ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಚ್ಚನಾಡಿ ಎಸ್‌ಟಿಪಿ– ಮೇಯರ್‌ ಪರಿಶೀಲನೆ

ಎಸ್‌ಟಿಪಿ ನಿರ್ವಹಣೆಗೆ ₹ 1.30 ಕೋಟಿ ಮೊತ್ತದ ಯೋಜನೆ– ಶೀಘ್ರವೇ ಟೆಂಡರ್
Published 28 ನವೆಂಬರ್ 2023, 7:01 IST
Last Updated 28 ನವೆಂಬರ್ 2023, 7:01 IST
ಅಕ್ಷರ ಗಾತ್ರ

ಮಂಗಳೂರು: ‘ಪಚ್ಚನಾಡಿ ವಾರ್ಡ್‌ನ ಮಂಜಲ್ಪಾದೆ ಬಳಿಯ ತ್ಯಾಜ್ಯನೀರು ಶುದ್ಧೀಕರಣ ಘಟಕದ (ಎಸ್‌ಟಿಪಿ) ನಿರ್ವಹಣೆಗೆ ₹ 1.30 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದಕ್ಕೆ ಶಿಘ್ರವೇ ಟೆಂಡರ್‌ ಕರೆಯಲಿದ್ದೇವೆ’ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ತಿಳಿಸಿದರು.

ಈ ಎಸ್‌ಟಿಪಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ಒಂದು ವರ್ಷದ ಮಟ್ಟಿಗೆ ಈ ಎಸ್‌ಟಿಪಿಯ ಯಂತ್ರಗಳ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳ ನಿರ್ವಹಣೆಗೆ ಹೊಸ ಏಜೆನ್ಸಿಗೆ ವಹಿಸಲಾಗುತ್ತದೆ. ಇದಕ್ಕೆ ಬೇಕಾಗುವ ರಾಸಾಯನಿಕ ಪೂರೈಸಲಿದ್ದಾರೆ. ಮೆಕ್ಯಾನಿಕಲ್‌ ಹಾಗೂ ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳನ್ನು ಅವರೇ ನೇಮಿಸಲಿದ್ದಾರೆ’ ಎಂದರು.

‘ಪಚ್ಚನಾಡಿಯ ಎಸ್‌ಟಿಪಿಯ ನೀರನ್ನು ಶುದ್ಧೀಕರಿಸದೆಯೇ ಫಲ್ಗುಣಿ ನದಿಗೆ ಬಿಡುತ್ತಾರೆ ಎಂಬ ಆರೋಪವೂ ಕೇಳಿಬಂದಿತ್ತು. ಹಾಗಾಗಿ ಈ ಎಸ್‌ಟಿಪಿಯನ್ನು ಪರಿಶೀಲಿಸಿದ್ದೇನೆ’ ಎಂದರು.

‘ಪಚ್ಚನಾಡಿಯ ಎಸ್‌ಟಿಪಿಯಲ್ಲಿ ನಿತ್ಯ 85 ಲಕ್ಷ ಲೀ ತ್ಯಾಜ್ಯ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಇಲ್ಲಿ ಎರಡು ಹಂತಗಳಲ್ಲಿ ಶುದ್ಧೀಕರಣಗೊಂಡ ನೀರನ್ನು ಪಿಲಿಕುಳದಲ್ಲಿ ಮೂರನೇ ಹಂತದಲ್ಲಿ ಶುದ್ಧೀಕರಣಕ್ಕೆ ಒಳಪಡಿಸಲಾಗುತ್ತದೆ. ಪಿಲಿಕುಳದ ತೃತೀಯ ಹಂತದ ಶುದ್ಧೀಕರಣ ಘಟಕವು (ಟಿಟಿಪಿ) ದಿನವೊಂದಕ್ಕೆ 60 ಲಕ್ಷ ಲೀ ನೀರನ್ನು ಮಾತ್ರ ಶುದ್ಧೀಕರಿಸಬಲ್ಲುದು. ಆ ನೀರನ್ನು ಮರುಬಳಕೆ ಮಾಡಲಾಗುತ್ತದೆ. ದ್ವಿತೀಯ ಹಂತದವರೆಗೆ ಶುದ್ಧೀಕರಣಗೊಂಡ 25 ಲಕ್ಷ ಲೀ ನೀರನ್ನು ಫಲ್ಗುಣಿ ನದಿಗೆ ಬಿಡಬೇಕಾಗುತ್ತದೆ’ ಎಂದು ವಿವರಿಸಿದರು. 

‘ದ್ವಿತೀಯ ಹಂತದಲ್ಲಿ ಶುದ್ಧೀಕರಣಗೊಂಡ  ನೀರನ್ನು ಗುರುತ್ವಾಕರ್ಷನಾ ಬಲದಿಂದ ಫಲ್ಗುಣಿ ನದಿಗೆ ಹರಿಸಲು ₹ 2.75 ಕೋಟಿ ವೆಚ್ಚದಲ್ಲಿ ಕೊಳವೆ ಅಳವಡಿಸಿದ್ದೇವೆ. ಆದರೆ, ಇಲ್ಲಿ ಶುದ್ಧೀಕರಣಗೊಂಡ ಎಲ್ಲ ನೀರನ್ನು ಗುರುತ್ವಾಕರ್ಷಣ ಬಲದಲ್ಲಿ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ₹ 50 ಲಕ್ಷ ವೆಚ್ಚದಲ್ಲಿ 60 ಅಶ್ವಶಕ್ತಿಯ ಎರಡು  ಪಂಪ್‌ಗಳನ್ನು ಅಳವಡಿಸಲು ಕ್ರಮಕೈಗೊಂಡಿದ್ದೇವೆ. ಅವುಗಳನ್ನು ಅಳವಡಿಸಿದ ಬಳಿಕ, ದ್ವಿತೀಯ ಹಂತದವರೆಗೆ ಶುದ್ಧೀಕರಣಗೊಂಡ ನೀರನ್ನು ಫಲ್ಗುಣಿ ನದಿಯ ಅಣೆಕಟ್ಟಿನ ಕೆಳ ಭಾಗಕ್ಕೆ ಬಿಡಲಾಗುತ್ತದೆ’ ಎಂದರು.

‘ಈ ಎಸ್‌ಟಿಪಿಯಲ್ಲಿ ಶುದ್ಧೀಕರಣಗೊಂಡ ಬಳಿಕವೂ ನೀರಿನ ಗುಣಮಟ್ಟ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ ಮಿತಿಯಲ್ಲಿ ಇಲ್ಲ. ಹಾಗಾಗಿ ಎಸ್‌ಟಿಪಿಯನ್ನು ಉನ್ನತೀಕರಣ ಮಾಡಬೇಕಿದೆ. ಹಸಿರು ನ್ಯಾಯ ಮಂಡಳಿ ಆದೇಶದಂತೆ ಸರ್ಕಾರದಿಂದ ಇದಕ್ಕೆ ಅನುದಾನ ಸಿಗಲಿದೆ. ಅದನ್ನು ಬಳಸಿ ಉನ್ನತೀಕರಣಕ್ಕೆ ಸಮಗ್ರ ಯೋಜನ ವರದಿ ( ಡಿಪಿಆರ್‌) ತಯಾರಿಸುತ್ತೇವೆ. ಪಾಲಿಕೆಯ ವ್ಯಾಪ್ತಿಯ ಎಲ್ಲ ಪ್ರದೇಶಗಳ ತ್ಯಾಜ್ಯನೀರು ಶುದ್ಧೀಕರಣ ಸಮಸ್ಯೆ ನೀಗಿಸಲು ಕ್ರಮವಹಿಸುತ್ತೇವೆ’ ಎಂದರು. 

ಸ್ಥಳೀಯ ಪಾಲಿಕೆ ಸದಸ್ಯೆ ಸಂಗೀತಾ ಆರ್.ನಾಯಕ್‌, ‘ಪಚ್ಚನಾಡಿಯ ಮಂಜಲ್ಪಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರನ್ನು ಹಳ್ಳಕ್ಕೆ ಬಿಡುತ್ತಾರೆ. ಫಲ್ಗುಣಿ ನದಿಗೆ ಸೇರಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಬಳಸುವ ನೀರಿನ ಮೂಲವನ್ನು ಸೇರುತ್ತಿದೆ ಎಂಬ ದೂರು ಮೊದಲಿನಿಂದಲೂ ಇದೆ. ಇದೇ ಪ್ರದೇಶದಲ್ಲಿ ಹುಟ್ಟಿ ಬೆಳೆದ ನಾನು ಇದನ್ನು ಅಲ್ಲಗಳೆಯುವುದಿಲ್ಲ. ಪಾಲಿಕೆ ಸದಸ್ಯೆಯಾದ ಬಳಿಕ ಈ ಸಮಸ್ಯೆ ನೀಗಿಸಲು ಕ್ರಮವಹಿಸಿದ್ದೇನೆ‘ ಎಂದರು.

‘ಈ ಘಟಕವನ್ನು ನಿರ್ವಹಿಸುತ್ತಿದ್ದ ಏಜೆನ್ಸಿ ಬದಲಿಸಿದ್ದೇವೆ.  ಇಲ್ಲಿನ ಕೆಲವು ಎರೇಟರ್‌ಗಳು ಹಾಗೂ ಪಂಪ್‌ಗಳು ಕೆಲಸ ಮಾಡುತ್ತಿರಲಿಲ್ಲ. ಅವುಗಳನ್ನು ಸರಿಪಡಿಸಲಾಗಿದೆ.’ ಎಂದರು. ಪಟ್ಟಣ ಸುಧಾರಣೆ ಸ್ಥಾಯಿ ಸಮಿತಿ ಲೋಹಿತ್ ಅಮೀನ್‌ ಜೊತೆಯಲ್ಲಿದ್ದರು.

ಅಂಕಿ ಅಂಶ

  • 87.50 ಲಕ್ಷ ಲೀ- ಪಚ್ಚನಾಡಿ ಎಸ್‌ಟಿಪಿಯ ಶುದ್ಧೀಕರಣ ಸಾಮರ್ಥ್ಯ (ದಿನವೊಂದಕ್ಕೆ)

  • 60 ಲಕ್ಷ ಲೀ- ಪಿಲಿಕುಳ ಟಿಟಿಪಿಯ ಶುದ್ಧೀಕರಣ ಸಾಮರ್ಥ್ಯ (ದಿನವೊಂದಕ್ಕೆ)

  • 25 ಲಕ್ಷ ಲೀ-ಫಲ್ಗುಣಿ ನದಿಯನ್ನು ಸೇರುವ ನೀರು (ದ್ವಿತೀಯ ಹಂತದ ಶುದ್ಧೀಕರಣದ ಬಳಿಕ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT