ಬುಧವಾರ, ಫೆಬ್ರವರಿ 26, 2020
19 °C
ಹೆಚ್ಚುತ್ತಿರುವ ಸಂಚಾರ ದಟ್ಟಣೆ– ನಗರದ ಸೌಂದರ್ಯ ಊನ

ಮಂಗಳೂರು: ಹೆದ್ದಾರಿ ಮೇಲೆ ಕಟ್ಟಡ ತ್ಯಾಜ್ಯ

ವಿ.ಎಸ್‌.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಿನ ಕಳೆದಂತೆ ಬೆಳೆಯುತ್ತಲೇ ಇರುವ ಮಂಗಳೂರು ನಗರದ ವ್ಯಾಪ್ತಿಯಲ್ಲಿ ಹಳೆಯ ಕಟ್ಟಡಗಳ ತೆರವು, ಹೊಸ ಕಟ್ಟಡಗಳ ನಿರ್ಮಾಣ ಕಾರ್ಯವೂ ಭರರಿಂದ ಸಾಗುತ್ತಿದೆ. ಹತ್ತಾರು ವರ್ಷಗಳಷ್ಟು ಹಳೆಯ ಕಟ್ಟಡಗಳನ್ನು ತೆರವು ಮಾಡಿದಾಗ ಉತ್ಪತ್ತಿಯಾದ ತ್ಯಾಜ್ಯಗಳ ವಿಲೇವಾರಿಗೆ ಸರಿಯಾದ ವ್ಯವಸ್ಥೆಯೇ ಇಲ್ಲಿಲ್ಲ. ರಾತ್ರೋರಾತ್ರಿ ಭಾರಿ ಪ್ರಮಾಣದ ಕಟ್ಟಡ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿಯ ಬದಿ, ನಿರ್ಜನ ಪ್ರದೇಶಗಳಲ್ಲಿ ಸುರಿದು ಹೋಗುವ ಪ್ರವೃತ್ತಿ ಹೆಚ್ಚುತ್ತಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಳ್ಳಾಲದಿಂದ ಸುರತ್ಕಲ್‌ವರೆಗಿನ ಮಾರ್ಗದಲ್ಲಿ ಹತ್ತಾರು ಕಡೆಗಳಲ್ಲಿ ಭಾರಿ ಪ್ರಮಾಣದ ಕಟ್ಟಡ ತ್ಯಾಜ್ಯ ಸುರಿದಿರುವುದು ಕಣ್ಣಿಗೆ ಬೀಳುತ್ತದೆ. ಪಡೀಲ್‌ನಿಂದ ತುಂಬೆ ಮಾರ್ಗ, ಕುಲಶೇಖರದಿಂದ ಮೂಡುಬಿದಿರೆ ರಸ್ತೆಯಲ್ಲೂ ಇದೇ ಪರಿಸ್ಥಿತಿ ಇದೆ. ಕೆಲವು ಕಡೆಗಳಲ್ಲಿ ಕಟ್ಟಡ ತ್ಯಾಜ್ಯದ ರಾಶಿ ರಸ್ತೆಯನ್ನೂ ಆಕ್ರಮಿಸಿಕೊಂಡಿದೆ. ಇದು ಸಂಚಾರ ದಟ್ಟಣೆ ಹೆಚ್ಚಲು ಕಾರಣವಾಗುತ್ತಿದೆ.

ರಾಜ್ಯದಲ್ಲಿ ದೊಡ್ಡ ಪ್ರಮಾಣದ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಮಂಗಳೂರು ಮುಂಚೂಣಿಯಲ್ಲಿದೆ. ಹೊಸ ಹೊಸ ಬಹುಮಹಡಿ ಕಟ್ಟಡಗಳು ನಿರ್ಮಾಣವಾಗುತ್ತಲೇ ಇವೆ. ಹಳೆಯ ಕಟ್ಟಡಗಳ ಅವಶೇಷಗಳ ಜೊತೆಗೆ ಹೊಸ ಕಟ್ಟಡ ನಿರ್ಮಾಣದ ಸಂದರ್ಭದಲ್ಲೂ ಬೃಹತ್‌ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದನ್ನು ವಿಲೇವಾರಿ ಮಾಡಲು ಈವರೆಗೂ ಸರಿಯಾದ ವ್ಯವಸ್ಥೆಯನ್ನೇ ಮಾಡಿಲ್ಲ. ಕೊರತೆಯನ್ನೇ ನೆಪ ಮಾಡಿಕೊಂಡ ಜನರು ರಾತ್ರೋರಾತ್ರಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ.

ಕಡತದಲ್ಲೇ ಉಳಿದ ಪ್ರಸ್ತಾವ: ನಗರದಲ್ಲಿ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಪ್ರತ್ಯೇಕವಾದ ಸ್ಥಳ ನಿಗದಿ ಮಾಡಬೇಕು ಎಂಬ ಬೇಡಿಕೆ ದಶಕಗಳಿಂದಲೂ ಇದೆ. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಜೊತೆಗೂಡಿ ಎರಡು ಕಡೆಗಳಲ್ಲಿ ಜಮೀನು ಗುರುತಿಸಿದ್ದವು. 2015ರಿಂದಲೂ ಈ ಪ್ರಸ್ತಾವ ಕಡತದಲ್ಲೇ ಉಳಿದಿದೆ.

ನಗರದ ಹೊರ ವಲಯದ ಕುಂಜತ್ತಬೈಲ್‌ನಲ್ಲಿ 3 ಎಕರೆ ಮತ್ತು ಅಡ್ಯಾರ್‌ನಲ್ಲಿ 4 ಎಕರೆ ಜಮೀನನ್ನು ಕಟ್ಟಡ ತ್ಯಾಜ್ಯ ವಿಲೇವಾರಿಗಾಗಿ ಗುರುತಿಸಲಾಗಿತ್ತು. ಮೊದಲ ಹಂತದಲ್ಲಿ ಕುಂಜತ್ತಬೈಲ್‌ನಲ್ಲಿ ಘಟಕ ಆರಂಭಿಸುವ ಪ್ರಸ್ತಾವವಿತ್ತು. ಎರಡೂ ಸ್ಥಳಗಳನ್ನು ಬಳಸಿಕೊಂಡರೆ 15ರಿಂದ 20 ವರ್ಷಗಳ ಅವಧಿಗೆ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಸಮಸ್ಯೆಯಾಗದು ಎಂದು ಅಂದಾಜಿಸಲಾಗಿತ್ತು.

ಈ ಎರಡೂ ಜಮೀನುಗಳನ್ನು ಕಟ್ಟಡ ತ್ಯಾಜ್ಯ ವಿಲೇವಾರಿಗೆ ಬಳಸಿಕೊಳ್ಳಲು ಅನುಮತಿ ಕೋರಿ ಮಹಾನಗರ ಪಾಲಿಕೆಯು 2016ರಲ್ಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಈ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಜಮೀನುಗಳನ್ನು ಸ್ವಾಧೀನಕ್ಕೆ ಪಡೆಯಲು ಈವರೆಗೂ ಸಾಧ್ಯವಾಗಿಲ್ಲ.

ಸರ್ಕಾರಿ ನಿವೇಶನಗಳ ಆಪೋಶನ

ಹಲವು ಪ್ರದೇಶಗಳಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಮಿತಿಮೀರಿದೆ. ಬಂಗ್ರಕೂಳೂರು, ಜೆಪ್ಪು, ಸುರತ್ಕಲ್‌, ಅಡ್ಯಾರ್‌ ಸೇರಿದಂತೆ ಹಲವೆಡೆ ಸರ್ಕಾರಿ ನಿವೇಶನಗಳೇ ಮಾಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ನಿವೇಶನಗಳನ್ನು ಕಬಳಿಸುವ ಉದ್ದೇಶದಿಂದಲೇ ತಗ್ಗು ಪ್ರದೇಶಗಳಿಗೆ ನಿರಂತರವಾಗಿ ತ್ಯಾಜ್ಯ ತಂದು ಸುರಿಯುತ್ತಾರೆ. ಆದರೆ, ಪಾಲಿಕೆ ಆಡಳಿತ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ಈ ಭಾಗದ ಸಾರ್ವಜನಿಕರು ದೂರುತ್ತಾರೆ.

‘ಕೂಳೂರು ಸೇತುವೆಯಿಂದ ತಣ್ಣೀರುಬಾವಿಗೆ ಹೋಗುವ ಮಾರ್ಗದಲ್ಲಿ ನದಿ ತೀರಕ್ಕೆ ಕಟ್ಟಡ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಕೆಲವು ಸ್ಥಳಗಳಲ್ಲಿ ತಗ್ಗು ಪ್ರದೇಶವನ್ನು ಭರ್ತಿ ಮಾಡಿ ಶೆಡ್‌ಗಳನ್ನು ನಿರ್ಮಿಸಿರುವುದೂ ಕಂಡುಬರುತ್ತದೆ. ತ್ಯಾಜ್ಯ ಸುರಿಯುವುದನ್ನು ನೋಡಿದರೂ ಪ್ರಶ್ನಿಸಲಾಗದ ಪರಿಸ್ಥಿತಿ ಇದೆ. ರಾತ್ರಿ ವೇಳೆ ಈ ಕೆಲಸ ಮಾಡುತ್ತಾರೆ. ಪ್ರಶ್ನಿಸಿದರೆ ಹಲ್ಲೆಗೂ ಮುಂದಾಗುತ್ತಾರೆ’ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು