ಸೋಮವಾರ, ನವೆಂಬರ್ 18, 2019
28 °C
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಕೆಸಿಸಿಐ ಆಗ್ರಹ

‘ನಗರದಲ್ಲಿ ವಾಣಿಜ್ಯ ಕೋರ್ಟ್ ಸ್ಥಾಪನೆಯಾಗಲಿ’

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಅವುಗಳ ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಡಬೇಕು. ಈಗಾಗಲೇ ಪ್ರವಾಸೋದ್ಯಮ ಸಚಿವರಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ನೂತನ ಅಧ್ಯಕ್ಷ ಐಸಾಕ್‌ ವಾಸ್‌ ತಿಳಿಸಿದರು.

ನಗರದ ಕೆಸಿಸಿಐ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೀಚ್‌ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ಆರೋಗ್ಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ ಎಂದರು.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಅನುಮತಿ ಪಡೆಯಲು ಹಲವೆಡೆ ಅಲೆದಾಡುವ ಸ್ಥಿತಿ ಇದೆ. ಇದನ್ನು ನಿವಾರಿಸಲು ಪ್ರವಾಸೋದ್ಯಮದ ಯೋಜನೆಗಳಿಗೆ ಅನುಮತಿ ನೀಡಲು ಏಕಗವಾಕ್ಷಿ ಕೇಂದ್ರವನ್ನು ಆರಂಭಿಸಬೇಕು. ಈ ಮೂಲಕ ಒಂದೇ ಸ್ಥಳದಲ್ಲಿ ಬಂಡವಾಳ ಹೂಡಿಕೆದಾರರು, ಉದ್ಯಮಿಗಳಿಗೆ ಎಲ್ಲ ರೀತಿಯ ಅನುಮತಿ ದೊರೆಯುವಂತಾಗಬೇಕು ಎಂದು ಹೇಳಿದರು.

ಸರ್ಫಿಂಗ್‌ ಎಂಬುದು ದಕ್ಷಿಣ ಕನ್ನಡ ಜಿಲ್ಲೆಗೆ ಹೇಳಿ ಮಾಡಿಸಿದಂತಿದೆ. ಭಾರತೀಯ ಸರ್ಫಿಂಗ್‌ ಫೆಡರೇಷನ್‌ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ಸಸಿಹಿತ್ಲು ಬೀಚ್‌ ಅನ್ನು ಸರ್ಫಿಂಗ್‌ ಬೀಚ್‌ ಎಂದು ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿಯೂ ಕೆಸಿಸಿಐ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.

ಇಂಡಿಯನ್‌ ಓಪನ್‌ ಸರ್ಫಿಂಗ್‌, ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ನದಿ ಉತ್ಸವಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಇದಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ–ಸಂಸ್ಥೆಗಳ ಸಹಯೋಗವನ್ನು ಪಡೆಯಬೇಕು ಎಂದರು.

ಐಟಿ ಹಬ್‌: ಮಂಗಳೂರಿನಲ್ಲಿ 100 ಕ್ಕೂ ಅಧಿಕ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಕಂಪನಿಗಳನ್ನು ನಗರದಲ್ಲಿಯೇ ಉಳಿಸಿಕೊಳ್ಳಲು ಐಟಿ ಪಾರ್ಕ್‌ ನಿರ್ಮಾಣ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ನಗರದ ಸುತ್ತಮುತ್ತ ಹಲವು ಎಂಜಿನಿಯರಿಂಗ್ ಕಾಲೇಜುಗಳಿದ್ದು, ಐಟಿ ಪಾರ್ಕ್‌ ಸ್ಥಾಪನೆ ಮಾಡುವುದರಿಂದ ಇಲ್ಲಿನ ಪದವೀಧರ ಯುವಜನರಿಗೆ ಸುಲಭದಲ್ಲಿ ಉದ್ಯೋಗಾವಕಾಶ ದೊರೆಯಲಿದೆ. ಐಟಿ ಪಾರ್ಕ್‌ ಸಂಬಂಧಿಸಿದಂತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೆಸಿಸಿಐ, ಜಿಲ್ಲಾಡಳಿತದೊಂದಿಗೆ ಕೆಲಸ ಮಾಡಲಿದೆ ಎಂದು ಹೇಳಿದರು.

ಇದರ ಜತೆಗೆ ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರೋಪಾಯ ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸ್ಟಾರ್ಟ್‌ಅಪ್‌ಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯ ಹೆಚ್ಚಾಗಿದೆ ಎಂದರು.

ಪದಾಧಿಕಾರಿಗಳಾದ ನಿಸಾರ್ ಫಕೀರ್ ಮುಹಮ್ಮದ್, ಶಶಿಧರ ಪೈ ಮಾರೂರು, ಗಣೇಶ ಕಾಮತ್, ಆಡಳಿತ ಮಂಡಳಿ ನಿರ್ದೇಶಕರು ಇದ್ದರು.

ಪ್ರತಿಕ್ರಿಯಿಸಿ (+)