ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೀಲು ಮೇಳದ ಯಕ್ಷಗಾನ: ಕಾಲಮಿತಿಗೆ ಒಳಪಡಿಸುವುದನ್ನು ವಿರೋಧಿಸಿ ಪಾದಯಾತ್ರೆ

Last Updated 6 ನವೆಂಬರ್ 2022, 5:57 IST
ಅಕ್ಷರ ಗಾತ್ರ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ (ಕಟೀಲು ಮೇಳ) ಹರಕೆ ಸೇವೆಯ ಬಯಲಾಟವನ್ನು ಕಾಲಮಿತಿಗೆ ಒಳಪಡಿಸುವುದನ್ನು ವಿರೋಧಿಸಿ ಶ್ರೀ ಕ್ಷೇತ್ರದ ಭಕ್ತಾದಿಗಳು ಬಜಪೆಯಿಂದ ಕಟೀಲು ಕ್ಷೇತ್ರದವರೆಗೆ ಭಾನುವಾರ 'ಶ್ರೀ ಕಟೀಲಮ್ಮನೆಡೆ ಭಕ್ತರ ನಡೆ' ಪಾದಯಾತ್ರೆ ನಡೆಸಿದರು.

ಶ್ರೀಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಊರುಗಳ ಶ್ರೀ ಕಟೀಲು ಮೇಳದ ಯಕ್ಷಗಾನ ಸೇವಾ ಸಮಿತಿಗಳು ಮತ್ತು ಕಾಯಂ ಸೇವಾದಾರರ ಒಕ್ಕೂಟದ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಹೆಜ್ಜೆ ಹಾಕಿದರು.

ಬೆಳಿಗ್ಗೆ 8:30 ಗಂಟೆಗೆ ಬಜಪೆಯ ಶ್ರೀ ಶಾರದ ಶಕ್ತಿ ಮಂಟಪದ ಬಳಿಯಿಂದ ಹೊರಟ ಪಾದಯಾತ್ರೆಯ ಬೆಳಿಗ್ಗೆ 11ಕ್ಕೆ ಕಟೀಲು ಕ್ಷೇತ್ರವನ್ನು ತಲುಪಿತ್ತು. ಶಿಬರೂರು, ಎಕ್ಕಾರು ಮಾರ್ಗವಾಗಿ ಸಾಗಿದ ಮೆರವಣಿಗೆಯಲ್ಲಿ ಭಕ್ತರ ಸಾಲು ಕಿಲೋಮೀಟರ್ ಉದ್ದಕ್ಕೆ ಮುಂದುವರೆದಿತ್ತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಶ್ರೀ ಕಟೀಲು ಮೇಳದ ಯಕ್ಷಗಾನ ಸೇವಾ ಸಮಿತಿಗಳು ಮತ್ತು ಕಾಯಂ ಸೇವಾದಾರ ಒಕ್ಕೂಟದ ಸದಸ್ಯರು
ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಹಾಗೂ ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರ/ಅರ್ಚಕ ವಾಸುದೇವ ಆಸ್ರಣ್ಣ ಅವರಿಗೆ ಕಟೀಲು ಮೇಳದ ಯಕ್ಷಗಾನ ಸೇವೆಯನ್ನು ಪರಂಪರೆಯಂತೆ ರಾತ್ರಿಯಿಂದ ಬೆಳಗಿನವರೆಗೆ ನಡೆಸಬೇಕು‌. ಯಕ್ಷಗಾನ ಮೇಳಗಳ ಪ್ರದರ್ಶನವನ್ನು ಈ ವರ್ಷದ ತಿರುಗಾಟದಿಂದ ರಾತ್ರಿ 10.30ರೊಳಗೆ ಮುಕ್ತಾಯಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಮೇಳಗಳ ಬಯಲಾಟಕ್ಕೆ ಕಾಲಮಿತಿ ನಿಗದಿಪಡಿಸುವುದರ ಬಗ್ಗೆ ಸೇವಾ ಸಮಿತಿಗಳ / ಹತ್ತು ಸಮಸ್ತರ ಪ್ರತಿನಿಧಿಗಳು ಮತ್ತು ಯಕ್ಷಗಾನ ಸೇವಾರ್ಥಿಗಳು ಸರಣಿ ಸಭೆ ಸೇರಿ ಸಮಗ್ರವಾಗಿ ಅಭಿಪ್ರಾಯ ಕ್ರೂಢೀಕರಿಸಿದ್ದೇವೆ. ಮಂಡಳಿಯ ಮೇಳಗಳ ಯಕ್ಷಗಾನವನ್ನು ಕಾಲಮಿತಿಗೊಳಪಡಿಸಿದ ಕಟೀಲು ದೇವಸ್ಥಾನದ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರದ ಬಗ್ಗೆ ಈ ಸಭೆಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ‌ ಎಂದೂ ಸಮಿತಿ ತಿಳಿಸಿದೆ.

ಕಟೀಲು ಮೇಳಗಳ ಯಕ್ಷಗಾನ ಸೇವೆಯು ಜನರ ಸಂಕಷ್ಟ ನಿವಾರಣೆಯ ಭಾವನಾತ್ಮಕ ಸಂಕಲ್ಪ. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಹಾಗೂ, ಅಚಲವಾದ ನಿಷ್ಟೆ-ನಂಬಿಕೆಯಿಂದ ಆಟ ಆಡಿಸುತ್ತಾರೆ. ರಾತ್ರಿಯಿಂದ ಬೆಳಗಿನವರೆಗೆ ನಡೆಯುವ ಈ ಯಕ್ಷಗಾನವನ್ನು ಊರ ಹಬ್ಬವೆಂಬ ಹರ್ಷೋಲ್ಲಾಸ ಮತ್ತು ಸಮರ್ಪಿತ ಭಾವದಿಂದ ಸಂಭ್ರಮಿಸಿ ಕೃತಾರ್ಥರಾಗುತ್ತಾರೆ. ನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಆಗಾಧವಾಗಿ ಶ್ರೀಮಂತಗೊಳಿಸಿದ ಶ್ರೀ ಕಟೀಲುಮೇಳದ ಯಕ್ಷಗಾನವು ಇಡೀ ರಾತ್ರಿಯ ಬಯಲಾಟದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಈ ಹಿಂದೆ ನಡೆದುಕೊಂಡು ಬಂದ ರೀತಿಯಂತೆಯೇ ಮುಂದುವರಿಯಬೇಕು ಎಂದು ಸಮಿತಿ ಒಕ್ಕೂರಲಿನಂದ ಒತ್ತಾಯಿಸಿದೆ.

ಕಟೀಲು ಮೇಳಗಳ ಪರಂಪರೆ ಯನ್ನು ಸತ್ವಯುತವಾಗಿ ಉಳಿಸಿಕೊಳ್ಳುವ ಹಾಗೂ ಆ ಮೂಲಕ ಧಾರ್ಮಿಕತೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ರಾತ್ರಿ 10.30ರ ಬಳಿಕ ಯಕ್ಷಗಾನ ಏರ್ಪಡಿಸಲು ಅಡ್ಡಿಯಾಗಿರುವ ನಿಬಂಧನೆಗಳನ್ನು ಸಡಿಲಗೊಳಿಸಲು ಕ್ರಮವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಉಮಾನಾಥ ಕೋಟ್ಯಾನ್ ಹಾಗೂ ಡಾ. ವೈ ಭರತ್ ಶೆಟ್ಟಿ ವೈ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ರವಿಕುಮಾರ್ ಅವರನ್ನು ಸಮಿತಿಯ ಸಂಚಾಲಕ ಅಶೋಕ್ ಕೃಷ್ಣಾಪುರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT