡಿದರೂ  ಎಫ್ಐಆರ್‌ ದಾಖಲಾಗಿಲ್ಲ’ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು. ‘ನಮ್ಮ ಧರ್ಮವನ್ನು ನಿಂದಿಸಿದ ವ್ಯಕ್ತಿ ವಿರುದ್ಧ ಕ್ರಮವಾಗದಿದ್ದರೆ ತೀವ್ರ ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್‌, ‘ಧರ್ಮ ನಿಂದನೆ ಮೂಲಕ ಜನರನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಬಾರದು. ಶಾಂತಿ ಬಯಸುವ ಜೈನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಮಾಜದ ಮುಖಂಡ ಪುಷ್ಪರಾಜ ಜೈನ್‌, ‘ಬಸದಿಗಳಿಗೆ ಹಿಂದೂಗಳು ಬರುತ್ತಾರೆ. ಹಿಂದೂ ದೇವಾಲಯಗಳ ಸಮಿತಿಗಳಲ್ಲಿ ಜೈನರೂ ಇದ್ದಾರೆ. ಪರಸ್ಪರ ಸೌಹಾರ್ದದಿಂದ ಇರುವ ಸಮಾಜವನ್ನು ಬೇರ್ಪಡಿಸುವ ಹೇಳಿಕೆಯನ್ನು ಇಡೀ ಸಮಾಜ ಖಂಡಿಸುತ್ತದೆ. ಜೈನರಲ್ಲಿ ‌ಶಾಂತಿಪ್ರಿಯರೂ ಇದ್ದಾರೆ. ಬಿಸಿ ರಕ್ತದ ಯುವಕರೂ ಇದ್ದಾರೆ. ಧರ್ಮವನ್ನು ನಿಂದಿಸುವವವರ ಮನೆಗೆ ಹೋಗಿ ಕಾಲರ್ ಹಿಡಿದು ತರುವ ಯುವಕರೂ ನಮ್ಮ ಜೊತೆಗಿದ್ದಾರೆ’ ಎಂದರು. 

ಕೃಷ್ಣರಾಜ ಹೆಗ್ಡೆ,‘ಕ್ಷಮಾವಳಿಯ ಪರ್ವ ದಿನದಂದೇ ಜೈನರು ರಸ್ತೆಗಿಳಿದು ಹೋರಾಟ ನಡೆಸುವ ಪ್ರಮೇಯ ಎದುರಾಗಿದೆ. ನಮ್ಮ ಧರ್ಮದ ಬಗ್ಗೆ ತುಚ್ಛವಾಗಿ ಮಾತನಾಡುವುದನ್ನು ಸಹಿಸಲಾಗದು. ಈ ಕುರಿತು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್‌ ಹಾಕಬೇಕು. ಇಲ್ಲದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ವರ್ಗ ಸಂಘರ್ಷಕ್ಕೆ ಇದು ಕಾರಣವಾಗುತ್ತದೆ’ ಎಂದರು.

ನೇಮಿರಾಜ ಆರಿಗ, ‘ದೂರು ಬಂದ ತಕ್ಷಣವೇ ಶಾಸಕರನ್ನು ಬಂಧಿಸುವ ಸರ್ಕಾರ  ಜೈನ ಧರ್ಮವನ್ನು ಅವಹೇಳನ ಮಾಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲು ಭಯಪಡುವುದೇಕೆ’ ಎಂದು ಪ್ರಶ್ನಿಸಿದರು.

ಹರ್ಷೇಂದ್ರ ಮಾಳ, ‘ ಜೈನ ಧರ್ಮದ ಅವಹೇಳನ ಮಾಡಿದ 48 ದಿನ ಜೈಲಿಗೆ ಹಾಕಿಸಿದ್ದೇವೆ. ಜೈನ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿ ಹುಚ್ಛನಂತೆ ಸುತ್ತಾಡುವ ದಿನ ಬರಲಿದೆ’ ಎಂದರು.

ವಕೀಲ ಮಯೂರ ಕೀರ್ತಿ, ‘ಫೇಸ್‌ ಬುಕ್‌ನಲ್ಲಿ ಬರೆದವರ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸಿಕೊಳ್ಳುತ್ತಾರೆ. ಎರಡು ಧರ್ಮಗಳ ನಡುವೆ ಹುಳಿ ಹಿಂಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುವುದೇಕೆ’ ಎಂದು ಪ್ರಶ್ನಿಸಿದರು.

ಪ್ರಮುಖರಾದ ಸುದರ್ಶನ ಜೈನ್‌,  ರತ್ನಾಕರ ಜೈನ್,  ಸುರೇಶ್‌ ಬಲ್ಲಾಳ್‌, ಶ್ವೇತಾ ಜೈನ್‌, ಜಗದೀಶ ಅಧಿಕಾರಿ, ದಿಲೀಪ್ ಜೈನ್, ಬಾಹುಬಲಿ ಪ್ರಸಾದ್‌ ಮೊದಲಾದವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT