ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಬಿರುಕು ಬಿಟ್ಟಿದ್ದ ಮರವೂರು ಸೇತುವೆ ದುರಸ್ತಿ ಪೂರ್ಣ, ಸಂಚಾರಕ್ಕೆ ಮುಕ್ತ

ಮರವೂರು ಸೇತುವೆ ದುರಸ್ತಿ ಪೂರ್ಣ: ಯಶಸ್ವಿ ಪರೀಕ್ಷೆ
Last Updated 30 ಜುಲೈ 2021, 6:13 IST
ಅಕ್ಷರ ಗಾತ್ರ

ಮಂಗಳೂರು: ಬಿರುಕು ಬಿಟ್ಟಿದ್ದ ಮರವೂರು ಸೇತುವೆಯ ದುರಸ್ತಿ ಕಾರ್ಯ ಪೂರ್ಣವಾಗಿದೆ. ಗುರುವಾರ ಮಧ್ಯಾಹ್ನ ಭಾರದ ಲಾರಿಗಳನ್ನು ಓಡಿ ಸುವ ಮೂಲಕ ಪರೀಕ್ಷೆ ನಡೆಸಲಾಗಿದ್ದು, ಶುಕ್ರವಾರದಿಂದ ಈ ರಸ್ತೆಯು ವಾಹನ ಗಳ ಸಂಚಾರಕ್ಕೆ ಮುಕ್ತವಾಗಲಿದೆ.

ಜೂನ್‌ 15ರಂದು ಮಂಗಳೂರಿನಿಂದ ಬಜ್ಪೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಟೀಲು ಕಡೆಗೆ ಸಂಪರ್ಕಿಸುವ ಈ ರಸ್ತೆಯ ಮರವೂರು ಸೇತುವೆಯಲ್ಲಿ ಬಿರುಕು ಬಿಟ್ಟಿತ್ತು. ಸೇತುವೆಯು 2.5 ಅಡಿಯಷ್ಟು ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸೇತುವೆಯ ಆ ಬದಿಯಲ್ಲಿರುವ ಬಜ್ಪೆ, ಕಟೀಲಿನ ಜನರು ಮಂಗಳೂರಿಗೆ ಜೋಕಟ್ಟೆ ಮೂಲಕ ಬರಬೇಕಾಗಿತ್ತು.

‘ಕುಸಿದ ಸೇತುವೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ಅದನ್ನು ಮತ್ತೆ ಹಳೆಯ ಸ್ಥಿತಿಗೆ ತರಲಾಗಿದೆ. ಸಮರೋಪಾದಿಯಲ್ಲಿ ಸೇತುವೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಸುಮಾರು 100ಕ್ಕೂ ಅಧಿಕ ಕಾರ್ಮಿಕರು ಹಗಲು ರಾತ್ರಿ ಎನ್ನದೇ ಕಾಮಗಾರಿಯಲ್ಲಿ ತೊಡಗಿದ್ದರು’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ್‌ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಸ್ಟ್ರಕ್‌ ಜಿಯೊಟೆಕ್‌ ಸಂಶೋಧನಾ ಪ್ರಯೋಗಾಲಯದ ವ್ಯವಸ್ಥಾಪಕ ನಿರ್ದೇಶಕ ಆರ್‌.ಕೆ. ಜೈಗೋಪಾಲ್‌ ಅವರ ಸಲಹೆಯಂತೆ ಲೋಕೋಪಯೋಗಿ ಇಲಾಖೆಯು ಈ ಕಾರ್ಯವನ್ನು ಕೈಗೆತ್ತಿಕೊಂಡಿತ್ತು.

ಮುಗರೋಡಿ ಕನ್‌ಸ್ಟ್ರಕ್ಸನ್‌ ಸಂಸ್ಥೆಯು 1 ಸಾವಿರ ಟನ್‌ ತೂಕದ ಹೈಡ್ರೋಲಿಕ್‌ ಜ್ಯಾಕ್‌ ಮೂಲಕ ಕುಸಿದ ಸೇತುವೆಯನ್ನು ಮೇಲಕ್ಕೆತ್ತಿ ಸರಿ ಮಾಡುವ ಕಾಮಗಾರಿ ನಡೆಸಿದೆ. ಈ ಹಿಂದೆ ಹೊನ್ನಾವರ ಸೇತುವೆಯಲ್ಲಿ ಇಂತಹ ತಂತ್ರಜ್ಞಾನ ಬಳಸಲಾಗಿತ್ತು.

ಪರೀಕ್ಷೆಯ ಸಂದರ್ಭದಲ್ಲಿ ಐಆರ್‌ಸಿ ಸದಸ್ಯ, ಸೇತುವೆ ತಜ್ಞ ಜೈಗೋಪಾಲ್‌, ಲೋಕೋಪಯೋಗಿ ಇಲಾಖೆ ಮಂಗಳೂರು ವೃತ್ತದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಗಣೇಶ್‌ ಎಸ್‌., ಕಾರ್ಯನಿರ್ವಾಹಕ ಎಂಜಿನಿಯರ್‌ ಯಶವಂತ್‌ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರಯ್ಯ, ಸಹಾಯಕ ಎಂಜಿನಿಯರ್‌ ರತ್ನಾಕರ, ಮಗರೋಡಿ ಕನ್‌ಸ್ಟ್ರಕ್ಷನ್‌ನ ಸುಧಾಕರ ಡಿ. ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT