ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯನ್ಸ್‌ ವಲಯ 11ರ ಸಮ್ಮೇಳನ ‘ಮೈತ್ರೇಯಿ‘ 19ರಂದು

Last Updated 16 ಫೆಬ್ರುವರಿ 2023, 9:51 IST
ಅಕ್ಷರ ಗಾತ್ರ

ಮಂಗಳೂರು: ‘ಲಯನ್ಸ್‌ ಅಂತರರಾಷ್ಟ್ರೀಯ ಜಿಲ್ಲೆ 317 ಡಿ’ಯ ವಲಯ 11ರ ‘ಮೈತ್ರೇಯಿ’ ಪ್ರಾದೇಶಿಕ ಸಮ್ಮೇಳನವನ್ನು ಕುಲಶೇಖರದ ಕೋರ್ಡೆಲ್‌ ಸಭಾಂಗಣದಲ್ಲಿಇದೇ 19ರಂದು ಸಂಜೆ 5ಕ್ಕೆ ಏರ್ಪಡಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಯನ್ಸ್‌ ವಲಯ 11 ಅಧ್ಯಕ್ಷ ಎಂ.ಶೇಖರ ಪೂಜಾರಿ, ‘ಮಂಗಳೂರಿನ ಕಂಕನಾಡಿ–ಪಡೀಲ್‌, ಕಾವೂರು, ಮುದುರೆಮುಖ, ಕಾವೇರಿ, ಮಿಡ್‌ಟೌನ್‌, ಲೇಡಿಹಿಲ್‌, ವೆಲೆನ್ಸಿಯಾ, ಸರಸ್ವತಿ, ಪಂಪ್‌ವೆಲ್‌– ಕಲ್ಪವೃಕ್ಷಾ ಕ್ಲಬ್‌ಗಳು ಮಂಗಳೂರು ವಲಯದಲ್ಲಿದ್ದು, ಇಲ್ಲಿನ ಲಯನ್ಸ್‌ ಕುಟುಂಬದ 800 ಮಂದಿ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮುದಾಯವನ್ನು ಬಲಪಡಿಸುವ ಹಾಗೂ ಬಡವರಿಗೆ ನೆರವಾಗುವ ನಮ್ಮ ಸಂಸ್ಥೆಯ ಧ್ಯೇಯದ ಪ್ರಕಾರ ಅನೇಕ ಸೇವಾ ಚಟುವಟಿಕೆಯನ್ನೂ ಈ ಸಂದರ್ಭದಲ್ಲಿ ಕೈಗೊಳ್ಳಲಿದ್ದೇವೆ’ ಎಂದರು.

‘ವಿಶೇಷ ಮಕ್ಕಳ ಆರೈಕೆಗಾಗಿ ಹಾಗೂ ಅವರಲ್ಲಿ ಸ್ಥೈರ್ಯ ತುಂಬಲು ಶ್ರಮಿಸುತ್ತಿರುವ ವಿಶೇಷ ಶಾಲೆಗಳಿಗೆ ನೆರವು ಒದಗಿಸಲಿದ್ದೇವೆ. ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಸಂತ ಶೆಟ್ಟಿ ಅವರನ್ನು ಸನ್ಮಾನಿಸಲಿದ್ದೇವೆ. ಬದುಕಿನ ಕೊನೆಗಾಲದಲ್ಲಿ ಮರೆಗುಳಿತನದ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯಲ್ಲೇ ಚಿಕಿತ್ಸೆಗೆ ಒಳಪಡುತ್ತಿರುವವರ ಆರೈಕೆಗೆ ದೇಣಿಗೆ ನೀಡಲಿದ್ದೇವೆ. ಬೇರೆ ಬೇರೆ ಕಾರಣಗಳಿಂದಾಗಿ ಕುಟುಂಬದಿಂದಲೇ ದೂರವಾಗಿ ಬದುಕುತ್ತಿರುವ ಹೆಣ್ಣುಮಕ್ಕಳಿಗೆ ಆಶ್ರಯ ಕಲ್ಪಿಸಿರುವ ಸಂಸ್ಥೆಗೆ ನೆರವು ನೀಡಲಿದ್ದೇವೆ’ ಎಂದು ತಿಳಿಸಿದರು.

‘ಅಗತ್ಯ ಇರುವ ಮಕ್ಕಳಿಗೆ ಶೈಕ್ಷಣಿಕ ಸಹಾಯ, ದುರ್ಬಲ ವರ್ಗದ ಜನರಿಗೆ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯ, ಸಕಲೇಶಪುರದ ಚಿತಾಗಾರ ಅಭಿವೃದ್ಧಿಗೆ ನೆರವು, ವೆನ್ಲಾಕ್‌ ಆಸ್ಪತ್ರೆಗೆ ಇಸಿಜಿ ಯಂತ್ರದ ದೇಣಿಗೆ ಕಾರ್ಯಕ್ರಮಗಳೂ ಈ ಸಲದ ಸೇವಾ ಚಟುವಟಿಕೆಯಲ್ಲಿ ಸೇರಿವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಗುರುಪ್ರೀತ್‌ ಆಳ್ವ, ವಿಜಯ ವಿಠಲ ಮಲ್ಯ, ಸ್ವರೂಪಾ ಶೆಟ್ಟಿ, ಪ್ರಕಾಶ್‌ ಪೈ ಹಾಗೂ ಅರವಿಂದ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT