ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಮಂಜೂರು ಕೃಷಿ ಮೇಳ: ಸಸಿಗಳ ಖರೀದಿ ಜೋರು

Published 13 ಮೇ 2024, 3:16 IST
Last Updated 13 ಮೇ 2024, 3:16 IST
ಅಕ್ಷರ ಗಾತ್ರ

ಮಂಗಳೂರು: ವಾಮಂಜೂರು ತಿರುವೈಲಿನ ಅಮೃತೇಶ್ವರ ದೇವಸ್ಥಾನ ಮುಂಭಾಗದಲ್ಲಿ ಏರ್ಪಡಿಸಿದ್ದ  ಕೃಷಿ ಮೇಳದ ಬಹುತೇಕ ಮಾರಾಟ ಮಳಿಗೆಗಳು ರಜಾದಿನವಾದ ಭಾನುವಾರವೂ ಖಾಲಿ ಇದ್ದವು. ಆದರೆ, ಸಸಿಗಳನ್ನು ಮಾರಾಟ ಮಾಡುವ ನರ್ಸರಿಗಳ ಬಳಿ ಜನಸಂದಣಿ ಕಂಡು ಬಂತು. 

ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ಹಾಗೂ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ  ಏರ್ಪಡಿಸಿದ್ದ ಈ ಕೃಷಿ ಮೇಳದ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಬಿರು ಬಿಸಿಲಿನಿಂದಾಗಿ ಬಿಕೋ ಎನ್ನುತ್ತಿದ್ದವು.

ಕಲ್ಲಡ್ಕದ ನೇತ್ರಾವತಿ ನರ್ಸರಿ ಹಾಗೂ ಗ್ರೀನ್‌ವರ್ಲ್ಡ್‌ ನರ್ಸರಿಯವರು ತರಹೇವಾರಿ ಸಸಿಗಳನ್ನು ಮಾರಾಟಕ್ಕಿಟ್ಟಿದ್ದರು. ವರ್ಷವಿಡೀ ಫಲ ನೀಡುವ ಸರ್ವಋತು ಹಲಸು, ಕೆಂಪು ಹಲಸು, ಚಂದ್ರ ಬಕ್ಕೆ, ಬಲು ಸಿಹಿಯಾದ ಫಲ ನೀಡುವ ಜೆ– 33 ಹಲಸು, ಮೇಣರಹಿತ ಹಲಸು, ವಿವಿಧ ತಳಿಯ ಮಾವಿನ ಸಸಿಗಳು, ಮ್ಯಾಂಗೋಸ್ಟೀನ್‌, ಜೀಗುಜ್ಜೆ, ರಂಬುಟಾನ್‌, ಮಾವಿನಹಣ್ಣಿನಂತೆ ಉದ್ದನೆಯ ಹಣ್ಣು ನೀಡುವ ಬನಾನ ಸಪೋಟಾ, ಗಿಡದ ತುಂಬಾ ಪುಟಣಿ ಹಣ್ಣುಗಳನ್ನ ನೀಡುವ ಬುಷ್‌ ಆರೆಂಜ್‌, ಥಾಯ್ ಕಿಂಗ್‌ ಸಪೊಟಾ, ಕೆಂಪು ಸೀತಾಫಲ, ವರ್ಷವಿಡೀ ಫಲ ನೀಡುವ ಅಮಟೆಕಾಯಿ, ಲಖನೌ ಪೇರಳೆ, ಬೇವು ಮೊದಲಾದ ಗಿಡಗಳನ್ನು ಮಾರಾಟಕ್ಕಿಡಲಾಗಿತ್ತು. 

ಹಳದಿ, ನಸುಗೆಂಪು, ಗುಲಾಬಿ ಬಣ್ಣದ ಕಸಿ ಕೇಪಳ, ಹಳದಿ, ಬಿಳಿ, ಕಡುಗೆಂಪು, ಕೇಸರಿ, ತಿಳಿ ಗುಲಾಬಿ ಸೇರಿದಂತೆ 15ಕ್ಕೂ ಹೆಚ್ಚು ನಮೂನೆಯ ದಾಸವಾಳ, ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದ್ದ ಜರ್ಬೆರಾ, ಸಂಪಿಗೆ, 20ಕ್ಕೂ ಹೆಚ್ಚು ವಿಧದ ಗುಲಾಬಿ, ಬಗೆ ಬಗೆಯ ಸೇವಂತಿಗೆ ಸೇರಿದಂತೆ ವೈವಿಧ್ಯಮಯ ಆಲಂಕಾರಿಕ ಗಿಡಗಳನ್ನು ಮಹಿಳೆಯರು ಖರೀದಿಸುತ್ತಿದ್ದುದು ಕಂಡುಬಂತು. 

ತರಕಾರಿ ಬೀಜಗಳನ್ನು ಮಾರುವ ಮಳಿಗೆಗಳು ಹಾಗೂ ಕೃಷಿ ಸಲಕರಣೆಗಳ ಮಳಿಗೆಗಳ ಬಳಿಯೂ ತಕ್ಕಮಟ್ಟಿಗೆ ಜನ ಸಂದಣಿ ಇತ್ತು.

ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ದಶಮ ಸಂಭ್ರಮದ ಅಂಗವಾಗಿ ದ.ಕ. ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಆಯ್ದ ಹವ್ಯಾಸಿ ತಂಡಗಳಿಗೆ ಯಕ್ಷಗಾನ ಸ್ಪರ್ಧೆ ನಡೆಯಿತು. ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನಕ್ಕೆ ನೆರವಾದ ಕಲಾಪೋಷಕರನ್ನು ಸನ್ಮಾನಿಸಲಾಯಿತು.

ಹಗ್ಗ ಜಗ್ಗಾಟ ಹಾಗೂ ಭಾರ ಎತ್ತುವ ಸ್ಪರ್ಧೆಗಳು ನಡೆದವು. ಸಂಜೆ ಸಭಾ ಕಾರ್ಯಕ್ರಮ ಹಾಗೂ ಅರೆಹೊಳೆ ಪ್ರತಿಷ್ಠಾನದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 

 ಕೃಷಿ ಮೇಳದಲ್ಲಿ ಸಸಿಗಳ ಖರೀದಿ ಭರಾಟೆ

 ಕೃಷಿ ಮೇಳದಲ್ಲಿ ಸಸಿಗಳ ಖರೀದಿ ಭರಾಟೆ

– ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT