ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೇಂದ್ರೀಕೃತ ವ್ಯವಸ್ಥೆ: ನಾಳೆಯಿಂದ ಪರೀಕ್ಷೆ

ಕೋವಿಡ್–19 ಛಾಯೆ: ಮಂಗಳೂರು ವಿಶ್ವವಿದ್ಯಾಲಯ
Last Updated 15 ಸೆಪ್ಟೆಂಬರ್ 2020, 16:31 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ತರಗತಿಯ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಇದೇ 16ರಿಂದ ಆರಂಭಗೊಳ್ಳಲಿದ್ದು, ಕೋವಿಡ್ ಪಿಡುಗಿನ ಕಾರಣ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ನಡೆಯಲಿವೆ.

‘ಕೋವಿಡ್–19 ಕಾರಣ ಸರ್ಕಾರ ಮತ್ತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ)ದ ನಿರ್ದೇಶನದ ಅನುಸಾರ ರಚಿಸಲಾದ ಮಾರ್ಗಸೂಚಿ ಪ್ರಕಾರ ಪದವಿ ಮತ್ತು ಸ್ನಾತಕೋತ್ತರ ಪದವಿಯ 2019-20ನೇ ಸಾಲಿನ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ‌ ಇದೇ 16ರಿಂದ 30ರವರೆಗೆ ಪರೀಕ್ಷೆಗಳು ನಡೆಯಲಿವೆ’ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯ 205 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೋವಿಡ್ ಕಾರಣ ಪರೀಕ್ಷಾ ಕೇಂದ್ರಗಳನ್ನು ಈ ಬಾರಿ ಹೆಚ್ಚಿಸಲಾಗಿದ್ದು, ಮಣಿಪುರದಲ್ಲೂ ಒಂದು ಕೇಂದ್ರ ತೆರೆಯಲಾಗಿದೆ. ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ನವೆಂಬರ್‌ನಲ್ಲಿ ವಿಶೇಷ ಪರೀಕ್ಷೆ ನಡೆಸಲಾಗುವುದು. ಇದು ಪೂರಕ ಅಥವಾ ಪುನರಾವರ್ತಿತ ಪರೀಕ್ಷೆ ಅಲ್ಲ. ವಿಶೇಷ ಪರೀಕ್ಷೆ’ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.

‘ಪರೀಕ್ಷಾ ಕೇಂದ್ರ ಮಾತ್ರವಲ್ಲ, ವಿಚಕ್ಷಣ ದಳವನ್ನೂ ಈ ಬಾರಿ ವಿಕೇಂದ್ರೀಕರಿಸಲಾಗಿದೆ. ಮಂಗಳೂರು ಬದಲಾಗಿ, ಆಯಾ ಜಿಲ್ಲಾ ಕೇಂದ್ರಗಳಿಂದಲೇ ಈ ದಳಗಳು ಹೊರಡಲಿವೆ. ಅಧಿಕಾರಿಗಳು ಪ್ರತಿನಿತ್ಯ ಕರ್ತವ್ಯದ ಬಳಿಕ ತಮ್ಮ ಮನೆಗಳಿಗೆ ವಾಪಸ್ ತೆರಳಬಹುದು’ ಎಂದು ಕುಲಸಚಿವ ಪ್ರೊ.ಪಿ.ಎಲ್.ಧರ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಿಜಿಟಲ್‌ ಮೌಲ್ಯಮಾಪನವನ್ನೂ ಈ ಬಾರಿ ವಿಕೇಂದ್ರೀಕರಣ ಮಾಡಲಾಗಿದೆ. ಮೂರು ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದ್ದು, ಪ್ರಾಧ್ಯಾಪಕರು ಮಂಗಳೂರಿಗೆ ಬರಬೇಕಾಗಿಲ್ಲ’ ಎಂದು ಅವರು ವಿವರಿಸಿದರು. ಈ ಬಾರಿ ಪದವಿಯ 6ನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ಪದವಿ 4 ನೇ ಸೆಮಿಸ್ಟರ್ ಪರೀಕ್ಷೆಗಳು ಮಾತ್ರ ನಡೆಯಲಿವೆ. ಉಳಿದ ಸೆಮಿಸ್ಟರ್‌ ವಿದ್ಯಾರ್ಥಿಗಳು ಮುಂಬಡ್ತಿ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT