ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ವಿವಿಗೆ ‘ಭಾರ’ವಾದ ಪದವಿ ಕಾಲೇಜು?

ಇನ್ನೂ ಪ್ರಾರಂಭವಾಗದ ದಾಖಲಾತಿ, ಇಂದು ನಡೆಯುವ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ
Published 7 ಜೂನ್ 2024, 5:14 IST
Last Updated 7 ಜೂನ್ 2024, 5:14 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರವೇಶಕ್ಕೆ ಈ ವರ್ಷ ಇನ್ನೂ ದಾಖಲಾತಿ ಆರಂಭವಾಗಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ವಿವಿ ಯಾವ ಕಾರಣಕ್ಕಾಗಿ ದಾಖಲಾತಿ ವಿಳಂಬ ಮಾಡುತ್ತಿದೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.

2015–16ನೇ ಸಾಲಿನಲ್ಲಿ ಬಿಬಿಎ ಕೋರ್ಸ್‌ನೊಂದಿಗೆ ಪ್ರಾರಂಭವಾದ ಕಾಲೇಜಿನಲ್ಲಿ ಪ್ರಸ್ತುತ ಬಿಎ, ಬಿಕಾಂ, ಬಿಬಿಎ ವ್ಯಾಸಂಗಕ್ಕೆ ಅವಕಾಶ ಇದೆ. ವಿಶ್ವವಿದ್ಯಾಲಯದ ಕಟ್ಟಡ ಹಾಗೂ ಮೂಲ ಸೌಕರ್ಯಗಳೇ ಕಾಲೇಜಿಗೆ ಆಧಾರವಾಗಿವೆ. ಪದವಿ ಮೂರು ವಿಭಾಗಗಳ ಪ್ರಥಮ, ದ್ವಿತೀಯ, ತೃತೀಯ ವರ್ಷ ಸೇರಿ ಸುಮಾರು 280 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಉಳ್ಳಾಲ ತಾಲ್ಲೂಕಿನಲ್ಲಿ ಎರಡು ಸರ್ಕಾರಿ ಪದವಿ ಕಾಲೇಜುಗಳು ಇದ್ದು, ಮುಡಿಪುವಿನಲ್ಲಿರುವ ಪ್ರಥಮ ದರ್ಜೆ ಕಾಲೇಜು ಹೊರತುಪಡಿಸಿದರೆ, ವಿದ್ಯಾರ್ಥಿಗಳು ಈ ಕಾಲೇಜನ್ನೇ ಅವಲಂಬಿಸಿದ್ದಾರೆ. ಈ ವರ್ಷ ಇನ್ನೂ ಆರಂಭವಾದ ದಾಖಲಾತಿ ಪ್ರಕ್ರಿಯೆಯು ಈ ಕಾಲೇಜಿನಲ್ಲಿ ಪದವಿಗೆ ಪ್ರವೇಶ ಬಯಸಿದ್ದ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ.

‘ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆ. ಭೈರಪ್ಪ ಕುಲಪತಿಯಾಗಿದ್ದ ಅವಧಿಯಲ್ಲಿ ಈ ಕಾಲೇಜನ್ನು ತೆರೆಯಲಾಗಿತ್ತು. ಮೂವರು ವಿದ್ಯಾರ್ಥಿಗಳೊಂದಿಗೆ ಬಿಬಿಎ ತರಗತಿಗಳು ಪ್ರಾರಂಭವಾಗಿ, ಎರಡನೇ ವರ್ಷ ಬಿ.ಕಾಂ ಹಾಗೂ ಮೂರನೇ ವರ್ಷ ಬಿ.ಎ ಕೋರ್ಸ್‌ ಅನ್ನು ಇಲ್ಲಿ ಶುರು ಮಾಡಲಾಗಿದೆ. ಸರ್ಕಾರದ ಮಾನ್ಯತೆ ಪಡೆಯದೆ ನಡೆಯುತ್ತಿರುವ ಈ ಘಟಕ ಕಾಲೇಜು ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲವನ್ನೇ ಅವಲಂಬಿಸಿದೆ. ಆರ್ಥಿಕವಾಗಿ ಸದೃಢವಾಗಿದ್ದಾಗ ವಿವಿ ಈ ಕಾಲೇಜಿನ ವೆಚ್ಚವನ್ನು ಭರಿಸಿದೆ. ಆದರೆ, ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿವಿಗೆ ಈ ಕಾಲೇಜು ಹೊರೆಯಾಗಿದೆ’ ಎನ್ನುತ್ತವೆ ವಿವಿ ಮೂಲಗಳು.

‘ಅಧಿಕೃತ ಮಾನ್ಯತೆ ಇಲ್ಲದ ಕಾರಣ ಕಾಲೇಜಿನಲ್ಲಿ ಕಾಯಂ ಸಿಬ್ಬಂದಿ ಇಲ್ಲ. 25ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು, ಸಿಬ್ಬಂದಿ ಗೌರವಧನ, ನಿರ್ವಹಣೆ ಸೇರಿ ವರ್ಷಕ್ಕೆ ₹1 ಕೋಟಿಗೂ ಅಧಿಕ ವೆಚ್ಚವಾಗುತ್ತಿದೆ. ವಿದ್ಯಾರ್ಥಿಗಳ ಶುಲ್ಕ ಸೇರಿ ಕಾಲೇಜಿಗೆ ವಾರ್ಷಿಕವಾಗಿ ದೊರೆಯುವ ಆದಾಯ ₹18 ಲಕ್ಷ ದಾಟುವುದಿಲ್ಲ. ಎಂಟು ವರ್ಷಗಳಿಂದ ವಿವಿ ಈ ವೆಚ್ಚವನ್ನು ಭರಿಸುತ್ತಿದ್ದು, ಮಾನ್ಯತೆ ಇಲ್ಲದ ಕಾಲೇಜಿಗೆ ಇಷ್ಟು ವೆಚ್ಚ ಮಾಡಿರುವ ಬಗ್ಗೆ ಆಡಿಟ್‌ನಲ್ಲಿ ವಿವರಣೆ ನೀಡಲು ಈಗ ತಡಕಾಡುತ್ತಿದೆ. ಮಾನ್ಯತೆ ಇಲ್ಲದ ಕಾಲೇಜಿನಿಂದ ಪಡೆದ ಪದವಿಯಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೂ ತೊಡಕಾಗಬಹುದು. ಈ ಬಗ್ಗೆಯೂ ಚರ್ಚೆ ನಡೆಯಬೇಕಾಗಿದೆ’ ಎನ್ನುತ್ತಾರೆ ವಿವಿ ಪ್ರಾಧ್ಯಾಪಕರೊಬ್ಬರು.

‘ವಿವಿ ಕ್ಯಾಂಪಸ್‌ನಲ್ಲಿರುವ ಪದವಿ ಕಾಲೇಜಿಗೆ ಮಾನ್ಯತೆ ಪಡೆಯುವ ಸಂಬಂಧ ಈ ಹಿಂದಿನಿಂದ ಸಾಕಷ್ಟು ಪ್ರಯತ್ನಗಳು ನಡೆದಿವೆ. ಕಾಲೇಜಿಗೆ ಮಾನ್ಯತೆ ನೀಡಿ, ಸರ್ಕಾರವೇ ಇದನ್ನು ವಹಿಸಿಕೊಳ್ಳುವ ಸಂಬಂಧ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಬಳಿ ವಿನಂತಿಸಲಾಗಿದ್ದು, ಅವರು ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಿದ್ದಾರೆ. ವಿಶ್ವವಿದ್ಯಾಲಯದ ಬೇಡಿಕೆಗೆ ಸರ್ಕಾರ ಸ್ಪಂದಿಸುವ ಭರವಸೆ ಇದೆ’ ಎಂದು ಕುಲಪತಿ ಪ್ರೊ. ಪಿ.ಎಲ್.ಧರ್ಮ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ನಡೆಯಲಿದ್ದು, ಪದವಿ ಕಾಲೇಜು ವಿಚಾರ ಪ್ರಮುಖ ಚರ್ಚೆಯ ವಿಷಯವಾಗಿದೆ. ಕಾಲೇಜನ್ನು ಬಂದ್ ಮಾಡುವ ಅಥವಾ ಮುಂದುವರಿಸುವ ಬಗ್ಗೆ ಈ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ಬಡ ಮಕ್ಕಳಿಗೆ ತೊಂದರೆ

ವಿವಿ ಕ್ಯಾಂಪಸ್ ಒಳಗಿರುವ ಪದವಿ ಕಾಲೇಜನ್ನು ಬಂದ್ ಮಾಡಲು ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ವರ್ಷ ಇನ್ನೂ ದಾಖಲಾತಿ ಆರಂಭ ಆಗದಿರುವುದು ಈ ಅನುಮಾನವನ್ನು ದಟ್ಟಗೊಳಿಸಿದೆ. ಸರ್ಕಾರಿ ಕಾಲೇಜಿಗೆ ಬರುವವರು ಹೆಚ್ಚಾಗಿ ಬಡ ಕುಟುಂಬದವರು. ಸರ್ಕಾರಿ ಕಾಲೇಜನ್ನು ಬಂದ್ ಮಾಡಿದರೆ ಬಡ ಮಕ್ಕಳಿಗೆ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ಕಾಲೇಜನ್ನು ಬಂದ್ ಮಾಡಬಾರದು. ವಿವಿಗೆ ಆರ್ಥಿಕ ಚೈತನ್ಯ ಒದಗಿಸುವ ಮೂಲಕ ಸರ್ಕಾರ ಬಡ ಮಕ್ಕಳ ನೆರವಿಗೆ ಬರಬೇಕು. ಅನೇಕ ಸಂಘಟನೆಗಳು ಕಾಲೇಜನ್ನು ಉಳಿಸಲು ಹೋರಾಟ ನಡೆಸುತ್ತಿವೆ. ಎಐಡಿಎಸ್‌ಒ ಕೂಡ ಈ ಬಗ್ಗೆ ಪ್ರಯತ್ನಿಸುತ್ತಿದೆ ಎನ್ನುತ್ತಾರೆ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ವಿನಯ್‌ಚಂದ್ರ.

ಪದವಿ ಕಾಲೇಜಿನ ಬಾಗಿಲು ಮುಚ್ಚುವುದಾಗಿ ನಾವು ಎಲ್ಲಿಯೂ ಹೇಳಿಲ್ಲ. ಆ ಅಧಿಕಾರ ಕುಲಪತಿಗೆ ಇಲ್ಲ. ಕಾಲೇಜಿನ ಪ್ರಸ್ತುತ ಪರಿಸ್ಥಿತಿ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗುತ್ತದೆ.
-ಪ್ರೊ. ಪಿ.ಎಲ್.ಧರ್ಮ, ಕುಲಪತಿ
ಪದವಿ ಕಾಲೇಜಿಗೆ ವಾರ್ಷಿಕವಾಗಿ ₹1 ಕೋಟಿಗೂ ಅಧಿಕ ವೆಚ್ಚವಾಗುತ್ತಿದೆ. ಆರ್ಥಿಕ ಸಂಕಷ್ಟದಿಂದಾಗಿ ಮೂರು ತಿಂಗಳುಗಳಿಂದ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸಲು ಸಾಧ್ಯವಾಗಿಲ್ಲ.
-ರಾಜು ಮೊಗವೀರ, ಕುಲಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT