ಮಂಗಳೂರು: ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದಯ–ರಕ್ತನಾಳ ಸಂಬಂಧಿ ರೋಗಗಳ ಕುರಿತು ಜಾಗೃತಿ ಮೂಡಿಸಲು ನಗರದ ಕೆಎಂಸಿ ಆಸ್ಪತ್ರೆಯು ಮಹಿಳೆಯರಿಗಾಗಿ ‘ವುಮೆನ್ ಆನ್ ವಾಕ್’ ನಡಿಗೆಯನ್ನು ಇದೇ 17ರಂದು ಆಯೋಜಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಆಸ್ಪತ್ರೆಯ ಹೃದ್ರೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ, ‘2 ಕಿ.ಮೀ.ದೂರದ ಈ ನಡಿಗೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ ಬಳಿಯಿಂದ ಅತ್ತಾವರದ ಕಾಪ್ರಿಗುಡ್ಡದ ಮರೇನಾ ಕ್ರೀಡಾ ಸಂಕೀರ್ಣದವರೆಗೆ ಸಾಗಲಿದೆ’ ಎಂದರು.
‘ಹೃದ್ರೋಗವು ಪುರುಷರನ್ನು ಹೆಚ್ಚಾಗಿ ಬಾಧಿಸುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಮಹಿಳೆಯರಲ್ಲೂ ಹೃದ್ರೋಗ ಹೆಚ್ಚುತ್ತಿದ್ದರೂ ನಿರ್ಲಕ್ಷಿಸಲಾಗುತ್ತದೆ. ಕುಟುಂಬದ ದೃಷ್ಟಿಯಿಂದಲೂ ಮಹಿಳೆಯ ಹೃದಯದ ಆರೋಗ್ಯ ಬಹುಮುಖ್ಯ. ಈ ಸಂದೇಶ ಸಾರಲು ನಡಿಗೆಯನ್ನು ಹಮ್ಮಿಕೊಂಡಿದ್ದೇವೆ. ಇದರಲ್ಲಿ ಭಾಗವಹಿಸಲು ವಾಟ್ಸ್ ಆ್ಯಪ್ ಮೂಲಕ (9008167071 ) ಹೆಸರು ನೋಂದಾಯಿಸಬಹುದು. ಈ ನಡಿಗೆಯಲ್ಲಿ ಭಾಗವಹಿಸುವ ಮಹಿಳೆಯರು ಕೆಂಪು ಬಣ್ಣದ ಉಡುಪುಗಳನ್ನು ಧರಿಸಬೇಕು’ ಎಂದರು.
ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್, ‘ಸಣ್ಣ ವಯಸ್ಸಿನವರೂ ಹೃದಯಾಘಾತಕ್ಕೆ ಒಳಗಾಗುವುದು ಇತ್ತೀಚೆಗೆ ಹೆಚ್ಚುತ್ತಿದೆ. ಸೋಮವಾರವಷ್ಟೇ 26 ವರ್ಷದ ವಾಲಿಬಾಲ್ ಆಟಗಾರರೊಬ್ಬರು ಆಡುತ್ತಿರುವಾಗಲೇ ಹಠಾತ್ ಹೃದಯಾಘಾತಕ್ಕೆ ಒಳಗಾದರು. ಅವರ ಕುಟುಂಬದಲ್ಲಿ ಯಾರೂ ಹೃದ್ರೋಗಿಗಳಿರಲಿಲ್ಲ. ದುಶ್ಚಟಗಳಿಲ್ಲದ ಈ ಕ್ರೀಡಾಪಟು ಚೆನ್ನಾಗಿಯೇ ಇದ್ದರು. ಒತ್ತಡಮಯ ಜೀವನಶೈಲಿ, ಮಧುಮೇಹ, ಸ್ಥೂಲಕಾಯ, ಅಧಿಕ ರಕ್ತದೊತ್ತಡ, ವ್ಯಾಯಾಮದ ಕೊರತೆ, ಧೂಮಪಾನ, ಗುಟ್ಕಾ ಸೇವನೆ, ಕಳಪೆ ಆಹಾರಕ್ರಮ ಹಾಗೂ ವಾಯುಮಾಲಿನ್ಯದಿಂದಾಗಿ ಯಾವುದೇ ವಯಸ್ಸಿನವರಲ್ಲೂ ಯಾವುದೇ ಸಂದರ್ಭದಲ್ಲೂ ಹೃದ್ರೋಗ ಕಾಣಿಸಿಕೊಳ್ಳಬಹುದು’ ಎಂದರು.
‘ಕೆಎಂಸಿ ಆಸ್ಪತ್ರೆಯು ಹೃದಯದ ಆರೋಗ್ಯ ತಪಾಸಣೆಗೆ ಇದೇ 30ರವರೆಗೆ ₹ 777ರ ವಿಶೇಷ ಪ್ಯಾಕೇಜ್ ಆರಂಭಿಸಿದೆ. 9448254700ಕ್ಕೆ ಕರೆ ಮಾಡಿ ಈ ಸೌಕರ್ಯ ಬಳಸಬಹುದು’ ಎಂದರು.
ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ.ಹರೀಶ್ ರಾಘವನ್, ಕಾರ್ಡಿಯೊ ಥೊರಾಸಿಕ್ ಮತ್ತು ವ್ಯಾಸ್ಕ್ಯುಲಾರ್ ಶಸ್ತ್ರಚಿಕಿತ್ಸಾತಜ್ಞ ಡಾ.ಮಾಧವ ಕಾಮತ್, ಹೃದಯದ ಎಲೆಕ್ಟ್ರೋಫಿಜಿಯಲಾಜಿಸ್ಟ್ ಡಾ. ಮನೀಶ್ ರೈ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.