ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣ ದೃಢೀಕರಣ ಪತ್ರಕ್ಕೆ ಲಂಚ: ಲೋಕಾಯುಕ್ತ ಬಲೆಗೆ ಗ್ರಾಮ ಕರಣಿಕ

Published 24 ನವೆಂಬರ್ 2023, 15:37 IST
Last Updated 24 ನವೆಂಬರ್ 2023, 15:37 IST
ಅಕ್ಷರ ಗಾತ್ರ

ಮಂಗಳೂರು: ಮರಣ ದೃಢೀಕರಣ ಪತ್ರ ನೀಡಲು ಚೇಳ್ಯಾರು ಗ್ರಾಮದ ಗ್ರಾಮ ಕರಣಿಕ ವಿಜಿತ್‌ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅವರನ್ನು ಬಂಧಿಸಿದ್ದಾರೆ.

ಚೇಳ್ಯಾರು ನಿವಾಸಿಯೊಬ್ಬರು (ದೂರುದಾರರು) ತಮ್ಮ ತಾಯಿಯ ಹೆಸರಿನಲ್ಲಿದ್ದ ಜಮೀನಿನಲ್ಲಿ ಐದು ಸೆಂಟ್ಸ್‌ ಜಾಗವನ್ನು ಮಾರಾಟ ಮಾಡಲು ಮುಂದಾಗಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳನ್ನು ವಿಚಾರಿಸಿದಾಗ ದೂರುದಾರರ ಅಜ್ಜನ ಮರಣ ದೃಢೀಕರಣ ಪತ್ರ ಮತ್ತು ವಂಶವೃಕ್ಷ ತರುವಂತೆ ತಿಳಿಸಿದ್ದರು. ಈ ದಾಖಲೆಗಾಗಿ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ಗ್ರಾಮ ಕರಣಿಕರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆ ನಂತರ ಮೂರು ಬಾರಿ ಅವರು ಕಚೇರಿಗೆ ಹೋಗಿ ಮಾಹಿತಿ ಕೇಳಿದರೂ, ಉತ್ತರ ಸಿಕ್ಕಿರಲಿಲ್ಲ. ನ. 20ರಂದು ‌ಗ್ರಾಮ ಕರಣಿಕರ (ಗ್ರಾಮ ಆಡಳಿತ ಅಧಿಕಾರಿ) ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ, ‘ಅಜ್ಜನ ಮರಣ ದೃಢೀಕರಣ ಪತ್ರ ಸಿದ್ಧವಾಗಿದ್ದು, ಬರುವಾಗ ₹15ಸಾವಿರ ಹಣ ತನ್ನಿ’ ಎಂದು ಬೇಡಿಕೆ ಇಟ್ಟಿದ್ದರು. ಹಣ ಸ್ವಲ್ಪ ಕಡಿಮೆ ಮಾಡುವಂತೆ ಕೇಳಿದಾಗ, ₹13 ಸಾವಿರ ನೀಡುವಂತೆ ಹೇಳಿದ್ದರು. ದೂರುದಾರರು ಈ ಮಾಹಿತಿಯನ್ನು ಲೋಕಾಯುಕ್ತಕ್ಕೆ ನೀಡಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ವಿಜಿತ್ ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಲೋಕಾಯುಕ್ತ ಮಂಗಳೂರು ವಿಭಾಗದ ಡಿವೈಎಸ್ಪಿ ಚಲುವರಾಜ್ ಬಿ., ‍ಪೊಲೀಸ್ ಇನ್‌ಸ್ಪೆಕ್ಟರ್ ಅಮಾನುಲ್ಲಾ ಎ., ಸುರೇಶ್ ಕಮಾರ್, ಪಿ. ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT