ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಮೇಯರ್‌ ಸ್ಥಾನಕ್ಕೆ ಮೂವರ ಪೈಪೋಟಿ

ಸುನೀತಾ, ಭರತ್‌, ಮನೋಜ್‌– ಜಾರಿಗೆ ಒಲಿಯಲಿದೆ ಗದ್ದುಗೆ
Published : 12 ಸೆಪ್ಟೆಂಬರ್ 2024, 4:41 IST
Last Updated : 12 ಸೆಪ್ಟೆಂಬರ್ 2024, 4:41 IST
ಫಾಲೋ ಮಾಡಿ
Comments

ಮಂಗಳೂರು: ಪಾಲಿಕೆಯ ಈಗಿನ ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಅವರ ಅವಧಿ ಇದೇ 18ರಂದು ಕೊನೆಯಾಗಲಿದೆ. ಪರಿಶಿಷ್ಟ ಜಾತಿಗೆ ಮೀಸಲಿರುವ ಮುಂದಿನ ಮೇಯರ್‌ ಹುದ್ದೆಯನ್ನು ಅಲಂಕರಿಸಲು ಈಗಿನ ಉಪಮೇಯರ್‌ ಸುನೀತಾ, ಬಿಜೆಪಿ ಸದಸ್ಯರಾದ ಭರತ್‌, ಮನೋಜ್ ಕೋಡಿಕಲ್‌ ನಡುವೆ ಪೈಪೋಟಿ ಏರ್ಪಟ್ಟಿದೆ.

ಪಾಲಿಕೆಯಲ್ಲಿ ಶೇ 50ರಷ್ಟು ಮಹಿಳಾ ಸದಸ್ಯರೇ ಇದ್ದಾರೆ. ಆದರೂ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ನಾಲ್ಕು ವರ್ಷಗಳಲ್ಲಿ ಒಬ್ಬ ಮಹಿಳೆಯೂ ಮೇಯರ್‌ ಹುದ್ದೆಯನ್ನು ಅಲಂಕರಿಸಿಲ್ಲ. ಹಾಗಾಗಿ ಕೊನೆಯ ಅವಧಿಯ ಮೇಯರ್ ಸ್ಥಾನವನ್ನು ಮಹಿಳೆಗೆ ನೀಡಬೇಕು ಎಂಬ ಬೇಡಿಕೆ ಮಹಿಳಾ ಸದಸ್ಯರದು. ಇದಕ್ಕೆ ಪಕ್ಷದ ಮುಖಂಡರು ಒಪ್ಪಿಗೆ ಸೂಚಿಸಿದ್ದೇ ಆದರೆ, ಪಣಂಬೂರು ಬೆಂಗ್ರೆ ವಾರ್ಡ್‌ನ ಸದಸ್ಯೆ ಸುನೀತಾ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಹೆಚ್ಚು. ಮುಂದಿನ ಅವಧಿಯ ಉಪ ಮೇಯರ್‌ ಹುದ್ದೆಯೂ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಿದೆ. ಈಗಾಗಲೇ ಉಪಮೇಯರ್‌ ಆಗಿರು ಸುನೀತಾ  ಅವರನ್ನೇ ಮೇಯರ್‌ ಮಾಡಿದರೆ, ಮೇಯರ್‌ ಹಾಗೂ ಉಪಮೇಯರ್‌ ಎರಡೂ ಹುದ್ದೆಗಳನ್ನು ಮಹಿಳೆಯರಿಗೆ ನೀಡಬೇಕಾಗುತ್ತದೆ. ಇದಕ್ಕೆ ಪಕ್ಷದ ವರಿಷ್ಠರು ಒಪ್ಪದಿದ್ದರೆ ಸುನೀತಾ ಅವರಿಗೆ ಅವಕಾಶ ಕೈತಪ್ಪುವ ಸಾಧ್ಯತೆ ಇದೆ.

ಪಾಲಿಕೆಯು ಮಂಗಳೂರು ನಗರ ಉತ್ತರ ಮತ್ತು ಮಂಗಳೂರು ನಗರದ ದಕ್ಷಿಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಹಂಚಿಹೋಗಿದೆ. ಹಾಗಾಗಿ ಈ ಎರಡೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಾರ್ಡ್‌ಗಳ ಪಾಲಿಕೆ ಸದಸ್ಯರಿಗೆ ಸಮಾನ ಅವಕಾಶ ಸಿಗುತ್ತಿಲ್ಲ ಎಂಬ ಅಸಮಾಧಾನ ನಗರ ಉತ್ತರ ಕ್ಷೇತ್ರದ ವ್ಯಾಪ್ತಿಯ ಕಾರ್ಪೊರೇಟರ್‌ಗಳಲ್ಲಿ ಮನೆ ಮಾಡಿದೆ. ಬಿಜೆಪಿ ಆಳ್ವಿಕೆಯ ನಾಲ್ಕು ಮೇಯರ್‌ಗಳಲ್ಲಿ ಮೂವರು ಮಂಗಳೂರು ದಕ್ಷಿಣ ಕ್ಷೇತ್ರದವರೇ ಆಗಿರುವುದು ಈ ಅಸಮಾಧಾನಕ್ಕೆ ಕಾರಣ.

ಮೊದಲ ಅವಧಿಯಲ್ಲಿ ದಕ್ಷಿಣ ಕ್ಷೇತ್ರದ ಕಂಟೋನ್ಮೆಂಟ್‌ ವಾರ್ಡ್‌ನ ಸದಸ್ಯ ದಿವಾಕರ್‌, ಎರಡನೇ ಅವಧಿಗೆ ಇದೇ ಕ್ಷೇತ್ರದ ಮಂಗಳಾದೇವಿ ವಾರ್ಡ್‌ನ ಸದಸ್ಯ ಪ್ರೇಮಾನಂದ ಶೆಟ್ಟಿ ಅವರು ಮೇಯರ್‌ ಆಗುವ ಅವಕಾಶ ಪಡೆದಿದ್ದರು. ಮೂರನೇ ಅವಧಿಗೆ ನಗರ ಉತ್ತರ ಕ್ಷೇತ್ರದ ಕದ್ರಿ ಪದವು ವಾರ್ಡ್‌ನ ಸದಸ್ಯ ಜಯಾನಂದ ಅಂಚನ್‌ ಮೇಯರ್‌ ಆಗಿ ಆಯ್ಕೆಯಾಗಿದ್ದರು. ದಕ್ಷಿಣ ಕ್ಷೇತ್ರದ ಕೊಡಿಯಾಲ್‌ಬೈಲ್ ವಾರ್ಡ್‌ನ ಸದಸ್ಯ ಸುಧೀರ್‌ ಶೆಟ್ಟಿ ಕಣ್ಣೂರು ನಾಲ್ಕನೇ ಅವಧಿಯ ಮೇಯರ್‌ ಆಗಿದ್ದಾರೆ.

ಪಕ್ಷದ ವರಿಷ್ಠರು ನಗರ ಉತ್ತರ ಮತ್ತು ದಕ್ಷಿಣ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯ ಸದಸ್ಯರಿಗೆ ಸಮಾನ ಅವಕಾಶ ಸಿಗಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇ ಆದರೆ ದೇರೇಬೈಲ್ ಉತ್ತರ ವಾರ್ಡ್‌ನ ಮನೋಜ್ ಕುಮಾರ್‌ ಅವರಿಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ಹೆಚ್ಚು. ಜೆಪ್ಪು ವಾರ್ಡ್‌ನ ಸದಸ್ಯ ಭರತ್ ಕುಮಾರ್ ಎಸ್‌ ಅವರು ಪ್ರಸ್ತುತ ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ. ಪಕ್ಷದ ಮುಖಂಡರ ಕೃಪಾಕಟಾಕ್ಷವಿದ್ದರೆ ಅವರೂ ಮೇಯರ್‌ ಆಗಿ ಆಯ್ಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತವೆ ಬಿಜೆಪಿ ಮೂಲಗಳು.

ಹಿಂದುಳಿವ ವರ್ಗ ಎ ಮಹಿಳೆಗೆ ಮೀಸಲಿರುವ ಉಪಮೇಯರ್‌ ಹುದ್ದೆಗೆ ಬಿಜೆಪಿಯಿಂದ ಅನೇಕ ಆಕಾಂಕ್ಷಿಗಳಿದ್ದಾರೆ. ಜೆಪ್ಪಿನಮೊಗರು ವಾರ್ಡ್‌ನ ಸದಸ್ಯೆ ವೀಣಾಮಂಗಳಾ ಅವರ ಹೆಸರು ಮುಂಚೂಣಿಯಲ್ಲಿದೆ.

ಇದೇ 19ರಂದು ಮೇಯರ್ ಹಾಗೂ ಉಪಮೇಯರ್‌ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಈ ಮೂವರಲ್ಲಿ ಯಾರಿಗೆ ಗದ್ದುಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಭರತ್‌ ಕುಮಾರ್‌
ಭರತ್‌ ಕುಮಾರ್‌
ಮನೋಜ್‌ ಕುಮಾರ್‌
ಮನೋಜ್‌ ಕುಮಾರ್‌

ಮುಂದಿನ ಮೇಯರ್‌ಗೆ ಐದೇ ತಿಂಗಳು ಅಧಿಕಾರ

ಪಾಲಿಕೆಯ ಈಗಿನ ಸದಸ್ಯರ ಆಯ್ಕೆಗೆ ಚುನಾವಣೆಯ ಫಲಿತಾಂಶ 2019ರ ನವೆಂಬರ್‌ನಲ್ಲೇ ಪ್ರಕಟವಾಗಿದ್ದರೂ ಮೀಸಲಾತಿ ಪ್ರಕಟವಾಗುವಾಗ ವಿಳಂಬವಾಗಿತ್ತು. ಮೇಯರ್‌ ಆಯ್ಕೆಗೆ ಚುನಾವಣೆ ನಡೆದದ್ದು 2020ರ ಫೆ. 28ರಂದು. ಹಾಗಾಗಿ ಈಗಿನ ಚುನಾಯಿತ ಸದಸ್ಯರ ಅವಧಿ 2025ರ ಫೆ. 27ಕ್ಕೆ ಕೊನೆಯಾಗಲಿದೆ. ಈಗಿನ ಅವಧಿಯಲ್ಲಿ ಪ್ರೇಮಾನಂದ ಶೆಟ್ಟಿ ಮೇಯರ್‌ ಆಗಿದ್ದ ಸಂದರ್ಭದಲ್ಲಿ ಮುಂದಿನ ಮೇಯರ್‌ ಆಯ್ಕೆಗೆ ಮೀಸಲಾತಿ ಪಟ್ಟಿ ಪ್ರಕಟವಾಗುವಾಗ ಆರು ತಿಂಗಳು ತಡವಾಗಿತ್ತು. ಹಾಗಾಗಿ  ಪ್ರೇಮಾನಂದ ಶೆಟ್ಟಿ ಅವರು ಸುಮಾರು ಒಂದೂವರೆ ವರ್ಷಗಳವರೆಗೆ ಹುದ್ದೆಯಲ್ಲಿ ಮುಂದುವರಿದಿದ್ದರು. ಈಗಿನ ಮೇಯರ್‌ ಸುಧೀರ್‌ ಶೆಟ್ಟಿ ಅವರ ಆಯ್ಕೆಗೆ 2023ರ ಸೆ 9ರಂದು ಚುನಾವಣೆ ನಡೆದಿತ್ತು. ಈ ಅವಧಿಯ ಐದನೇ ಮೇಯರ್‌ ಮತ್ತು ಉಪಮೇಯರ್‌ಗೆ ಕೇವಲ ಐದು ತಿಂಗಳ ಅಧಿಕಾರಾವಧಿ ಸಿಗಲಿದೆ.

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಲ್ಲ

ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಯಾರೂ ಆಯ್ಕೆಯಾಗಿಲ್ಲ. ಹಾಗಾಗಿ ಮೇಯರ್‌ ಹುದ್ದೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅವಕಾಶವೇ ಕಾಂಗ್ರೆಸ್‌ಗೆ ಇಲ್ಲ. ಹಾಗಾಗಿ ಮೇಯರ್‌ ಹುದ್ದೆಗೆ ಅವಿರೋಧ ಆಯ್ಕೆ ನಡೆಯುವುದು ಬಹುತೇಕ ನಿಶ್ಚಿತ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT