ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು| ಕನ್ನಡದಲ್ಲಿ ಶಿಕ್ಷಣ; ಮತ್ತೆ ಮೊಳಗಿದ ದನಿ

Published 4 ಜುಲೈ 2023, 7:04 IST
Last Updated 4 ಜುಲೈ 2023, 7:04 IST
ಅಕ್ಷರ ಗಾತ್ರ

ವಿಕ್ರಂ ಕಾಂತಿಕೆರೆ

ಮಂಗಳೂರು: ‘ಕಾಸರಗೋಡು ಕನ್ನಡ ನಾಡು’, ‘ಕನ್ನಡ ಮಕ್ಕಳಿಗಧಿಕಾರ; ಕನ್ನಡ ಕಲಿಸಲು ಕನ್ನಡ ಟೀಚರ್‌’ ಮುಂತಾದ ಘೋಷಣೆಗಳೊಂದಿಗೆ, ಫಲಕ ಹಿಡಿದುಕೊಂಡ ವಿದ್ಯಾರ್ಥಿಗಳು ಮತ್ತು ಪೋಷಕರ ಕೂಗು ಜೋರಾಗಿತ್ತು.

ಅಚ್ಚಕನ್ನಡದ ನೆಲ, ಮುಳ್ಳೇರಿಯ ಬಳಿಯ ಅಡೂರು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜೂನ್ ಮೊದಲ ವಾರ ಈ ಪ್ರತಿಭಟನೆ ನಡೆಯುತ್ತಿದ್ದಾಗ ಪಯಸ್ವಿನಿ ನದಿಯ ಬದಿಯಲ್ಲಿರುವ ಆದೂರು ಶಾಲೆಯಲ್ಲಿ ‘ಮಲಯಾಳಿ ಶಿಕ್ಷಕ’ ಕನ್ನಡದಲ್ಲಿ ಭೌತ ವಿಜ್ಞಾನ ಪಾಠ ಮಾಡುತ್ತಿದ್ದರು. ಅಡೂರಿನ ‘ಸಂಯುಕ್ತ’ ಶಾಲೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ ಸಮಾಜ ವಿಜ್ಞಾನ ಕಲಿಸಲು ಮಲಯಾಳಿ ಶಿಕ್ಷಕಿಯನ್ನು ನೇಮಕ ಮಾಡಿದ್ದರ ವಿರುದ್ಧದ ಹೋರಾಟ ಈಗಲೂ ಮುಂದುವರಿದಿದೆ. ಇದೇ ರೀತಿಯ ಹೋರಾಟ ಎರಡು ವರ್ಷಗಳ ಹಿಂದೆ ಆದೂರು ಶಾಲೆಯಲ್ಲಿ ನಡೆದಿತ್ತು. ಆದರೆ ನಿಯಮಗಳ ಮುಂದೆ ಕನ್ನಡಿಗರಿಗೆ ನಿರಾಸೆಯಾಗಿತ್ತು. ಅಡೂರಿನಲ್ಲೂ ಹೀಗಾಗಬಾರದು ಎಂದು ಮಕ್ಕಳ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಕಾಸರಗೋಡಿನಲ್ಲಿ ಕನ್ನಡ ತಿಳಿಯದ ಶಿಕ್ಷಕರ ನೇಮಕಾತಿ ಇದು ಮೊದಲೇನಲ್ಲ. 2009ರಲ್ಲಿ ಕೇರಳ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾದ ಮೂವರನ್ನು 2010ರ ಜನವರಿಯಲ್ಲಿ ಪೈವಳಿಕೆ, ಬೇಕೂರು ಮತ್ತು ಬಂಗ್ರ ಮಂಜೇಶ್ವರ ಪ್ರೌಢಶಾಲೆಗಳಿಗೆ ನೇಮಕ ಮಾಡಲಾಗಿತ್ತು. ಇದಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಭಾರಿ ಪ್ರತಿಭಟನೆ ವ್ಯಕ್ತವಾಗುವುದರೊಂದಿಗೆ ‘ಕನ್ನಡ ಕಲಿಯುವ’ ಹಕ್ಕಿನ ಧ್ವನಿ ಗಡಿ ದಾಟಿ ಕರ್ನಾಟಕದ ವಿಧಾನಸೌಧದವರೆಗೆ ತಲುಪಿತ್ತು.

ಇಲ್ಲದ ಸಮುದಾಯಕ್ಕೆ ಮೀಸಲಾತಿ:

ಕಾಸರಗೋಡಿನಲ್ಲಿ ಇಲ್ಲದ ಇತರ ಕ್ರೈಸ್ತರು (ಒಎಕ್ಸ್‌), ಲ್ಯಾಟಿನ್ ಕ್ರಿಶ್ಚಿಯನ್‌, ನಾಡಾರ್‌ ಮುಂತಾದ ಸಮುದಾಯಗಳಿಗೂ ಕನ್ನಡ ಶಾಲಾ ಶಿಕ್ಷಕರ ನೇಮಕದಲ್ಲಿ ಮೀಸಲಾತಿ ಸಿಗುತ್ತಿರುವುದು ಸಮಸ್ಯೆಯ ಮೂಲ. ಎಲ್ಲ ಸಮುದಾಯದವರಿಗೆ ಎಲ್ಲ ಹುದ್ದೆಗಳೂ ಸಿಗಬೇಕು ಎಂಬ ನರೇಂದ್ರನ್ ಕಮಿಷನ್ ಶಿಫಾರಸನ್ನು 2006ರಲ್ಲಿ ಕೇರಳ ಸರ್ಕಾರ ಜಾರಿಗೆ ತಂದಿತು. ಕನ್ನಡದ ‘ಅಆಇಈ’ ತಿಳಿಯದ ಮಲಯಾಳಿಗಳೂ ಕನ್ನಡ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದರಿಂದ ಅನುಕೂಲ ಆಯಿತು. ಹೀಗೆ ನೇಮಕ ಆದವರು ಶಾಲೆಗೆ ಕಾಲಿಟ್ಟಾಗ ಸಮಸ್ಯೆ ಆರಂಭವಾಗುತ್ತದೆ.

ಅಡೂರು ಶಾಲೆ
ಅಡೂರು ಶಾಲೆ

ಪ್ರತಿಭಟನೆಯ ಧ್ವನಿ ಎದ್ದ ಕೂಡಲೇ ಅವರನ್ನು ಬ್ಲಾಕ್‌ ಸಂಪನ್ಮೂಲ ಕೇಂದ್ರಕ್ಕೆ (ಬಿಆರ್‌ಸಿ) ಕಳುಹಿಸಿ ಕನ್ನಡ ಕಲಿಯಲು ಸೂಚಿಸಲಾಗುತ್ತದೆ. ಈಚೆಗೆ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಗೆ ಕಳುಹಿಸಲಾಗುತ್ತಿದೆ. ಆದರೂ ಅವರು ಕನ್ನಡದಲ್ಲಿ ಪಾಠ ಮಾಡುವಷ್ಟು ಪ್ರವೀಣರಾಗುವುದಿಲ್ಲ. ಹೀಗಾಗಿ ಸಮಸ್ಯೆ ಪರಿಹಾರ ಕಾಣದೇ ಉಳಿಯುತ್ತದೆ. ಹೋರಾಟಗಾರರ ಮಾಹಿತಿ ಪ್ರಕಾರ ಸದ್ಯ 23 ಮಂದಿ ಮಲಯಾಳಿ ಶಿಕ್ಷಕರು ಬಿಆರ್‌ಸಿಯಲ್ಲಿ ಕನ್ನಡವನ್ನು ಕಲಿಯುತ್ತಿದ್ದಾರೆ.

ಕನ್ನಡ ತಿಳಿಯದವರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ಶಾಲೆಗೆ ನೇಮಕ ಆಗುವುದನ್ನು ತಡೆಯಲು ಸಾಧ್ಯವಿದೆ. ಕೆಪಿಎಸ್‌ಸಿ ಸದಸ್ಯರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳುವ ಸಂದರ್ಶನದಲ್ಲಿ ಕನ್ನಡ ಜ್ಞಾನದ ಬಗ್ಗೆ ತಿಳಿಯಲು ಕನ್ನಡ ಪ್ರಾಧ್ಯಾಪಕರನ್ನು ಆಹ್ವಾನಿಸಲಾಗುತ್ತದೆ. ಅವರು ಅಭ್ಯರ್ಥಿಗೆ ಕನ್ನಡ ಗೊತ್ತಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಷರಾ ಬರೆದರೆ ನೇಮಕ ಆಗುವುದಿಲ್ಲ. ಆದರೆ, ಹೀಗೆ ಆಗುತ್ತಿಲ್ಲ ಎಂಬುದೇ ಸಮಸ್ಯೆಗೆ ಮೂಲ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT