ಶನಿವಾರ, ಫೆಬ್ರವರಿ 22, 2020
19 °C
ಗೋಲಿಬಾರ್‌: 50 ವಿಡಿಯೊ ತುಣುಕು ಹಾಜರುಪಡಿಸಿದ ಪೊಲೀಸರು

ಒಟ್ಟು 203 ಜನರಿಂದ ಸಾಕ್ಷಿ ಸಂಗ್ರಹ: ಜಗದೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದಲ್ಲಿ ಡಿಸೆಂಬರ್‌ 19ರಂದು ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಗುರುವಾರ ಸಾಕ್ಷಿಗಳ ವಿಚಾರಣೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟನಾವಳಿಯ ವಿಡಿಯೊಗಳನ್ನು ಹಾಜರುಪಡಿಸಲು ಮಂಗಳೂರು ಪೊಲೀಸ್ ಆಯುಕ್ತರಿಗೆ ತಿಳಿವಳಿಕೆ ಪತ್ರ ಬರೆಯಲಾಗಿತ್ತು. ಅದರಂತೆ 50 ವಿಡಿಯೊ ದೃಶ್ಯಾವಳಿ ಇರುವ ಪೆನ್‌ಡ್ರೈವ್ ಅನ್ನು ಪೊಲೀಸರು ಹಾಜರುಪಡಿಸಿದ್ದಾರೆ. ತನಿಖಾ ಉದ್ದೇಶದಿಂದ ಪೊಲೀಸರು ವಶಕ್ಕೆ ಪಡೆದಿದ್ದ 20 ಡಿವಿಆರ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರ ಸ್ವೀಕೃತಿಯನ್ನು ಪೊಲೀಸ್ ನೋಡಲ್ ಅಧಿಕಾರಿಯಾಗಿರುವ ಎಸಿಪಿ ಬೆಳ್ಳಿಯಪ್ಪ ಹಾಜರುಪಡಿಸಿದ್ದಾರೆ’ ಎಂದು ತಿಳಿಸಿದರು.

‘ಮ್ಯಾಜಿಸ್ಟೀರಿಯಲ್ ತನಿಖೆಗೆ ಈ ಮೊದಲು 201 ಮಂದಿ ಸಾಕ್ಷಿ ಹಾಜರುಪಡಿಸಿದ್ದರು. ಗುರುವಾರ ಇಬ್ಬರು ಸಾಕ್ಷಿ ಹೇಳಿದ್ದು, ಇದುವರೆಗೆ ಒಟ್ಟು 203 ಮಂದಿಯ ಸಾಕ್ಷಿಗಳನ್ನು ದಾಖಲಿಸಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬರು ಮೊಬೈಲ್ ರೆಕಾರ್ಡಿಂಗ್‌ ಅನ್ನು ಹಾಜರುಪಡಿಸಿದ್ದಾರೆ’ ಎಂದರು.

‘ಇದೇ 24ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಇಲ್ಲಿಯವರೆಗಿನ ತನಿಖೆಯ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಪೂರ್ಣ ವರದಿ ಸಲ್ಲಿಸಲು ಮೂರು ತಿಂಗಳ ಅವಕಾಶವಿದೆ. ಪೊಲೀಸ್ ಇಲಾಖೆಯವರನ್ನು ಇಲ್ಲಿಯವರೆಗೆ ವಿಚಾರಣೆ ಮಾಡಿಲ್ಲ. ಎಲ್ಲ ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಗುರುವಾರ ಕೇವಲ ಇಬ್ಬರು ಹೇಳಿಕೆ ನೀಡಿದ್ದು, ಜನರ ಅನುಕೂಲಕ್ಕಾಗಿ ಇದೇ 19ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು