ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 1,256 ಮಂದಿ ‘ರೌಡಿ ಶೀಟ್‌’ನಿಂದ ಮುಕ್ತ

ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌
Last Updated 16 ಡಿಸೆಂಬರ್ 2021, 14:50 IST
ಅಕ್ಷರ ಗಾತ್ರ

ಮಂಗಳೂರು: ‘ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ‘ರೌಡಿ ಶೀಟ್‌’ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ 1,256 ಮಂದಿಯನ್ನು ಮುಕ್ತಗೊಳಿಸಲಾಗಿದೆ’ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಹೇಳಿದರು.

ಮಂಗಳೂರು ನಗರ ಪೊಲೀಸ್‌ ವತಿಯಿಂದ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಪರಿವರ್ತನಾ ಸಭೆ’ಯಲ್ಲಿ ಅವರು ಮಾತನಾಡಿದರು.

‘3,263 ರೌಡಿಶೀಟರ್‌ಗಳ ಪೈಕಿ 1,256 ಮಂದಿಯನ್ನು ರೌಡಿಶೀಟ್‌ನಿಂದ ತೆರವು ಮಾಡಲಾಗಿದೆ. ಅವರಲ್ಲಿ 663 ಮಂದಿ ನ್ಯಾಯಾಲಯದಲ್ಲಿ ಪ್ರಕರಣ ಮುಕ್ತವಾದವರು. 523 ಮಂದಿ ಅಪರಾಧ ಚಟುವಟಿಕೆಯಲ್ಲಿ ಇಲ್ಲದವರು. ಸುಮಾರು 5 ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷಗಳಿಂದ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಉತ್ತಮ ಜೀವನ ನಡೆಸುವವರನ್ನು ಪರಿಗಣಿಸಿ ರೌಡಿಶೀಟ್‌ನಿಂದ ತೆರವು ಮಾಡಲಾಗಿದೆ’ ಎಂದು ತಿಳಿಸಿದರು.

ಫಾದರ್ ಮ್ಲುಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರುಡಾಲ್ಫ್ ರವಿ ಡೇಸಾ ಮಾತನಾಡಿ, ‘ಪ್ರತಿಯೊಬ್ಬನ ಅಂತಃಕರಣವು ಸರಿ- ತಪ್ಪುಗಳನ್ನು ಪ್ರಾಮಾಣಿಕವಾಗಿ ಹೇಳುತ್ತದೆ. ಅಂತಃಕರಣದ ಎಚ್ಚರ ಪಾಲಿಸಿದರೆ ಜೀವನದಲ್ಲಿ ಎಡವಲು ಸಾಧ್ಯವಿಲ್ಲ. ನಮ್ಮ ಜೀವನ ರೂಪಿಸುವುದು ನಮ್ಮ ಕೈಯಲ್ಲಿದ್ದು, ಯಾರ ಪ್ರಭಾವಕ್ಕೂ ಮಣಿಯಬಾರದು’ ಎಂದರು.

‌‘ತುಳುನಾಡಿನ ಈ ಪುಣ್ಯಭೂಮಿ ಶಾಂತಿ, ಪ್ರೀತಿ, ಸೌಹಾರ್ದ, ಸಾಮರಸ್ಯಕ್ಕೆ ಹೆಸರುವಾಸಿ. ಆದರೆ, ಇತ್ತೀಚಿನ ದಿನಗಳಲ್ಲಿ ಸಮಾಜ ಅಶಾಂತಿಯತ್ತ ವಾಲುತ್ತಿರುವುದು ಬೇಸರದ ವಿಚಾರ. ಹಿಂಸೆಯನ್ನು ಹಿಂಸೆಯಿಂದಲೇ ನಾಶ ಮಾಡಲು ಸಾಧ್ಯವಿಲ್ಲ. ಗೆಳೆತನ ಮಾತ್ರ ವೈರತ್ವವನ್ನು ನಾಶ ಮಾಡಬಲ್ಲದು’ ಎಂದರು.

ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ, ‘ಯಾವುದೋ ಒತ್ತಡದಿಂದ ತಪ್ಪು ನಡೆದಿರಬಹುದು. ಅದನ್ನು ತಿದ್ದಿ ನಡೆಯುವುದು ಮನುಷ್ಯ ಧರ್ಮ. ರೌಡಿ ಶೀಟ್‌ನಿಂದ ತೆರವಾದ ಎಲ್ಲರೂ ಉತ್ತಮ ನಾಗರಿಕರಾಗಿ ಬದುಕಿ ಕುಟುಂಬದ ಬಾಳು ಬೆಳಗಬೇಕಿದೆ. ಇದರಿಂದ ಸಮಾಜದಲ್ಲಿ ಉತ್ತಮ ಗೌರವ ಸಂಪಾದಿಸಲು ಸಾಧ್ಯ’ ಎಂದರು.

ಯುನಿಟಿ ಆಸ್ಪತ್ರೆ ಅಧ್ಯಕ್ಷ ಡಾ.ಸಿ.ಪಿ. ಹಬೀಬ್ ರೆಹಮಾನ್ ಮಾತನಾಡಿ, ‘ರೌಡಿ ಶೀಟರ್‌ಗಳಾಗಿದ್ದವರ ಪರಿವರ್ತನೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಅದನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು’ ಎಂದರು.

ಡಿಸಿಪಿಗಳಾದ ಹರಿರಾಂ ಶಂಕರ್, ಪಿ. ದಿನೇಶ್ ಕುಮಾರ್, ಎಸಿಪಿ ರಂಜಿತ್ ಬಂಡಾರು ಇದ್ದರು. ಬರ್ಕೆ ಠಾಣೆ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಪ್ರಾರ್ಥಿಸಿದರು. ಎಸಿಪಿ ನಟರಾಜ್ ಶುಭ ಸಂದೇಶ ನೀಡಿದರು. ನಮ್ರತಾ ಕಾರ್ಯಕ್ರಮ ನಿರೂಪಿಸಿದರು.ರೌಡಿಶೀಟರ್ ತೆರವಾದ ಲೋಹಿತ್ ಸುವರ್ಣ, ಶಿವರಾಮ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.

‘3 ತಿಂಗಳು ನಿರಂತರ ಶ್ರಮ’

‘ರೌಡಿ ಶೀಟ್‌ನಿಂದ ಇಷ್ಟೊಂದು ಆರೋಪಿಗಳನ್ನು ತೆರವು ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ. ಈ ಪರಿಶೀಲನಾ ಕಾರ್ಯಕ್ಕೆ ಕಮಿಷನರ್ ವ್ಯಾಪ್ತಿಯ ಅಧಿಕಾರಿಗಳು 3 ತಿಂಗಳಿನಿಂದ ನಿರಂತರವಾಗಿ ಶ್ರಮಿಸಿದ್ದಾರೆ. ಇದಕ್ಕೆ ಯಾವುದೇ ಒತ್ತಡವೂ ಇರಲಿಲ್ಲ. ನಮ್ಮ ಜವಾಬ್ದಾರಿ ಎಂದುಕೊಂಡು ಮಾಡಿದ್ದೇವೆ. ಹಿರಿಯ ಅಧಿಕಾರಿಗಳು 7–8 ಸುತ್ತು ಸಭೆ ನಡೆಸಿ ಚರ್ಚಿಸಿದ್ದೇವೆ. ಉತ್ತಮ ಜೀವನ ನಡೆಸುತ್ತಿರುವ ಇನ್ನುಳಿದ ರೌಡಿಶೀಟರ್‌ಗಳನ್ನು ಮುಕ್ತಗೊಳಿಸುವ ಪ್ರಕ್ರಿಯೆಗೆ ಜನವರಿಯಲ್ಲಿ ಚಾಲನೆ ನೀಡಲಾಗುವುದು’ ಎಂದುಎನ್‌. ಶಶಿಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT