ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ: ಜಾತ್ರೆಗೆ ಸಿದ್ಧವಾಗುತ್ತಿದೆ ಬೆತ್ತದ ರಥಗಳು

ರಥಗಳ ಹಿಂದಿದೆ ಮೂಲನಿವಾಸಿಗಳ ಭಕ್ತಿಯಕಾಯಕ
Last Updated 26 ನವೆಂಬರ್ 2022, 5:08 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಷಷ್ಠಿ ಜಾತ್ರಾ ಮಹೋತ್ಸವಕ್ಕೆ ಸಾಲಾಂಕೃತ ರಥಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಜಾತ್ರಾ ಮಹೋತ್ಸವಕ್ಕಾಗಿ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು ತಮ್ಮ ಕೈಚಳಕದಿಂದ ತೇರನ್ನು ಸಿದ್ಧಗೊಳಿಸುವ ಕಾಯಕವನ್ನು ಹಗಲಿರುಳೆನ್ನದೆ ಮಾಡುತ್ತಿದ್ದಾರೆ.

ಕಾರ್ತಿಕ ಹುಣ್ಣಿಮೆಯಂದು ವೀಳ್ಯ: ಕಾರ್ತಿಕ ಮಾಸದ ಶುದ್ಧ ಪೌರ್ಣಮಿ ದಿನ ರಥಗಳಿಗೆ ಗೂಟ ಪೂಜಾ ಮುಹೂರ್ತವನ್ನು ಕ್ಷೇತ್ರ ಪುರೋಹಿತರು ನೆರೆವೇರಿಸುತ್ತಾರೆ. ನಂತರ ಪೂರ್ವಶಿಷ್ಟ ಸಂಪ್ರದಾಯದಂತೆ ರಥಕಟ್ಟಲಿರುವ ಮಲೆಕುಡಿಯ ಜನಾಂಗದ ಗುರಿಕಾರರಿಗೆ ಗಂಧ ಪ್ರಸಾದದ ರೂಪದಲ್ಲಿ ವೀಳ್ಯವನ್ನು ನೀಡುತ್ತಾರೆ.

ದೇವಳದ ಪಾಟಾಳಿಯವರ ನಿರ್ದೇಶನದಂತೆ, ಗುರಿಕಾರರ ನೇತೃತ್ವದಲ್ಲಿ ದೇವಳದಿಂದ ಪಡಿಯಕ್ಕಿ ಪಡೆದು ರಥಕಟ್ಟುವ ಬೆತ್ತದ ಹಗ್ಗ ತರಲು ಕಾಡಿಗೆ ತೆರಳಿ ಬೆತ್ತದ ಹಗ್ಗ ಸಂಗ್ರಹಿಸಿ ರಥ ನಿರ್ಮಾಣಕಾರ್ಯ ಆರಂಭಿಸುತ್ತಾರೆ. ಬೆತ್ತಗಳಿಂದಲೇ ಸುಂದರ ರಥವನ್ನು ಮೂಲ ನಿವಾಸಿಗಳು ನಿರ್ಮಿಸಲಿದ್ದು, ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಮತ್ತೊಂದು ವಿಶೇಷ. ಕುಕ್ಕೆ ಕ್ಷೇತ್ರದ ಜಾತ್ರೆಯಲ್ಲಿ ರಥಗಳು ಪ್ರಧಾನವಾಗಿವೆ. ಆದುದರಿಂದ ಸಾಲಾಂಕೃತ ರಥಗಳು ಜಾತ್ರೆಯ ಮೆರುಗನ್ನು ಇಮ್ಮಡಿಗೊಳಿಸುತ್ತದೆ.

8 ಆಕಾರದ ಬೆತ್ತ: ಸುಬ್ರಹ್ಮಣ್ಯದಲ್ಲಿ ಯಾವುದೇ ಹಗ್ಗ ಉಪಯೋಗಿಸದೆ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತವನ್ನು ಉಪಯೋಗಿಸಿ ರಥವನ್ನು ನಿರ್ಮಿಸುತ್ತಿದ್ದಾರೆ. ಭಾರಿ ಗಾತ್ರದ ಬೆತ್ತವನ್ನು 8 ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು ಅನಂತರ ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ಬ್ರಹ್ಮರಥದದ ಮೆಲ್ಭಾಗವನ್ನು ರಚಿಸುತ್ತಾರೆ.

ವಿಶೇಷವೆಂದರೆ ಇಲ್ಲಿ ಯಾವುದೇ ಗಂಟುಗಳನ್ನು ಹಾಕಲಾಗುವುದಿಲ್ಲ. ಬದಲಾಗಿ ಬೆತ್ತವನ್ನು ಹೂವನ್ನು ಸುರಿಯುವ ಮಾದರಿಯಲ್ಲಿ ಸುರಿದು ರಥವನ್ನು ಗಟ್ಟಿ ಮಾಡಲಾಗುತ್ತದೆ. ರಥಗಳನ್ನು ಅತ್ಯಂತ ಸುಂದರವಾಗಿ ನಿರ್ಮಿಸುವ ಕೈಂಕರ್ಯವನ್ನು ಇವರು ತಲೆತಲಾಂತರದಿಂದ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಯುವಜನಾಂಗವೂ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಥಕಟ್ಟಲು ಒಬ್ಬರು 5ರಂತೆ 250ಕ್ಕೂ ಅಧಿಕ ಬೆತ್ತದ ಹಗ್ಗ ಬಳಸುತ್ತಾರೆ. ಬ್ರಹ್ಮರಥಕ್ಕೆ ಸುಮಾರು 200 ತುಂಡು ಬಿದಿರನ್ನು ಬಳಸಲಾಗುತ್ತದೆ. ಅಲ್ಲದೆ ಮೇಲಿಂದ ಕೆಳಗೆ 100ಕ್ಕೂ ಅಧಿಕ ಅರುಗಳನ್ನು ಅಳವಡಿಸಲಾಗುತ್ತದೆ. ಮಹಾರಥದ ಐದು ಅಂತಸ್ತುಗಳಿಗೆ 8 ಆಕಾರದಲ್ಲಿ ಬೆತ್ತವನ್ನು ಸುತ್ತಲಾಗುತ್ತದೆ. ಸುಮಾರು 20ರಿಂದ 25 ಬೆತ್ತಗಳನ್ನು ಒಂದಾಗಿಸಿ, 8 ಆಕೃತಿಯ ಬೆತ್ತವನ್ನು ರಚಿಸಲಾಗುತ್ತದೆ. ಪತಾಕೆಗಳನ್ನು ಬ್ರಹ್ಮರಥಕ್ಕೆ ಅಳವಡಿಸಲಾಗುತ್ತದೆ. ಬಳಿಕ ಫಲವಸ್ತುಗಳು, ಹೂ, ಬಾಳೆ, ಮಾವಿನ ಎಲೆಗಳಿಂದ ಸಿಂಗಾರ ಮಾಡಲಾಗುವುದು. ನಂತರ ರಥ ಎಳೆಯುವ ಬೆತ್ತವನ್ನು ಅಳವಡಿಸಲಾಗುತ್ತದೆ. ಸುಮಾರು 6 ಅಡಿ ಉದ್ದದ 12 ಬೆತ್ತವನ್ನು ಬ್ರಹ್ಮರಥವನ್ನು ಎಳೆಯಲು ಬಳಸಲಾಗುತ್ತದೆ.

ಸಾಂಪ್ರದಾಯಿಕ ಕಲೆ ಹಿರಿಯರಿಂದ ಒಲಿದು ಬಂದಿದೆ. ಹಿರಿಯರ ಮಾರ್ಗದರ್ಶನದಂತೆ ರಥಕಟ್ಟುವ ಕಾಯಕವನ್ನು ಮಾಡುತ್ತಿದ್ದೇವೆ. ಇದು ದೇವರ ಸೇವೆಗೆ ದೊರೆತ ಅವಕಾಶವೆಂದು ಭಾವಿಸಿ ರಥ ನಿರ್ಮಾಣ ಕಾರ್ಯದಲ್ಲಿ ಹಿರಿಯರಿಂದ ಕಲಿಸಿದ ವಿದ್ಯೆಯನ್ನು ನಾವು ಮುಂದುವರಿಸುತ್ತಾ ಬಂದಿದ್ದೇವೆ ಎನ್ನುತ್ತಾರೆ ಭಾಸ್ಕರ ಅರ್ಗುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT